ADVERTISEMENT

ಅಂತರರಾಷ್ಟ್ರೀಯ ಕಾಫಿ ದಿನಾಚರಣೆ: ಶನಿವಾರಸಂತೆಯಿಂದ ಕುಟ್ಟದವರೆಗೆ ಕಾಫಿ ಘಮಲು...

ಕೊಡಗು ಜಿಲ್ಲೆಯ ಹಲವೆಡೆ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 3:54 IST
Last Updated 2 ಅಕ್ಟೋಬರ್ 2024, 3:54 IST
ಸೋಮವಾರಪೇಟೆ ಚಿಕ್ಕಬಸಪ್ಪ ಕ್ಲಬ್ ಆವರಣದಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಣಾ ಕಾರ್ಯಕ್ರಮವನ್ನು ಚಿಕ್ಕಬಸಪ್ಪ ಕ್ಲಬ್ ಅಧ್ಯಕ್ಷ ಮಹೇಶ್ ಉದ್ಘಾಟಿಸಿದರು.
ಸೋಮವಾರಪೇಟೆ ಚಿಕ್ಕಬಸಪ್ಪ ಕ್ಲಬ್ ಆವರಣದಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಣಾ ಕಾರ್ಯಕ್ರಮವನ್ನು ಚಿಕ್ಕಬಸಪ್ಪ ಕ್ಲಬ್ ಅಧ್ಯಕ್ಷ ಮಹೇಶ್ ಉದ್ಘಾಟಿಸಿದರು.   

ಸೋಮವಾರಪೇಟೆ: ಕಾಫಿ ಮಂಡಳಿ ಹಾಗೂ ಇನ್ನಿತರ ಸಂಘ, ಸಂಸ್ಥೆಗಳು ಒಟ್ಟಾಗಿ ಮಂಗಳವಾರ ಶನಿವಾರಸಂತೆಯಿಂದ ಕುಟ್ಟದವರೆಗೆ ಹಲವೆಡೆ ಕಾಫಿ ದಿನಾಚರಣೆಯನ್ನು ಆಚರಿಸಿದವು.

ಸೋಮವಾರಪೇಟೆ, ಶನಿವಾರಸಂತೆ, ಪೊನ್ನಂಪೇಟೆ ಹಾಗೂ ಕುಟ್ಟದಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಉಚಿತವಾಗಿ 2 ಸಾವಿರ ಮಂದಿಗೆ ಕಾಫಿಯನ್ನು ವಿತರಿಸಲಾಯಿತು.

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ಹಾಗೂ ಕಾಫಿ ಮಂಡಳಿಯು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಬಿಗ್ ಕಪ್ ಮಡಿಕೇರಿ, ಬೆರಿಸ್ ಅಂಡ್ ಲೀಗ್ಸ್, ಬ್ಲಾಸಮ್ ಅಗ್ರಿ ಶಾವರ್ಸ್ ಸಹಯೋಗದಲ್ಲಿ ಸೋಮವಾರಪೇಟೆಯ ಚಿಕ್ಕಬಸಪ್ಪ ಕ್ಲಬ್ ಆವರಣದಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಣೆ ಮಾಡಲಾಯಿತು.

ADVERTISEMENT

ಕಾರ್ಯಕ್ರಮಕ್ಕೆ ಚಿಕ್ಕಬಸಪ್ಪ ಕ್ಲಬ್ ಅಧ್ಯಕ್ಷ ಮಹೇಶ್ ಚಾಲನೆ ನೀಡಿದರು. ನಂತರ, ಮಾತನಾಡಿದ ಅವರು, ‘ಜನರಲ್ಲಿ ಕಾಫಿ ಬಗ್ಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಆಯೋಜನೆಗೊಂಡಿರುವ ಕಾರ್ಯ ಶ್ಲಾಘನೀಯ. ಇಂತಹ ಹೆಚ್ಚಿನ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ನಂದ ಮಾತನಾಡಿ, ‘ಕಾಫಿ ಬಳಕೆ ದೇಶದೊಳಗೆ ಕಡಿಮೆ ಇದ್ದು, ಜನರಲ್ಲಿ ಕಾಫಿ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಕಾಫಿ ಬಳಕೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಪ್ರಯುಕ್ತ ಇಂದು ಸಾರ್ವಜನಿಕರಿಗೆ ಉಚಿತವಾಗಿ 1 ಸಾವಿರ ಕಪ್ ಕಾಫಿ ವಿತರಿಸಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ 2016ರಿಂದ ಪ್ರತಿ ವರ್ಷ ದಿನಾಚರಣೆ ಆಚರಿಸಿಕೊಂಡು ಕಾಫಿ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಾಫಿ ಉದ್ಯಮವು ಬಿಕ್ಕಟ್ಟಿನಲ್ಲಿದ್ದಾಗ ಮತ್ತು ಕಾಫಿ ಬೆಲೆಗಳು ಅತ್ಯಂತ ಕಡಿಮೆ ಮಟ್ಟದಲ್ಲಿದ್ದಾಗ 2002ರಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ರಚನೆಯಾಯಿತು. ಇಂದು ಸಂಸ್ಥೆಯಲ್ಲಿ 400ಕ್ಕೂ ಹೆಚ್ಚು ಮಹಿಳಾ ಕಾಫಿ ಬೆಳೆಗಾರ ಸದಸ್ಯರನ್ನು ಹೊಂದಿದ್ದು, ಲಾಭದಾಯಕವಾಗಿ ಮುಂದುವರೆದಿದೆ’ ಎಂದರು.

ಕಾಫಿ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಕಾಫಿ ಬಳಕೆಯನ್ನು ಹೆಚ್ಚಿಸುವುದು, ಕೃಷಿ ಕಾರ್ಮಿಕರು ಮತ್ತು ಹೋಟೆಲ್ ಅತಿಥಿಗಳಿಗೆ ಉತ್ತಮ ದಕ್ಷಿಣ ಭಾರತದ ಫಿಲ್ಟರ್ ಕಾಫಿಯನ್ನು ಹೇಗೆ ತಯಾರಿಸಬೇಕೆಂಬ ಮಾಹಿತಿ ಕಾರ್ಯಗಾರಗಳನ್ನು ನಡೆಸುವುದು, ಕಾಫಿ ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತು ಚರ್ಮದ ಆರೈಕೆಗಾಗಿ ಸೌಂದರ್ಯವರ್ಧಕ ಉದ್ಯಮದಲ್ಲಿ ಕಾಫಿಯನ್ನು ಬಳಸುವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಆಂತರಿಕವಾಗಿ ಕಾಫಿ ಬಳಕೆ ಕಡಿಮೆ ಇದ್ದು, ಬಳಕೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉತ್ತಮ ಗುಣಮಟ್ಟದ ಕಾಫಿ ಬೆಳೆ ಬೆಳೆಯುವುದು, ಸಾವಯವ ಕೃಷಿ ಮತ್ತಿತರ ಕೃಷಿ ಚಟುವಟಿಕೆಯ ಬಗ್ಗೆ ಕಾಫಿ ಬೆಳೆಯುವ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ರಾಣಿ ನರೇಂದ್ರ, ನಿರ್ದೇಶಕಿ ಅನುರಾಧ ವಿಕ್ರಮ್, ಪೂರ್ಣೀಮಾ ವಿರೂಪಾಕ್ಷ ಭಾಗವಹಿಸಿದ್ದರು.

ಪೊನ್ನಂಪೇಟೆಯ ‘ಸಿಐಟಿ’ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಉಪನಿರ್ದೇಶಕ ಚಂದ್ರಶೇಖರ್ ಮತ್ತು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ ಅಧ್ಯಕ್ಷ ನಂದ ಬೆಳ್ಳಿಯಪ್ಪ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜೀವ್ ಹಾಗೂ ಕಾಫಿ ಮಂಡಳಿ ಸದಸ್ಯ ಟಿ.ಕಿಶೋರ್‌ಕುಮಾರ್ ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಾಫಿ ವಿತರಿಸಲಾಯಿತು. ಕಾಫಿಯಿಂದ ಆರೋಗ್ಯಕ್ಕೆ ಇರುವ ಲಾಭಗಳನ್ನು ಕುರಿತು ವಿಷಯ ತಜ್ಞರು ಮಾತನಾಡಿದರು.

ಶನಿವಾರಸಂತೆಯಲ್ಲಿ ಕಾಫಿ ದಿನಾಚರಣೆ

ಶನಿವಾರಸಂತೆ: ‘ಭಾರತದದಲ್ಲಿ ಬೆಳೆಯುತ್ತಿರುವ ಉತ್ಕೃಷ್ಟ ಗುಣಮಟ್ಟದ ಶೇ 70ರಷ್ಟು ಕಾಫಿ ಉತ್ಪನ್ನ ವಿದೇಶಕ್ಕೆ ರಪ್ತಾಗುತ್ತಿದ್ದರೂ ಸಹ ಸ್ಥಳೀಯ ಮಟ್ಟದಲ್ಲಿ ಜನರು ಕಡಿಮೆ ಪ್ರಮಾಣದಲ್ಲಿ ಕಾಫಿಯನ್ನು ಸೇವಿಸುತ್ತಿದ್ದಾರೆ’ ಎಂದು ಸೋಮವಾರಪೇಟೆ ಕಾಫಿ ಮಂಡಳಿಯ ಹಿರಿಯ ವಿಸ್ತರಣಾಧಿಕಾರಿ ರಂಜಿತ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾಫಿ ಮಂಡಳಿ ಸೋಮವಾರಪೇಟೆ ಹಾಗೂ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಮಾತನಾಡಿದರು.

ಭಾರತದಲ್ಲಿ ಉತ್ಕೃಷ್ಟ ಗುಣಮಟ್ಟದ ಕಾಫಿ ಬೆಳೆಯುತ್ತಿದ್ದು ಆಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಕಾಫಿ ಬೆಳೆಯುತ್ತಿರುವ ಕಡೆಗಳಲ್ಲಿ ಕಾಫಿ ಸೇವಿಸುವುದು ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಜನರು ಕಾಫಿಯನ್ನು ಸೇವಿಸುವಂತೆ ಪ್ರಚಾರದ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಈ ಮೂಲಕವಾಗಿ ಸ್ಥಳೀಯ ಜನರು ಕಾಫಿಯನ್ನು ಸೇವಿಸುತ್ತಾರೆ. ಜನರು ಕಾಫಿಯನ್ನು ಆರೋಗ್ಯಕರವಾದ ಪೇಯವಾಗಿ ಸೇವಿಸುವುದರಿಂದ ಕಾಫಿ ಮಾರುಕಟ್ಟೆ ಬೃಹತ್ ಉದ್ದಿಮೆಯಾಗಿ ಬೆಳೆಯುತ್ತದೆ. ಅದೇ ರೀತಿಯಲ್ಲಿ ಬೆಳೆಗಾರರು ಗುಣಮಟ್ಟದ ಕಾಫಿಯನ್ನು ಬೆಳೆಯಬೇಕಾಗುತ್ತದೆ ಎಂದರು.

ಅ.6 ಮತ್ತು 7ರಂದು ಮಡಿಕೇರಿಯಲ್ಲಿ ನಡೆಯುವ ದಸಾರ ಉತ್ಸವದಲ್ಲಿ ಕಾಫಿ ಮಂಡಳಿಯಿಂದ ಕಾಫಿ ಉತ್ಸವವನ್ನು ನಡೆಸಲಾಗುತ್ತದೆ. ಈ ವೇಳೆ ಕಾಫಿ ಬೆಳೆಗಾರರು ಕಾಫಿ ಉತ್ಪನ್ನವನ್ನು ಪ್ರಚಾರಗೊಳಿಸಲು ಭಾಗಿಯಾಗುವಂತೆ ಮನವಿ ಮಾಡಿದರು.

ಕಾಫಿ ಮಂಡಳಿಯ ಹಿರಿಯ ವಿಸ್ತರಣಾಧಿಕಾರಿ ಲಕ್ಷ್ಮಿಕಾಂತ್ ಮಾತನಾಡಿ ‘ಭಾರತದ ಕಾಫಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ನಿಟ್ಟಿನಲ್ಲಿ ಭಾರತೀಯ ಕಾಫಿ ಮಂಡಳಿಯು ಉತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಯುವಂತೆ ಬೆಳೆಗಾರರನ್ನು ಪ್ರೋತ್ಸಾಹಿಸುತ್ತಿದೆ’ ಎಂದರು.

ಈ ನಿಟ್ಟಿನಲ್ಲಿ ಬೆಳೆಗಾರರು ಗುಣಮಟ್ಟದ ಕಾಫಿಯನ್ನು ಬೆಳೆದು ಕಾಫಿ ಮಾರುಕಟ್ಟೆಯನ್ನು ಬೆಳೆಸಬೇಕು. ಅವರು ಅಂತರರಾಷ್ಟ್ರೀಯ ಕಾಫಿ ದಿನವನ್ನು ಬೆಳೆಗಾರರು ಕಾಫಿ ಉತ್ಸವವನ್ನಾಗಿ ಆಚರಿಸುವ ಮೂಲಕ ಕಾಫಿ ಬೆಳೆಯ ಮಹತ್ವದ ಬಗ್ಗೆ ಗ್ರಾಹಕರನ್ನು ಮತ್ತು ರೈತರನ್ನು ಜಾಗೃತಿಗೊಳಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯ ಚಂದ್ರಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ವಿ.ಎಲ್.ವರ್ಷಿತ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಶ್ವೇತಾ ವಸಂತ್ ಕಾಫಿ ಬೆಳೆಗಾರ ಎಚ್.ವಿ.ದಿವಾಕರ್ ಕಾರ್ಯಕ್ರಮ ಆಯೋಜಕ ಕೆ.ಸಿ.ಅಶೋಕ್ ಭಾಗವಹಿಸಿದ್ದರು. ಕಾಫಿ ದಿನದ ಅಂಗವಾಗಿ ಸಾರ್ವಜನಿಕರಿಗೆ ಕಾಫಿ ಪೇಯವನ್ನು ವಿತರಿಸಲಾಯಿತು.

ಸೋಮವಾರಪೇಟೆ ಚಿಕ್ಕಬಸಪ್ಪ ಕ್ಲಬ್ ಆವರಣದಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಣೆ ಮಾಡಲಾಯಿತು.
ಶನಿವಾರಸಂತೆಯಲ್ಲಿ ನಡೆದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಕಾಫಿ ಸೇವಿಸುವ ಮೂಲಕ ಜನರನ್ನು ಜಾಗೃತಿಗೊಳಿಸುತ್ತಿರುವ ಕಾಫಿ ಮಂಡಳಿ ಹಿರಿಯ ಅಧಿಕಾರಿಗಳಾದ ರಂಜಿತ್‍ಕುಮಾರ್ ಲಕ್ಷ್ಮಿಕಾಂತ್ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ವರ್ಷಿತ್ ಕಾರ್ಯದರ್ಶಿ ಶ್ವೇತಾ ವಸಂತ್ ಹಾಗೂ ರೋಟರಿ ಸದಸ್ಯರು ಮತ್ತು ಬೆಳೆಗಾರರು.
ಶನಿವಾರಸಂತೆಯಲ್ಲಿ ನಡೆದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿಕಾಫಿ ಮಂಡಳಿ ಅಧಿಕರಿ ಲಕ್ಷ್ಮಿಕಾಂತ್ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.