
ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಭಾನುವಾರ ಹಿಂದೂ ಮಲಯಾಳಿ ಸಂಘ ಆಯೋಜಿಸಿದ್ದ ಓಣಾ ಘೋಷಂ ಕಾರ್ಯಕ್ರಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು
ಮಡಿಕೇರಿ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯ ಆಗಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಇಲ್ಲಿನ ಕಾವೇರಿ ಹಾಲ್‌ನಲ್ಲಿ ಭಾನುವಾರ ಹಿಂದೂ ಮಲಯಾಳಿ ಸಂಘ ಏರ್ಪಡಿಸಿದ್ದ ‘ಓಣಾಘೋಷಂ ಓಣಂಸಧ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕರಾವಳಿ ಭಾಗದ ಸಂಸ್ಕೃತಿಗಳು ಎಲ್ಲರಿಗೂ ಮಾದರಿಯಾಗಿವೆ’ ಎಂದು ಶ್ಲಾಘಿಸಿದ ಅವರು, ‘ಭಾರತವು ಹಲವು ಸಂಸ್ಕೃತಿ ಇರುವ ದೇಶವಾಗಿದ್ದು, ಹಲವು ಸಂಸ್ಕೃತಿ ಮತ್ತು ಪರಂಪರೆಯಿಂದ ಭಾರತ ಗುರುತಿಸಿಕೊಂಡಿದೆ. ಇಂದು ಧರ್ಮದ ರಕ್ಷಣೆ ಅಗತ್ಯವಾಗಿದ್ದು, ಸಮಾಜಬಾಂಧವರು ನಮ್ಮ ಸಂಸ್ಕೃತಿ, ಪರಂಪರೆಯನ್ನು ರಕ್ಷಿಸಬೇಕು’ ಎಂದರು.
ಮೈಸೂರು ಸಂಸ್ಥಾನಕ್ಕೂ ಕೇರಳದಲ್ಲಿ ಹಿಂದೆ ಇದ್ದ ವಿವಿಧ ರಾಜಮನೆತನಗಳಿಗೂ ಇದ್ದ ಸಂಬಂಧವನ್ನು ಪ್ರಸ್ತಾಪಿಸಿದ ಅವರು, ಕೊಚ್ಚಿನ್, ತಿರುವನಂತಪುರಂನಲ್ಲಿದ್ದ ಕೆಲವು ರಾಜರು ತರಬೇತಿ ಪಡೆಯಲು ಕೇರಳದಿಂದ ಮೈಸೂರಿಗೆ ಬಂದಿದ್ದರು. ತಿರುವಾಂಕೂರಿನ ಕೊನೆಯ ರಾಜ ಮೈಸೂರಿಗೆ ಆಗಮಿಸಿ ತರಬೇತಿ ಪಡೆದಿದ್ದರು ಎಂದು ಅವರು ಹೇಳಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಓಣಂ ಆಚರಣೆ ಮೂಲಕ ನಾವೆಲ್ಲ ಒಂದು ನಾವೆಲ್ಲ ಬಂಧು ಎಂಬ ಸಂದೇಶವನ್ನು ಸಾರಲಾಗುತ್ತಿರುವುದು ನಿಜಕ್ಕೂ ಸ್ತುತ್ಯರ್ಹ’ ಎಂದು ಹೇಳಿದರು.
ಸಂಘಟನೆ ಗಟ್ಟಿಯಾಗಿದ್ದರೆ ಸಮಾಜ ಗಟ್ಟಿಯಾಗಿರುತ್ತದೆ. ಸಮಾಜ ಗಟ್ಟಿಯಾಗಿದ್ದರೆ ದೇಶ ಪ್ರಬಲವಾಗಿರುತ್ತದೆ ಎಂದು ಅವರು ಪ್ರತಿಪಾದಿಸಿದರು.
ಈ ಕಾರ್ಯಕ್ರಮದ ಮೂಲಕ ಹಿಂದೂ ಮಲಯಾಳಿ ಸಮಾಜವು ತಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಹಿಂದೂ ಮಲಯಾಳಿ ಸಂಘ ಅಧ್ಯಕ್ಷ ಕೆ.ವಿ.ಧಮೇಂದ್ರ ಮಾತನಾಡಿ, ಹಿಂದೂ ಮಲಯಾಳಿಗಳ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಛದ್ಮವೇಷ ಸ್ಪರ್ಧೆ, ಪೂಕಳಂ ಸ್ಪರ್ಧೆ ನಡೆಯಿತು. ಚಂಡೆ ವಾದ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸೂಜಿಗಲ್ಲಿನಂತೆ ಸೆಳೆದವು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ.ರಾಜೇಶ್, ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ಸ್ಥಾಪಕ ಅಧ್ಯಕ್ಷ ಕೆ.ಎಸ್.ರಮೇಶ್, ಸಂಘದ ಉಪಾಧ್ಯಕ್ಷ ವಿಜಯ್ ಕುಮಾರ್, ಪ್ರಚಾರ ಸಮಿತಿ ಸಂಚಾಲಕ ರವಿ ಅಪ್ಪುಕುಟ್ಟನ್, ಗೌರವ ಸಲಹೆಗಾರ ಪಿ.ಟಿ.ಉಣ್ಣಿಕೃಷ್ಣ, ಟಿ.ಆರ್.ವಾಸುದೇವ್ ಹಾಗೂ ತಾಲೂಕು ಸಂಘಗಳ ಅಧ್ಯಕ್ಷರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.