ADVERTISEMENT

ಮಡಿಕೇರಿ | ‘ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ’

ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಸುರೇಶ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 21 ಮೇ 2025, 5:50 IST
Last Updated 21 ಮೇ 2025, 5:50 IST
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜಿನ ವಾರ್ಷಿಕೋತ್ಸವವನ್ನು ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಸುರೇಶ ಉದ್ಘಾಟಿಸಿ ಮಾತನಾಡಿದರು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜಿನ ವಾರ್ಷಿಕೋತ್ಸವವನ್ನು ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಸುರೇಶ ಉದ್ಘಾಟಿಸಿ ಮಾತನಾಡಿದರು.   

ಮಡಿಕೇರಿ: ಇತ್ತೀಚೆಗೆ ಉದ್ಯೋಗ ಪಡೆಯುವುದರಲ್ಲಿ ಯುವ ತಲೆಮಾರಿಗೆ ಹಿನ್ನಡೆಯಾಗುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಸುರೇಶ ಕಿವಿಮಾತಹೇಳಿದರು.

ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜ್ಜಿರ ಬಿ.ಅಯ್ಯಪ್ಪ ಮಾತನಾಡಿ, ‘ಇಂದು ಅವಕಾಶಗಳು ಹೆಚ್ಚಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮನರಂಜನೆ ಬೇಕು ಎಂಬುದು ನಿಜ. ಆದರೆ, ಅದರೊಂದಿಗೆ ಹೆಚ್ಚಿನ ಗಮನವನ್ನು ಭವಿಷ್ಯದ ಬಗ್ಗೆ ಇರಬೇಕು ಎಂದು ಸಲಹೆ ನೀಡಿದರು.

ಈ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿದ ಅವರು, ಇದೇ ವೇಳೆ ಕೊಡಗಿನ ಸಾಧಕರನ್ನು ಸ್ಮರಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಮೇಜರ್ ಬಿ.ರಾಘವ, ‘ಶಿಕ್ಷಣಕ್ಕೆ ಆದ್ಯತೆ ನೀಡಿದವರು ಯಾವಾಗಲು ಯಶಸ್ಸನ್ನು ಗಳಿಸುತ್ತಾರೆ. ಯಶಸ್ಸನ್ನು ಪಡೆಯಲು ಶಿಸ್ತು ಮತ್ತು ಶ್ರಮ ಇರಬೇಕು’

‘ಶಿಕ್ಷಣ ಎಂಬುದು ವ್ಯಕ್ತಿ, ವ್ಯಕ್ತಿತ್ವ, ಸಮಾಜ ದೇಶವನ್ನು ಪರಿವರ್ತನೆ ಮಾಡುವ ಅಸ್ತ್ರವಾಗಿದೆ. ಆದ್ದರಿಂದ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣ, ದುಡಿದು ತಿನ್ನುವ ಅನ್ನ, ಭಕ್ತಿಪೂರ್ವಕ ಪ್ರಾರ್ಥನೆ ಮತ್ತು ಪ್ರಾಮಾಣಿಕವಾಗಿ ದುಡಿದ ಹಣ ಇವು ಒಂದಲ್ಲ ಒಂದು ದಿನ ಭವಿಷ್ಯಕ್ಕೆ ಆಧಾರ ಸ್ತಂಭಗಳಾಗುತ್ತವೆ. ಎಲ್ಲಿ ಹುಟ್ಟುತ್ತೀರಿ ಎಂಬುದು ಮುಖ್ಯ ಅಲ್ಲ, ಎಲ್ಲಿ ಮುಟ್ಟುತ್ತೀರಿ ಎಂಬುದು ಮುಖ್ಯ’ ಎಂದರು.

ಪೋಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಜಯಂತಿ ರೈ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ, ತಂದೆ-ತಾಯಿಯರ ಕನಸಿದೆ. ಸಾಧನೆಯ ಹಾದಿಯಲ್ಲಿ ಸಾಗಿ ಸಾಧಕರಾಗಿ ನಿಲ್ಲಿ’ ಎಂದು ಹಾರೈಸಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೈಲಶ್ರೀ ವಾರ್ಷಿಕ ವರದಿ ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ಕ್ರಿಯೇಟಿವ್ ಖಲೀಲ್, ವಿಶ್ವವಿದ್ಯಾನಿಲಯ ಪ್ರತಿನಿಧಿಸಿದ ಕ್ರೀಡಾಪಟು, ಎನ್‍ಸಿಸಿ ಕೆಡೆಟ್, ಎನ್‍ಎಸ್‍ಎಸ್ ವಿದ್ಯರ್ಥಿಗಳು, ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಐಕ್ಯೂಎಕ್ಯೂ ಸಂಚಾಲಕ ಕೆ.ಪಿ.ಪ್ರೊ.ನಾಗರಾಜ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮಹೇಂದ್ರ, ಅಲಿನ್ ಜೇಷ್ಮಾ, ಮೋನಿಶ್, ಸಲಹೆಗಾರ ಪ್ರೊ.ಶ್ರೀಧರ ಹೆಗಡೆ,  ವಿದ್ಯಾರ್ಥಿ ವರ್ಷ, ಎನ್‍ಸಿಸಿ ನಾಯಕ ಗುಣಶೇಖರ್, ಬಿ.ಬಿ.ಕೃತಿ, ಎನ್‍ಎಸ್‍ಎಸ್ ನಾಯಕರಾದ ಟಿ.ವಿ.ವರ್ಷ, ಎಂ.ಮನೋಜ್ ಭಾಗವಹಿಸಿದ್ದರು.


ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜ ಸೇವಕರು, ಕ್ರೀಡಾಪಟುಗಳಿಗೆ ಅಭಿನಂದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.