
ಸಿದ್ದಾಪುರ: ಹಿಂದೂ ಸಂಗಮ ಕಾರ್ಯಕ್ರಮಗಳಿಂದ ಯಾವುದೇ ಅಹಿತಕ ಘಟನೆ ನಡೆಯದಿದ್ದರೂ, ಸಂಗಮ ತಡೆಯುವ ಯತ್ನವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಮಹೇಶ್ ಕಡಗದಾಳು ಅಸಮಧಾನ ವ್ಯಕ್ತಪಡಿಸಿದರು.
ಸಿದ್ದಾಪುರದ ಸ್ವರ್ಣ ಮಾಲಾ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶತಾಬ್ದಿ ಅಂಗವಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಹಿಂದೂ ಸಂಗಮ ನಡೆಯುತ್ತಿದೆ. ಆದರೆ ಹಿಂದೂ ಸಂಗಮವನ್ನು ತಡೆಯುವ ಯತ್ನ ನಡೆಯುತ್ತಿದೆ. ಹಿಂದುಗಳನ್ನು ಜಾತಿಗಳ ಹೆಸರಿನಲ್ಲಿ ಬೇರ್ಪಡಿಸುವ ಮೂಲಕ ಹಿಂದುಗಳ ಒಗ್ಗಟ್ಟನ್ನು ಛಿದ್ರಗೊಳಿಸುವ ಷಡ್ಯಂತರಕ್ಕೆ ಹಿಂದೂಗಳು ಬಲಿಯಾಗುತ್ತಿದ್ದಾರೆ. ಹಿಂದೂ ಸಮಾಜ ಒಗ್ಗಟ್ಟಾಗಬೇಕು ಎಂದರು.
ಸೇವಾ ಭಾರತೀಯ ಜಿಲ್ಲಾ ಸಂಚಾಲಕರಾದ ಟಿ.ಸಿ ಚಂದ್ರನ್ ಮಾತನಾಡಿ, ಹಿಂದೂಗಳಲ್ಲಿ ಹಿಂದುತ್ವ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತಿ ಮಂಡಲಗಳಲ್ಲಿ ಹಿಂದೂ ಸಂಗಮ ಆಯೋಜಿಸಲಾಗುತ್ತಿದೆ. ಹಿಂದೂಗಳು ಒಗ್ಗಟ್ಟಾಗಿ ಸದೃಢ ಭಾರತವನ್ನು ಕಟ್ಟಬೇಕು ಎಂದರು.
ಪೊನ್ನಂಪೇಟೆ ಶಾರದಾಶ್ರಮದ ಭೂನಾಥ ಸ್ವಾಮಿಜಿ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ರೂಪೇಶ್, ಡಿಜಿತ್, ಪ್ರಮುಖರಾದ ಸುರೇಶ್ ನೆಲ್ಲಿಕಲ್, ಅನಿಲ್ ಹಾಜರಿದ್ದರು.
ಹಿಂದೂಸಂಗಮ ಕಾರ್ಯಕ್ರಮದ ಅಂಗವಾಗಿ ಕೇಸರಿ ಶಲ್ಯ, ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಕಳಶ ಹಿಡಿದು ಹಾಗೂ ವಿರಾಜಪೇಟೆ ನಾಟ್ಯಾಂಜಲಿ ಭಜನೆಕುಣಿತ ತಂಡದೊಂದಿಗೆ ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಚಂಡೆ ಮೇಳಗಳೊಂದಿಗೆ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ನಡೆಸಿದರು. ಸಿದ್ದಾಪುರ ಸುತ್ತಮುತ್ತಲ ಭಾಗದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.