ADVERTISEMENT

ಹಿಂದೂಗಳು ಕೆರಳಿದರೆ ಬಿಜೆಪಿ ದೂಳೀಪಟವಾಗಲಿದೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2022, 3:30 IST
Last Updated 7 ಮೇ 2022, 3:30 IST
ಕುಶಾಲನಗರದಲ್ಲಿ ಶುಕ್ರವಾರ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿದರು
ಕುಶಾಲನಗರದಲ್ಲಿ ಶುಕ್ರವಾರ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿದರು   

ಕುಶಾಲನಗರ: ‘ಹಿಂದೂ ಸಮಾಜ ಕೆರಳಿದರೆ ಬಿಜೆಪಿ ದೂಳೀಪಟವಾಗುತ್ತದೆ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಮುಸ್ಲಿಮರ ಮಾನಸಿಕ ಸ್ಥಿತಿಯನ್ನು ಮೇಲಕ್ಕೆತ್ತುವ ಹಾಗೂ ಹಿಂದೂಗಳ ಧೈರ್ಯವನ್ನು ಕುಗ್ಗಿಸುವ ಕೆಲಸ‌ ಮಾಡುತ್ತಿದೆ. ಬಿಜೆಪಿಯವರು ಸ್ವಾತಂತ್ರ್ಯ, ಸಂವಿಧಾನ ಹಾಗೂ ಸಿಂಧುತ್ವವನ್ನು ತಡೆಯುವ ಕೆಲಸ‌ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಂತೆ ಬಿಜೆಪಿಯೂ ನನ್ನನ್ನು ನಿರ್ಬಂಧಿಸುತ್ತಿದ್ದು, ಇದು ಹೇಯ ಹಾಗೂ ಸ್ವಾತಂತ್ರ್ಯಹರಣ ಕೃತ್ಯ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಮೈಸೂರು ಜಿಲ್ಲೆಯ ಕವಲಂದೆ ಗ್ರಾಮದಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ರಾಜ್ಯದಲ್ಲಿ ದೇಶದ್ರೋಹಿ ಶಕ್ತಿಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಹಿಂದೂ ಸಮಾಜವನ್ನು ನೂರು ಪಟ್ಟು ಹೆಚ್ಚು ಜಾಗೃತಗೊಳಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಇಸ್ಲಾಂ ಕ್ರೌರ್ಯಕ್ಕೆ ಕಡಿವಾಣ ಹಾಕಲು ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವುದು ಅಗತ್ಯ’ ಎಂದರು.

‘ಇಲ್ಲಿಯವರೆಗೆ ಎಡವಿರುವ ಹಿಂದೂ ಸಮಾಜ ಸುಧಾರಿಸಿಕೊಳ್ಳುತ್ತಿದೆ. ವಕ್ಛ್ ಬೋರ್ಡ್ ಗೋ‌ಲ್‌ಮಾಲ್, ಅಜಾನ್ ಮೈಕ್ ಕಿರಿಕಿರಿ, ಗೋಹತ್ಯೆ, ಬೈಬಲ್ ಬೋಧನೆ ವಿರೋಧಿ ಹೋರಾಟ ಮತ್ತು ಮತಾಂತರ‌ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿ ಹೋರಾಟ ಮುಂದುವರೆಯಲಿದೆ’ ಎಂದರು.

‘ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸರ್ಕಾರ ಮತ್ತು ಪೊಲೀಸ್ ಇಲಾಖೆ ವೈಫಲ್ಯದಿಂದ ಗೋವುಗಳ ಕಳ್ಳತನ, ಹತ್ಯೆ, ಮಾರಾಟ ಎಗ್ಗಿಲ್ಲದೆ‌ ಮುಂದುವರಿದಿದೆ. ಈ ಸಂಬಂಧ ಟಾಸ್ಕ್ ಫೋರ್ಸ್ ರಚನೆ, ವಿಶೇಷ ಚೆಕ್ ಪೋಸ್ಟ್, ಪೊಲೀಸ್ ಠಾಣಾಧಿಕಾರಿಗಳಿಗೆ ವಿಶೇಷ ನಿರ್ದೇಶನ‌ ಸೇರಿದಂತೆ 10 ಪ್ರಶ್ನೆಗಳನ್ನು ಪಶುಸಂಗೋಪನಾ ಸಚಿವ ಮುಂದಿಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.