ADVERTISEMENT

ಬಡವರಿಗೊಂದು ತುತ್ತು ಅನ್ನ ಕೊಡಿ

ಜಿಲ್ಲೆಯಲ್ಲಿ 5 ತಾಲ್ಲೂಕುಗಳಿಗೆ ಇರುವುದು ಎರಡೇ ಇಂದಿರಾ ಕ್ಯಾಂಟೀನ್!

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 11:50 IST
Last Updated 28 ನವೆಂಬರ್ 2022, 11:50 IST
ಸೋಮವಾರಪೇಟೆ ಪಟ್ಟಣದ ಸಿ.ಕೆ.ಸುಬ್ಬಯ್ಯ ರಸ್ತೆಗೆ ಹೊಂದಿಕೊಂಡಂತೆ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಅಡಿಪಾಯ ಹಾಕಿರುವುದು
ಸೋಮವಾರಪೇಟೆ ಪಟ್ಟಣದ ಸಿ.ಕೆ.ಸುಬ್ಬಯ್ಯ ರಸ್ತೆಗೆ ಹೊಂದಿಕೊಂಡಂತೆ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಅಡಿಪಾಯ ಹಾಕಿರುವುದು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 5 ತಾಲ್ಲೂಕುಗಳಿವೆ. 4.39 ಲಕ್ಷ ಮತದಾರರು ಸೇರಿದಂತೆ 5.54 ಲಕ್ಷಕ್ಕೂ ಹೆಚ್ಚಿನ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ ಇರುವುದು ಕೇವಲ ಎರಡೇ ಇಂದಿರಾ ಕ್ಯಾಂಟೀನ್ ! ಮಡಿಕೇರಿ ಹಾಗೂ ವಿರಾಜಪೇಟೆ ಬಿಟ್ಟರೆ ಬೇರೆ ಯಾವುದೇ ತಾಲ್ಲೂಕುಗಳಲ್ಲಿಯೂ ಇಂದಿರಾ ಕ್ಯಾಂಟೀನ್ ಇಲ್ಲ.

ಕೊಡಗಿನಿಂದ ಹೊರಗೆ ಕೂರ್ಗ್ ಎಂದರೆ ಅದೊಂದು ಸಿರಿವಂತರ ನೆಲೆ, ಕಾಫಿ ಬೆಳೆಗಾರರೇ ಇದ್ದಾರೆ, ಪ್ರವಾಸೋದ್ಯಮದ ತಾಣವಾಗಿರುವ ಇಲ್ಲಿ ಶ್ರೀಮಂತರೇ ಇದ್ದಾರೆ ಎಂಬ ಭಾವನೆ ಸಾಮಾನ್ಯವಾಗಿ ಬೇರೂರಿದೆ. ಆದರೆ, ಇಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಧಿಕ ಸಂಖ್ಯೆಯಲ್ಲಿ ಬಡವರಿದ್ದಾರೆ, ಕೂಲಿ ಕಾರ್ಮಿಕರಿದ್ದಾರೆ. ಇವರೆಲ್ಲ ಇಂದಿಗೂ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವಂತಹ ಸ್ಥಿತಿಯಲ್ಲೇ ದಿನಗಳನ್ನು ದೂಡುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್‌ ಕುರಿತು ಏನೆಲ್ಲ ಟೀಕೆಗಳು ಕೇಳಿ ಬಂದರೂ, ಅದರ ಮಹತ್ವ ಎಲ್ಲ ಜಿಲ್ಲೆಗಳಲ್ಲೂ ಗೊತ್ತಾಗಿದ್ದು ತೀವ್ರ ತರವಾದ ಮಳೆ ಹಾನಿ ಸಂಭವಿಸಿದಾಗ ಹಾಗೂ ಕೋವಿಡ್ ಬಂದಾಗ ಆಗ ಬಡವರಾದಿಯಾಗಿ ಬಹುತೇಕ ಮಂದಿ ಇದರಿಂದಲೇ ಹೊಟ್ಟೆ ತುಂಬಿಸಿಕೊಂಡರು.

ADVERTISEMENT

ಜಿಲ್ಲೆಯಲ್ಲೇ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿರುವ ಕುಶಾಲನಗರದಲ್ಲೂ ಇಂದಿರಾ ಕ್ಯಾಂಟೀನ್ ಇಲ್ಲ. ಇಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳು ತೀವ್ರವಾಗಿ ಬೆಳೆಯುತ್ತಿದೆ. ಪ್ರತಿ ಮಂಗಳವಾರ ಸಂತೆ ನಡೆಯುತ್ತದೆ. ಇಲ್ಲೆಲ್ಲ ನಿತ್ಯ ಸಾವಿರಾರು ಮಂದಿ ಬಡವರು, ಕೂಲಿ ಕಾರ್ಮಿಕರು ಬರುತ್ತಾರೆ. ಇವರಿಗಾಗಿಯಾದರೂ ಇಂದಿರಾ ಕ್ಯಾಂಟೀನ್ ತೆರೆಯಬೇಕಾದ ಅನಿವಾರ್ಯತೆ ಇದೆ.

ಗೋಣಿಕೊಪ್ಪಲು: ಬೇಕಿದೆ ಕ್ಯಾಂಟೀನ್

ಬಹುಪಾಲು ಕಟ್ಟಡ ಕಾರ್ಮಿಕರು, ಗಾರೆ ಕೆಲಸದವರು, ಮರದ ಕಾರ್ಮಿಕರು, ಕಾಫಿ ಕೊಯ್ಲು, ಮೆಣಸು ಒಯ್ಯುವ ತೋಟದ ಕಾರ್ಮಿಕರು ಗೋಣಿಕೊಪ್ಪಲು, ಪೊನ್ನಂಪೇಟೆ, ವಿರಾಜಪೇಟೆ, ಸಿದ್ದಾಪುರಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಸಣ್ಣಪುಟ್ಟ ಬಾಡಿಗೆ ಮನೆಗಳು ಸಿಗುವುದರಿಂದ ಮತ್ತು ಬಂದು ಹೋಗುವುದಕ್ಕೆ ಬಸ್ ಸೌಲಭ್ಯವೂ ಇರುವುದರಿಂದ ಈ ಎಲ್ಲ ಬಡ ಕಾರ್ಮಿಕರು ಪಟ್ಟಣವನ್ನು ಆಶ್ರಯಿಸಿದ್ದಾರೆ. ಇವರಲ್ಲಿ ಬಹಳಷ್ಟು ಕಾರ್ಮಿಕರು ಹೊರ ಜಿಲ್ಲೆಯಿಂದ ಬಂದವರೇ ಆಗಿದ್ದಾರೆ.

ಇವರಲ್ಲಿ ನೂರಾರು ಮಂದಿ ಊಟ ಉಪಾಹಾರಕ್ಕೆ ಹೋಟೆಲ್ ಅವಲಂಬಿಸಿದ್ದಾರೆ. ಕೊಡಗಿನಲ್ಲಿ
ಹೆಚ್ಚಿನ ಹೋಟೆಲ್‌ಗಳು ಮಾಂಸಾಹಾರಿಯವೇ ಅಗಿವೆ. ಸಸ್ಯಹಾರಿ ಹೋಟೆಲ್ ಕೇವಲ ಬೆರಳೆಣಿಕೆಯಷ್ಟಿವೆ. ತರಕಾರಿಯಾಗಲಿ, ಮಾಂಸಹಾರಿಯಾಗಲಿ ಹೋಟೆಲ್‌ಗಳಲ್ಲಿ ಬೆಲೆ ದುಬಾರಿಯೇ ಇದೆ. ಇಲ್ಲಿನ ಬೆಳಗಿನ ಉಪಾಹಾರಕ್ಕೆ ಕನಿಷ್ಠವೆಂದರೂ ₹ 100 ಬೇಕೆ ಬೇಕು. ಕೂಲಿ ಕಾರ್ಮಿಕರು ವಿಧಿಯಿಲ್ಲದೆ ದುಬಾರಿಯಾದರೂ ಇಷ್ಟು ಹಣ ಕೊಟ್ಟು ತಿನ್ನುವ ಅನಿವಾರ್ಯತೆ ಇದೆ.

ಹಸಿದ ಹೊಟ್ಟೆಗೆ ಹೊಡೆದ ಕೆಟ್ಟ ರಾಜಕೀಯ ನಡೆ: ಬಡ ಕಾರ್ಮಿಕರ ಮತ್ತು ನಿರ್ಗತಿಕರ ಹೊಟ್ಟೆ ಹಸಿವು ನೀಗಿಸುವುದಕ್ಕಾಗಿಯೇ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದರೆ, ಕೊಡಗಿನಲ್ಲಿ ಮಾತ್ರ ವಿರಾಜಪೇಟೆ ಮತ್ತು ಮಡಿಕೇರಿ ಬಿಟ್ಟರೆ ಬೇರೆಡೆ ತೆರೆಯಲಾಗಲಿಲ್ಲ. ಕಾರಣ ಜಾಗದ ಕೊರತೆ. ಹೀಗಾಗಿ, ಬಡವರ ಹೊಟ್ಟೆತುಂಬಿಸುವ ಇಂದಿರಾ ಕ್ಯಾಂಟೀನ್ ನನೆಗುದಿಗೆ ಬಿದ್ದಿತು.

ವಿರಾಜಪೇಟೆಯಲ್ಲಿ 450 ಮಂದಿಗೆ ಆಹಾರ

ವಿರಾಜಪೇಟೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ನಿತ್ಯ ಬೆಳಿಗ್ಗೆ ಅಂದಾಜು 200- 250, ಮಧ್ಯಾಹ್ನ 150 ಹಾಗೂ ರಾತ್ರಿ 100 ಮಂದಿ ಗ್ರಾಹಕರು ವಿರಾಜಪೇಟೆಯಲ್ಲಿನ ಇಂದಿರಾ ಕ್ಯಾಂಟೀನ್‌ ಲಾಭವನ್ನು ಪಡೆಯು ತ್ತಿದ್ದಾರೆ. ಇವರಲ್ಲಿ ಬಹುತೇಕರು ಕಟ್ಟಡ ಕಾರ್ಮಿಕರು, ಬಸ್ ಚಾಲಕರು ಹಾಗೂ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಾಗಿದ್ದಾರೆ.

ಬೆಳಗಿನ ಉಪಾಹಾರಕ್ಕೆ ರೈಸ್ ಬಾತ್, ದೋಸೆ, ಇಡ್ಲಿ ಹಾಗೂ ಚಿತ್ರಾನ್ನ ಲಭ್ಯವಿದ್ದರೆ, ಮಧ್ಯಾಹ್ನ ಹಾಗೂ ರಾತ್ರಿಗೆ ಊಟವನ್ನು ನೀಡಲಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಕಟ್ಟಡ ದಲ್ಲಿ ಕೊಂಚ ಮಟ್ಟಿಗೆ ನೀರು ಸೋರಿಕೆಯಾಗುತ್ತಿದ್ದರೂ, ಇದನ್ನು ಸರಿಪಡಿಸಲಾಗಿದೆ.

ಜಿಲ್ಲೆಯ ಮಟ್ಟಿಗೆ ಸದ್ಯ ಅನುದಾನದ ವಿಚಾರದಲ್ಲಿ ಸಮಸ್ಯೆ ಇಲ್ಲ. ಕಳೆದ ವರ್ಷ ಮಾತ್ರ ಅನುದಾನ ಬಿಡುಗಡೆ ಕೊಂಚ ವಿಳಂಬವಾಗಿತ್ತು. ಈ ಬಾರಿ ಅಂತಹ ಸಮಸ್ಯೆಯಾಗಿಲ್ಲ ಎಂದು ತಿಳಿದುಬಂದಿದೆ. ಭೇಟಿ ನೀಡಿದ ಸಂದರ್ಭ ತಕ್ಕ ಮಟ್ಟಿಗಿನ ಶುಚಿತ್ವ ಕಂಡು ಬಂತು.

ಹೆಸರು ಯಾವುದಾದರೂ ಇರಲಿ ಬಡವರಿಗೆ ಒಂದಿಷ್ಟು ಅನ್ನ ಕೊಡಿ: ‘ರಾಜಕೀಯ ಪಕ್ಷಗಳು ಕನಿಷ್ಠ ಬಡವರಿಗಾಗಿ ಇರುವ ಕಾರ್ಯಕ್ರಮ ಗಳಲ್ಲಿ ರಾಜಕೀಯ ಮಾಡಬಾರದು’ ಎಂದು ಅನೇಕ ಕೂಲಿ ಕಾರ್ಮಿಕರು ಒತ್ತಾಯಿಸಿದರು.

‘ಪ್ರತಿ ವಾರ ಮಡಿಕೇರಿ ಸಂತೆಗೆ ಬರುತ್ತೇವೆ. ಈ ವೇಳೆ ಇಲ್ಲಿನ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸುತ್ತೇವೆ. ಇದರಿಂದ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಆದರೆ, ನಾನು ಕೆಲಸ ಮಾಡುವ ಕುಶಾಲನಗರದಲ್ಲಿ ಈ ವ್ಯವಸ್ಥೆ ಇಲ್ಲ. ಅಲ್ಲಿ ಒಂದು ಹೊತ್ತಿನ ಊಟಕ್ಕೆ ₹ 50ಕ್ಕೂ ಅಧಿಕ ಖರ್ಚಾಗುತ್ತದೆ. ಹೆಸರು ಯಾವುದಾದರೂ ಇರಲಿ ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವ ಕ್ಯಾಂಟೀನ್ ಕೊಡಿ’ ಎಂದು ಕಟ್ಟಡ ಕಾರ್ಮಿಕರಾದ ರಾಮಚಂದ್ರ, ಚಿನ್ನಸ್ವಾಮಿ, ಮಹದೇವ ಒತ್ತಾಯಿಸಿದರು.

ಅಡಿಪಾಯ ಹಾಕಿ ಹೋದವರು ತಿರುಗಿಯೂ ನೋಡಲಿಲ್ಲ!

ಸೋಮವಾರಪೇಟೆ: ರಾಜ್ಯದಲ್ಲಿ ಹಸಿದವರ ಹೊಟ್ಟೆ ತುಂಬಿಸಬೇಕೆನ್ನುವ ಮಹಾತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಇಂದಿಗೂ ಪಟ್ಟಣದಲ್ಲಿ ಪ್ರಾರಂಭವಾಗಲೇ ಇಲ್ಲ.

ರಾಜ್ಯದ ಹಲವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕ್ಯಾಂಟೀನ್ ಪ್ರಾರಂಭಿಸಲು ಯೋಜನೆ ರೂಪಿಸಿ, ಟೆಂಡರ್ ಕರೆಯಲಾಗಿತ್ತು. ಆದರೆ, ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಪ್ರಾರಂಭವಾದರೂ, ತಾಲ್ಲೂಕು ಕೇಂದ್ರ ಸೋಮವಾರಪೇಟೆಯಲ್ಲಿ ಮಾತ್ರ ಭೂಮಿ ಬಿಟ್ಟು ಕಟ್ಟಡ ಮೇಲೇರಲಿಲ್ಲ. ಕೇವಲ ಅಡಿಪಾಯವನ್ನು ಗುತ್ತಿಗೆದಾರರು ಹಾಕಿ ಹೋದವರು ಇಂದಿಗೂ ಇತ್ತ ತಿರುಗಿಯೂ ನೋಡಲಿಲ್ಲ.

ಈ ಬಗ್ಗೆ ಹಲವು ಸಂಘ ಸಂಸ್ಥೆಗಳು ಕಟ್ಟಡ ಕಾಮಗಾರಿ ಮುಗಿಸಿ ಕ್ಯಾಂಟೀನ್ ಪ್ರಾರಂಭಿಸುವಂತೆ ಪಟ್ಟಣ ಪಂಚಯಿತಿಗೆ ಮನವಿ ಸಲ್ಲಿಸಿದ್ದರು. ಆದರೆ, ಅವರ ಮನವಿ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಸಾಕಷ್ಟು ಕೂಲಿ ಕಾರ್ಮಿಕರಿರುವ ಇಲ್ಲಿ ಕ್ಯಾಂಟೀನ್ ಪ್ರಾರಂಭಿಸುವಂತೆ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ನಂತರ, ಇಲ್ಲಿ ಕ್ಯಾಂಟೀನ್ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿತ್ತು.

ಈ ಬಗ್ಗೆ ಮಾತನಾಡಿದ ನಾಗರಾಜು, ‘ಕ್ಯಾಂಟೀನ್ ಪ್ರಾರಂಭಿಸಲು ಕಟ್ಟಡಕ್ಕೆ ಭೂಮಿಪೂಜೆ ನಡೆಸಿ 6 ವರ್ಷಗಳು ಕಳೆಯುತ್ತಾ ಬಂದರೂ, ಕಾಮಗಾರಿ ಮುಗಿಯಲಿಲ್ಲ. ನಮ್ಮ ಶಾಸಕರ ನಿರಾಸಕ್ತಿಯಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಅವರು ಮುತುವರ್ಜಿ ವಹಿಸಿದ್ದರೆ, ಪ್ರಾರಂಭಗೊಂಡು ನೂರಾರು ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುತ್ತಿತ್ತು’ ಎಂದು ಹೇಳಿದರು.

ಕೈಗೆಟುಕುವ ದರದಲ್ಲಿ ಊಟ ಸಿಗಲಿ

ಪ್ರತಿ ತಾಲ್ಲೂಕಿನ ಬಸ್‌ ನಿಲ್ದಾಣದ ಸಮೀಪದ ಇಂದಿರಾ ಕ್ಯಾಂಟೀನ್ ಇರುವುದು ಅಗತ್ಯ. ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಊಟ ಮತ್ತು ಉಪಾಹಾರ ಸಿಗುವಂತೆ ಮಾಡಬೇಕು. ಇದರಿಂದ ಬಹಳಷ್ಟು ಬಡವರು, ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದೆ

– ದೀಪಕ್‌ ಪೊನ್ನಪ್ಪ, ಮೇಕೇರಿ ಗ್ರಾಮ.

***

ತಾಲ್ಲೂಕು ಕೇಂದ್ರದಲ್ಲಿ ಕ್ಯಾಂಟೀನ್‌ ಅವಶ್ಯ

ಕುಶಾಲನಗರ, ಸೋಮವಾರಪೇಟೆ ಸೇರಿದಂತೆ ಎಲ್ಲ 5 ತಾಲ್ಲೂಕು ಕೇಂದ್ರಗಳಲ್ಲಿಯೂ ಇಂದಿರಾ ಕ್ಯಾಂಟೀನ್‌ ಅಗತ್ಯ ಇದೆ. ಬಡವರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಕಡಿಮೆ ಬೆಲೆಗೆ ನೀಡಬೇಕು

–ಭರತ್, ನೆಲ್ಲಿಹುದಿಕೇರಿ ಗ್ರಾಮ

***.

ಬಡವರ ಬಗ್ಗೆ ಸ್ವಲ್ಪ ಚಿಂತಿಸಿ

ವೋಟ್ ಬ್ಯಾಂಕ್‌ಗಾಗಿ ನಿತ್ಯ ಉಳ್ಳವರ ಪರವಾಗಿಯೇ ಚಿಂತಿಸುವ ಇಲ್ಲಿನ ಜನಪ್ರತಿನಿಧಿಗಳು ಬಡವರ ಬಗ್ಗೆ ಯೋಚಿಸಬೇಕು. ಇವರು ಆಸಕ್ತಿವಹಿಸಿ ಜಿಲ್ಲೆಯಲ್ಲಿ ಎಲ್ಲೆಡೆ ಇಂದಿರಾ ಕ್ಯಾಂಟೀನ್ ತೆರೆಯಬೇಕು ಇರುವುದೂ ಕೂಡಾ ಮೂಲೆ ಗುಂಪಾಗಿವೆ.

ಪಿ.ಕೆ.ಪ್ರವೀಣ್, ಗೋಣಿಕೊಪ್ಪಲು

***

ಮನವಿ ಮಾಡಿದ್ದೇವೆ; ಸರ್ಕಾರ ಕ್ರಮ ಕೈಗೊಂಡಿಲ್ಲ

ಕಳೆದ ಒಂದೂವರೆ ವರ್ಷದ ಹಿಂದೆಯೇ ಹಿಂದಿನ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕ್ಯಾಂಟೀನ್ ಸಮಸ್ಯೆ ಇತ್ಯರ್ಥಪಡಿಸಿ ಪ್ರಾರಂಭಿಸುವಂತೆ ಮನವಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಇಂದಿಗೂ ಅದೇ ಸ್ಥಿತಿಯಲ್ಲಿದೆ

ನಾಚಪ್ಪ, ಪ.ಪಂ.ಮುಖ್ಯಾಧಿಕಾರಿ ಸೋಮವಾರಪೇಟೆ

***

ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ಕಳೆದ ಮೂರು ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ಯಾಂಟೀನ್‌ನಿಂದ ಬಡ ಕೂಲಿ ಕಾರ್ಮಿಕರು ಸೇರಿದಂತೆ ಸಾಕಷ್ಟು ಮಂದಿಗೆ ಅನುಕೂಲವಾಗುತ್ತಿದೆ. ಅಧಿಕಾರಿಗಳು ಕೂಡ ಉತ್ತಮ ಸಹಕಾರ ನೀಡುತ್ತಿದ್ದು, ಈ ವರ್ಷ ಅನುದಾನದ ವಿಚಾರದಲ್ಲಿ ಯಾವುದೇ ತೊಂದರೆಯಾಗಿಲ್ಲ.

ಎಂ.ಎಂ.ರೀನಾ, ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದಾರೆ

***

ನಿರ್ವಹಣೆ: ಕೆ.ಎಸ್.ಗಿರೀಶ

ಮಾಹಿತಿ: ಜೆ.ಸೋಮಣ್ಣ, ಡಿ.ಪಿ.ಲೋಕೇಶ್, ಎಂ.ಎನ್.ಹೇಮಂತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.