
ನಾಪೋಕ್ಲು: ಕಕ್ಕಬೆ ಗ್ರಾಮ ಪಂಚಾಯಿತಿಯ ನಾಲಡಿ ಗ್ರಾಮದ ಹೊಳೆಯಲ್ಲಿ ಕಲ್ಲುಗಳನ್ನು ಅಕ್ರಮವಾಗಿ ತೆಗೆಯಲಾಗುತ್ತಿದೆ ಎಂಬ ದೂರಿನ ಕುರಿತು ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.
ನಾಲಡಿ ಗ್ರಾಮದ ಹೊಳೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಮಡಿಕೇರಿ ತಹಶೀಲ್ದಾರರ ಆದೇಶದಂತೆ ನಾಪೋಕ್ಲು ವಿಭಾಗದ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾದ ರಾಹುಲ್ ಹಾಗೂ ರಾಯಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕೆಲವರು, ‘ಮಳೆಗಾಲದಲ್ಲಿ ನಾಲಡಿ ಹೊಳೆ ತುಂಬಿ ಹರಿಯುವುದರಿಂದ ರಸ್ತೆ ಸಂಪರ್ಕ ಸ್ಥಗಿತವಾಗಿದ್ದರಿಂದ ಸ್ವಂತ ಖರ್ಚಿನಿಂದ ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕಲು ಮುಂದಾಗಿದ್ದೇವೆ. ಇಲ್ಲಿರುವ ಕಲ್ಲುಗಳನ್ನು ಹೊರಗಿನಿಂದ ತರಿಸಲಾಗಿದೆ. ನದಿಯಲ್ಲಿರುವ ಕಲ್ಲುಗಳನ್ನು ತೆಗೆದಿಲ್ಲ’ ಎಂದು ತಿಳಿಸಿದ್ದಾರೆ.
ಕೊಡಗು ಸೂಕ್ಷ್ಮ ಪರಿಸರ ಪ್ರದೇಶವಾದ್ದರಿಂದ ಹಾಗೂ ನದಿ ಸಂರಕ್ಷಣೆಯ ಹಿತದೃಷ್ಟಿಯಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಮತ್ತೆ ಕೆಲವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.