ADVERTISEMENT

8ರಿಂದ ಹೋಂಸ್ಟೇ, ರೆಸಾರ್ಟ್‌ ಕಾರ್ಯಾರಂಭ

ಕೊಡಗು ಪ್ರವಾಸೋದ್ಯಮಕ್ಕೆ ಏಕರೀತಿಯ ಮಾರ್ಗಸೂಚಿಗಳು

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 11:36 IST
Last Updated 3 ಜೂನ್ 2020, 11:36 IST
ಪ್ರತಿ ವರ್ಷ ಮಳೆಗಾಲದಲ್ಲಿ ರಾಜಾಸೀಟ್‌ನಲ್ಲಿ ಕಂಡುಬರುತ್ತಿದ್ದ ಪ್ರವಾಸಿಗರ ದಂಡು (ಸಂಗ್ರಹ ಚಿತ್ರ)
ಪ್ರತಿ ವರ್ಷ ಮಳೆಗಾಲದಲ್ಲಿ ರಾಜಾಸೀಟ್‌ನಲ್ಲಿ ಕಂಡುಬರುತ್ತಿದ್ದ ಪ್ರವಾಸಿಗರ ದಂಡು (ಸಂಗ್ರಹ ಚಿತ್ರ)   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹೋಟೆಲ್‌, ರೆಸ್ಟೋರೆಂಟ್, ರೆಸಾರ್ಟ್, ಲಾಡ್ಜ್ ಹಾಗೂ ಹೋಂಸ್ಟೇಗಳನ್ನು ಜೂನ್‌ 8ರಿಂದ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ.

ಕಳೆದ ಮೂರು ತಿಂಗಳಿಂದ ಪ್ರವಾಸೋದ್ಯಮವು ಬಂದ್‌ ಆಗಿದ್ದು. ಕಾರ್ಯಾರಂಭಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ, ಸಮರ್ಪಕ ಮಾರ್ಗ ಸೂಚಿಗಳನ್ನು ಅಳವಡಿಸಿಕೊಂಡು ಪ್ರವಾಸೋದ್ಯಮ ವಹಿವಾಟು ಪ್ರಾರಂಭಿಸಲು ಪ್ರವಾಸೋದ್ಯಮ ರಂಗದಲ್ಲಿ ಸಕ್ರಿಯವಾಗಿರುವ ವಿವಿಧ ಸಂಸ್ಥೆಗಳು ಒಮ್ಮತದ ತೀರ್ಮಾನಕ್ಕೆ ಬಂದಿವೆ.

ಹೋಟೆಲ್‌, ರೆಸಾರ್ಟ್, ರೆಸ್ಟೋರೆಂಟ್, ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ, ಟ್ರ್ಯಾವೆಲ್‌ ಮತ್ತು ಟೂರ್ ಅಸೋಸಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ ಅವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು ಕೊರೊನಾ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕಾದ ಸಲಹೆಗಳನ್ನು ನೀಡಿದ್ದಾರೆ.

ADVERTISEMENT

ನಿಯಮಗಳು ಏನೇನು?

ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಬೇಕು. ಬರುವ ಪ್ರವಾಸಿಗರು ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತಿ ಕೋಣೆಯನ್ನೂ ಸ್ಯಾನಿಟೈಸ್ ಮಾಡಬೇಕು. ಸ್ವಾಗತ, ಅಡುಗೆ ಕೋಣೆ, ಡೈನಿಂಗ್‍ಹಾಲ್, ಅತಿಥಿಗಳ ಕೊಠಡಿಗಳಲ್ಲಿ ಸ್ಯಾನಿಟೈಜರ್ ಇಡಬೇಕು ಎಂದು ಸಲಹೆ ನೀಡಲಾಗಿದೆ.

ಕೊಠಡಿಯ ಬೆಡ್‍ಶೀಟ್, ಇತರೆ ಬಟ್ಟೆಗಳನ್ನು ಅಂಗೀಕೃತ ಡಿಟರ್ಜೆಂಟ್‌ಗಳನ್ನು ಬಳಸಿಯೇ ಒಗೆಯಬೇಕು. ಊಟ ಬಡಿಸುವ ಸಂದರ್ಭ ನೌಕರರು ಮುಖಗವಸು, ಕೈಗವಸು, ತಲೆಗವಸು ಹಾಕಿರಬೇಕು. ಅತಿಥಿಗಳಿಗೆ ಸೇವಾ ಅಗತ್ಯಕ್ಕೆ ನೌಕರರು ಸದಾ ಲಭ್ಯವಿರಬೇಕು. ಪ್ರವಾಸಿ ಬಂದದ್ದು ಎಲ್ಲಿಂದ ಎಂಬ ಬಗ್ಗೆ ಪ್ರಯಾಣದ ಸಮಗ್ರ ವಿವರವನ್ನು ದಾಖಲು ಮಾಡಬೇಕು. ಉಗುಳುವುದನ್ನು ಜಿಲ್ಲೆಯಾದ್ಯಂತ ಕಡ್ಡಾಯವಾಗಿ ನಿಷೇಧಿಸಿದ ಆದೇಶವನ್ನು ಪಾಲಿಸುವ ನಾಮಫಲಕಗಳನ್ನು ವಾಸ್ತವ್ಯ ಜಾಗದ ಆವರಣದಲ್ಲಿ ಹಾಕಬೇಕು ಎಂದು ಸಲಹೆ ನೀಡಲಾಗಿದೆ.

ಪರಿಸರ, ನದಿ ಮಾಲಿನ್ಯವಾಗದಂತೆ ಗಮನಹರಿಸಲೇಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಸದಬುಟ್ಟಿಗಳನ್ನುಅಳವಡಿಸಬೇಕು. ಜಿಲ್ಲೆಯಾದ್ಯಂತ ಏಕರೀತಿಯ ಪ್ರವಾಸೋದ್ಯಮ ಮಾರ್ಗಸೂಚಿಯನ್ನು ಸಂಸ್ಥೆಗಳು ಜಂಟಿಯಾಗಿ ಜಾರಿಗೊಳಿಸಬೇಕು. ಪ್ರವಾಸಿಗರು ಸುರಕ್ಷತಾ ನಿಯಮ ಪಾಲಿಸುವ ನಿಟ್ಟಿನಲ್ಲಿ ಮಾಹಿತಿ ಫಲಕ ಅಲ್ಲಲ್ಲಿ ಅಳವಡಿಸಬೇಕು. ಪ್ರತಿ ಲಾಡ್ಜ್, ರೆಸಾರ್ಟ್ ಹೋಂಸ್ಟೇಗಳಲ್ಲಿ ಸುಸಜ್ಜಿತ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿರಬೇಕು. ತುರ್ತು ಸಂದರ್ಭದಲ್ಲಿ ಲಭ್ಯವಿರುವ ವೈದ್ಯರ ಬಗ್ಗೆ ಕಡ್ಡಾಯವಾಗಿ ಮಾಹಿತಿ ಹೊಂದಿರಬೇಕು ಎಂದು ಹೇಳಲಾಗಿದೆ.

ಗುಣಮಟ್ಟ ಹಾಗೂ ಪೌಷ್ಟಿಕಾಂಶದ ಆಹಾರಕ್ಕೆ ಆದ್ಯತೆ ನೀಡಬೇಕು. ಸಿ.ಸಿ ಟಿವಿ ಕ್ಯಾಮೆರಾವನ್ನು ಅತಿಥಿ ಗ್ರಹದ ಬಾಗಿಲ್ಲಲ್ಲಿ ಮಾತ್ರವಲ್ಲದೆ ಹೊರಭಾಗದ ಚಟುವಟಿಕಾ ಪ್ರದೇಶಗಳಲ್ಲೂ ಅಳವಡಿಸಬೇಕು. ಮದ್ಯದ ಬಾಟಲ್‍ಗಳು ಹಾಗೂ ಕಸವನ್ನು ರಸ್ತೆ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಬಿಸಾಕದಂತೆ ಪ್ರವಾಸಿಗರ ಗಮನ ಸೆಳೆಯಬೇಕು ಅಲ್ಲದೆ ಈ ಬಗ್ಗೆ ನಾಮಫಲಕವನ್ನೂ ಅಳವಡಿಸಬೇಕು ಎಂದು ಮಾರ್ಗಸೂಚಿ ನೀಡಲಾಗಿದೆ.

ಎಲ್ಲ ಹೋಂಸ್ಟೇಗಳಲ್ಲೂ ವಾಹನ ಚಾಲಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಬೇಕು. ರೆಸಾರ್ಟ್, ಅತಿಥಿ ಗೃಹಗಳು ಹಾಗೂ ಹೋಂಸ್ಟೇಗಳು ಅತಿಥಿಗಳಿಗೆ ಏಕ ರೀತಿಯ ಹಲವು ನಿಯಮಗಳನ್ನು ಜಾರಿಗೊಳಿಸಿ, ಅತಿಥಿಗಳು ಬರುವ ಮೊದಲೇ ವಾಟ್ಸ್‌ಆ್ಯಪ್‌ ಅಥವಾ ಇಮೇಲ್ ಮೂಲಕ ಅವರಿಗೆ ಕಳುಹಿಸಬೇಕು ಎಂದು ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.