ADVERTISEMENT

ಕೋಟೆ ಆವರಣದಲ್ಲಿ ಹುತ್ತರಿ ಕೋಲಾಟ

ಸಂಸ್ಕೃತಿ ಉಳಿಸಲು ಶಾಸಕ ಕೆ.ಜಿ.ಬೋಪಯ್ಯ ಕರೆ, ಕೊಡವ ವಾಲಗಕ್ಕೆ ಹೆಜ್ಜೆ ಹಾಕಿದ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 13:19 IST
Last Updated 12 ಡಿಸೆಂಬರ್ 2019, 13:19 IST

ಮಡಿಕೇರಿ: ಹುತ್ತರಿ ಹಬ್ಬದ ಬಳಿಕ ಕೊಡಗಿನ ಎಲ್ಲೆಲ್ಲೂ ಕೋಲಾಟ ಹಾಗೂ ಕ್ರೀಡಾಕೂಟದ ಸಂಭ್ರಮ. ಇಲ್ಲಿನ ಹಳೇ ಕೋಟೆ ಆವರಣದಲ್ಲಿ, ಗುರುವಾರ ಮಧ್ಯಾಹ್ನ ಪಾಂಡಿರ ಕುಟುಂಬ ಹಾಗೂ ಓಂಕಾರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಹುತ್ತರಿ ಕೋಲಾಟ ನಡೆಯಿತು.

ಉಮ್ಮತ್ತಾಟ್‌, ಬೋಳಕಾಟ್‌, ಕೋಲಾಟ್‌, ಪರಿಯ ಕಳಿ, ಚೌಲಿ ಆಟ್‌, ಕತ್ತಿಯಾಟ್‌ ಪ್ರದರ್ಶನ ನೀಡಲಾಯಿತು.

ನಗರದ ಕೊಡವ ಸಮಾಜ, ಪಾಂಡಿರ ಕುಟುಂಬಸ್ಥರು, ಕೊಡವ ಸಮಾಜದ ಪೊಮ್ಮಕ್ಕಡ ಕೂಟ, ಮುಕ್ಕೊಡ್ಲು ಸೇರಿದಂತೆ ಹಲವು ತಂಡಗಳು ಪ್ರದರ್ಶನ ನೀಡಿದವು.

ADVERTISEMENT

ಮಧ್ಯಾಹ್ನ 3ಕ್ಕೆ ಆರಂಭವಾದ ಈ ನೃತ್ಯ ಪ್ರದರ್ಶನವು ಎಲ್ಲರ ಮನಸೂರೆಗೊಳಿಸಿತು. ಸಾಂಪ್ರದಾಯಿಕ ನೃತ್ಯದ ಮೂಲಕ ಸಂಭ್ರಮಿಸಲಾಯಿತು. ಈ ನೃತ್ಯ ವೀಕ್ಷಣೆಗೆ ಬಂದಿದ್ದವರೂ ಕಣ್ತುಂಬಿಕೊಂಡರು. ಆದರೆ, ಈ ಬಾರಿ ಪ್ರೇಕ್ಷಕರ ಕೊರತೆ ಕಂಡುಬಂತು.

ಮಕ್ಕಳ ಸಂಭ್ರಮ:ಕೋಲಾಟದಲ್ಲಿ ಇಬ್ಬರು ಮಕ್ಕಳು, ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಕ್ಕಳ ನೃತ್ಯಕ್ಕೆ ಮನಸೋತ ಪ್ರೇಕ್ಷಕರೂ ಆ ದೃಶ್ಯವನ್ನು ಮೊಬೈಲ್‌ ಸೆರೆ ಹಿಡಿದರು. ಕೊನೆಯಲ್ಲಿ ಚಪ್ಪಾಳೆಯ ಸುರಿಮಳೆಯೇ ಆಯಿತು.

ವಾಲಗಕ್ಕೆ ಹೆಜ್ಜೆ:ಹುತ್ತರಿ ಕೋಲಾಟದ ಸಂಭ್ರಮದಲ್ಲಿ ಪಾಲ್ಗೊಂಡಿದ್ದವರು, ಕೊನೆಯಲ್ಲಿ ಕೊಡವ ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಹುತ್ತರಿ ಆಚರಣೆಯ ಬಳಿಕ ಕೋಲಾಟ ನಡೆಯುವುದು ಸಂಪ್ರದಾಯ. ರಾಜಮಹಾರಾಜರ ಕಾಲದಿಂದಲೂ ಈ ಕೋಟೆ ಆವರಣದಲ್ಲಿ ಕೋಲಾಟ ನಡೆಯುತ್ತಿತ್ತು. ಅದು ಇಂದಿಗೂ ಮುಂದುವರೆದಿದೆ’ ಎಂದು ಹೇಳಿದರು.

‘ಊರು ಮಂದ್‌ ಹಾಗೂ ನಾಡ್‌ ಮಂದ್‌ಗಳಲ್ಲಿ ಒಂದುವಾರ ಹುತ್ತರಿ ಕೋಲಾಟ ನಡೆಯುವುದು ವಿಶೇಷ. ಕೊಡಗಿನ ಜನರು ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದ್ದಾರೆ. ಮುಂದೆಯೂ ಈ ಸಂಪ್ರದಾಯಗಳು ಜೀವಂತವಾಗಿ ಇರಬೇಕು’ ಎಂದು ನುಡಿದರು.

‘ಹುತ್ತರಿಗೆ ಮೊದಲು ರಜೆ ನೀಡುತ್ತಿರಲಿಲ್ಲ. ಆದರೆ, 2008ರ ಬಳಿಕ ಹುತ್ತರಿ ಹಾಗೂ ಕಾವೇರಿ ತುಲಾಸಂಕ್ರಮಣಕ್ಕೆ ಕೊಡಗಿಗೆ ಸೀಮಿತವಾಗಿ ರಜೆ ಘೋಷಿಸಲಾಗುತ್ತದೆ. ಹೀಗಾಗಿ, ಸರ್ಕಾರವು ಇದನ್ನು ಗುರುತಿಸಿದೆ’ ಎಂದು ಬೋಪಯ್ಯ ಹೇಳಿದರು.

ಹೆಬ್ಬೆಟ್ಟಗೇರಿ ಗ್ರಾಮದ ಪಾಂಡಿರ ಕುಟುಂಬಸ್ಥರು, ರಾಜರ ಆಳ್ವಿಕೆಯ ಕಾಲದಲ್ಲಿ ಪುತ್ತರಿ ಕೋಲಾಟವನ್ನು ಅಂದಿನ ಅರಮನೆಯಾಗಿದ್ದ ಕೋಟೆ ಆವರಣದಲ್ಲಿ ನಡೆಸುತ್ತಿದ್ದರು. ಗದ್ದೆಯಲ್ಲಿ ಬೆಳೆದು ನಿಂತ ಭತ್ತದ ಪೈರನ್ನು ಧಾನ್ಯಲಕ್ಷ್ಮಿಯಾಗಿ ಮನೆಗೆ ಬರಮಾಡಿಕೊಳ್ಳುವ ಹಬ್ಬದಲ್ಲಿ, ಅರಮನೆಯಲ್ಲಿ ಸಂಭ್ರಮವನ್ನು ಆಚರಿಸುವ ವೇಳೆ ಪುತ್ತರಿ ಅರಮನೆ ಕೋಲು ಅತ್ಯಂತ ಮಹತ್ವ ಪಡೆದಿತ್ತು. ಅದು ಈಗಲೂ ಮುಂದುವರಿದಿದೆ. ಹುತ್ತರಿ ಆಚರಣೆ ನಂತರ ಮಡಿಕೇರಿ ಕೋಟೆ ಆವರಣದಲ್ಲಿ ಹುತ್ತರಿ ಕೋಲಾಟ ನಡೆಸಿ ಸಂಭ್ರಮಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.