ADVERTISEMENT

ಕುಶಾಲನಗರ | ಆಸ್ಪತ್ರೆ ಕಟ್ಟಡ ಅತಿಕ್ರಮಣ: ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 6:06 IST
Last Updated 6 ಜನವರಿ 2024, 6:06 IST
ಕುಶಾಲನಗರ ಸಮೀಪದ ಕೂಡಿಗೆ ಗ್ರಾಮ ಪಂಚಾಯತಿ ವತಿಯಿಂದ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಅಧ್ಯಕ್ಷ ಗಿರೀಶ್ ಮಾತನಾಡಿದರು. ನೋಡೆಲ್ ಅಧಿಕಾರಿ ಯಾದವ್ ಬಾಬು, ಉಪಾಧ್ಯಕ್ಷೆ ಜಯಶ್ರೀ ಭಾಗವಹಿಸಿದ್ದರು.
ಕುಶಾಲನಗರ ಸಮೀಪದ ಕೂಡಿಗೆ ಗ್ರಾಮ ಪಂಚಾಯತಿ ವತಿಯಿಂದ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಅಧ್ಯಕ್ಷ ಗಿರೀಶ್ ಮಾತನಾಡಿದರು. ನೋಡೆಲ್ ಅಧಿಕಾರಿ ಯಾದವ್ ಬಾಬು, ಉಪಾಧ್ಯಕ್ಷೆ ಜಯಶ್ರೀ ಭಾಗವಹಿಸಿದ್ದರು.   

ಕುಶಾಲನಗರ: ಮದಲಾಪುರ ಗ್ರಾಮದಲ್ಲಿ ನಿರ್ಮಿಸಿರುವ ಉಪ ಅರೋಗ್ಯ ಕೇಂದ್ರದ ಕಟ್ಟಡವನ್ನು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ್ದು, ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಕೂಡಿಗೆ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.  ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪ ಅರೋಗ್ಯ ಕೇಂದ್ರದ ಕಟ್ಟಡಕ್ಕೆ ಸಂಬಂಧಿಸಿದಂತೆ ಗಂಭೀರ ಚರ್ಚೆ ನಡೆಯಿತು. ವ್ಯಕ್ತಿಯೊಬ್ಬರು ಕಟ್ಟಡ ಅತಿಕ್ರಮಿಸಿದ್ದು, ತೆರವುಗೊಳಿಸಬೇಕು ಎಂದು ಮದಲಾಪುರ, ಬ್ಯಾಡಗೊಟ್ಟ, ಮಲ್ಲೇನಹಳ್ಳಿ, ಹುದುಗೂರು ಗ್ರಾಮಸ್ಥರು ಒತ್ತಾಯಿಸಿದರು. ವಿದ್ಯುತ್ ಸಂಪರ್ಕ ಪಡೆಯಲು ವ್ಯಕ್ತಿಗೆ ಪಂಚಾಯಿತಿಯಿಂದ ನಿರಾಕ್ಷೇಪಣ ಪತ್ರವನ್ನು ನೀಡಿರುವ ಅಭಿವೃದ್ಧಿ ಅಧಿಕಾರಿ ಮಂಜುಳಾ ಕ್ರಮ‌ ಖಂಡಿಸಿ, ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಪೈಸಾರಿ ಜಾಗ ಸರ್ವೆ ನಂಬರ್‌ 1 ರಲ್ಲಿ 4.27 ಎಕರೆ ಊರುಗಪ್ಪೆ ಜಾಗ ಒತ್ತುವರಿ ಆಗದಂತೆ ಸಮರ್ಪಕವಾದ ದಾಖಲೆಗಳನ್ನು ಸಂಗ್ರಹಿಸಿ ಸರ್ವೆ ಮಾಡಿಸಿ ಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಕಂದಾಯ ಅಧಿಕಾರಿ ಸಂತೋಷ್,  10 ದಿನಗಳ ಒಳಗೆ ಸರ್ವೆ ನಡೆಸಿ ಜಾಗವನ್ನು ಗುರುತಿಸಲಾಗುವುದು ಎಂದು ಭರವಸೆ ನೀಡಿದರು. 9 ತಿಂಗಳಿಂದ ನೀರು ಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ ವ್ಯಕ್ತಿಗೆ ಇದುವರೆಗೂ ಸಂಬಳವನ್ನು ನೀಡಿಲ್ಲ ಎಂದು ಸುನಿಲ್ ರಾವ್, ರಾಜ, ಮಾದಪ್ಪ ದೂರಿದರು.

ಗ್ರಾಮ ಪಂಚಾಯಿತಿ ಹಣವನ್ನು ಕರ ವಸೂಲಿಗಾರ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಯಾವುದೇ ಕ್ರಮವನ್ನು ತಗೆದುಕೊಂಡಿಲ್ಲ ಎಂದು ಬಿ.ಡಿ.ಅಣ್ಣಯ್ಯ ಪ್ರಶ್ನಿಸಿದರು.  ಅಭಿವೃದ್ಧಿ ಅಧಿಕಾರಿ ಮಂಜುಳಾ ಇದೀಗ ಹಣವನ್ನು ಮರು ವಸೂಲಿ ಮಾಡಲಾಗಿದೆ ಎಂದು ಬೀದಿ ನಾಯಿಗಳ ಹಾವಳಿ, ಮಾಂಸದ ಅಂಗಡಿಗಳಲ್ಲಿ ಇಂಗು ಗುಂಡಿ‌ ನಿರ್ಮಾಣ, ಹಾರಂಗಿ‌ ನದಿಗೆ ಹರಿಯುವ ತ್ಯಾಜ್ಯ ನೀರು ತಡೆಗಟ್ಟಲು ಕ್ರಮವಹಿಸಂತೆ ಗ್ರಾಮಸ್ಥರು‌ ಸಲಹೆ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಳು ಮಾಹಿತಿ ನೀಡಿದರು. ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯಾದವ್ ಬಾಬು, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜಯಶ್ರೀ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.