ADVERTISEMENT

ಕುಶಾಲನಗರ: ₹41 ಕೋಟಿ ವೆಚ್ಚದ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಚಾಲನೆ

ನೂತನ ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟನೆಯಲ್ಲಿ ಶಾಸಕ ಡಾ.ಮಂತರ್ ಗೌಡ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 6:14 IST
Last Updated 9 ಜುಲೈ 2025, 6:14 IST
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಶಾಕಿರಣ ದೃಷ್ಟಿಕೇಂದ್ರವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಡಿಎಚ್ಒ ಡಾ.ಸತೀಶ್ ಕುಮಾರ್, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಆನಂದ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಇದ್ದಾರೆ
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಶಾಕಿರಣ ದೃಷ್ಟಿಕೇಂದ್ರವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಡಿಎಚ್ಒ ಡಾ.ಸತೀಶ್ ಕುಮಾರ್, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಆನಂದ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಇದ್ದಾರೆ   

ಕುಶಾಲನಗರ: ತಾಲ್ಲೂಕು ಕೇಂದ್ರ ಕುಶಾಲನಗರಕ್ಕೆ ಮಂಜೂರಾಗಿರುವ ನೂರು ಹಾಸಿಗೆಯ ತಾಲ್ಲೂಕು ಆಸ್ಪತ್ರೆಯನ್ನು ₹41 ಕೋಟಿ ವೆಚ್ಚದಲ್ಲಿ, ನಾಲ್ಕು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಆಶಾಕಿರಣ ದೃಷ್ಟಿಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 1 ಕೋಟಿ ಜನರಿಗೆ ದೃಷ್ಟಿ ಸಮಸ್ಯೆ ಇದೆ. 5 ವರ್ಷದಿಂದ 90 ವರ್ಷದವರೆಗೆ ಕಣ್ಣಿನ ಸಮಸ್ಯೆ ಕಂಡುಬರುತ್ತಿದೆ. ಅಂಧತ್ವ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಆಶಾಕಿರಣ ದೃಷ್ಟಿ ಕೇಂದ್ರ ಸ್ಥಾಪಿಸಲಾಗಿದೆ. ಪ್ರತಿ ಮನೆಗೆ ಈ ಸೇವೆ ತಲುಪಿಸಬೇಕು. ಉಚಿತವಾಗಿ ಪರೀಕ್ಷೆ ಮಾಡಿ ಕನ್ನಡಕವನ್ನು ಕೊಡಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯತೆ ಕಂಡುಬಂದರೆ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು ಎಂದರು.

ADVERTISEMENT

ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ವಿವಿಧ ಕಾಮಗಾರಿಗಳಿಗೆ ₹82 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಮಾತನಾಡಿ, ಆಶಾಕಿರಣ ಯೋಜನೆ ಸರ್ಕಾರದ ಕನಸಿನ ಯೋಜನೆಯಾಗಿದೆ. ಬಡವರಿಗೆ, ಜನಸಾಮಾನ್ಯರಿಗೆ ಕಣ್ಣಿನ‌ ತೊಂದರೆಗೆ ಉಚಿತ ಚಿಕಿತ್ಸೆ ನೀಡಿ ಕನ್ನಡಕ ಕೊಡಲಾಗುತ್ತಿದೆ. ರಾಜ್ಯದಾದ್ಯಂತ ಹಾಗೂ ಜಿಲ್ಲೆಯಲ್ಲೂ ಈ ಯೋಜನೆ ಅನುಷ್ಠಾನಗೊಂಡಿದೆ. ಕಳೆದ ವರ್ಷ ಆರು ಸಾವಿರ ಜನರಿಗೆ ತಪಾಸಣೆ ಮಾಡಲಾಗಿತ್ತು. ಈ ವರ್ಷ ಕೂಡ ತಪಾಸಣೆ ಮಾಡಲಾಗುತ್ತಿದ್ದು, ಇದುವರೆಗೆ 1,220 ಮಂದಿಗೆ ಕನ್ನಡಕ ನೀಡಲಾಗಿದೆ ಎಂದರು.

ಕಣ್ಣಿನ ಸಮಸ್ಯೆಯಿಂದ ಬಳಲಬಾರದು. ಬಡವರಿಗೆ ಈ ಸೇವೆ ದೊರೆಯಬೇಕು ಎಂಬುದು ಸರ್ಕಾರದ ಆಶಯ ಎಂದರು.

ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಮಾತನಾಡಿ, ಹೃದಯಾಘಾತಕ್ಕೆ ತುತ್ತಾದ ವ್ಯಕ್ತಿ ಮೈಸೂರು, ಬೆಂಗಳೂರು ಆಸ್ಪತ್ರೆಗೆ ಹೋಗುವ ಮುಂಚೆ ತುರ್ತು ಚಿಕಿತ್ಸೆ ನೀಡಿಲು ಪ್ರಥಮವಾಗಿ ಕುಶಾಲನಗರ ಆಸ್ಪತ್ರೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಸೌಲಭ್ಯ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದರು.

ಕೊಡಗು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಆನಂದ್, ಆರೋಗ್ಯರಕ್ಷಾ ಸಮಿತಿ ಸದಸ್ಯರಾದ ದಾಮೋದರ್, ಕೂಡಿಗೆ ಟಿ.ಪಿ.ಹಮೀದ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಆರೋಗ್ಯ ಇಲಾಖೆಯ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಸಮುದಾಯ‌ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಎಂ.ಎನ್.ಮಧುಸೂದನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.