ADVERTISEMENT

ಜಮ್ಮಾಬಾಣೆ ಸಮಸ್ಯೆ; ಚರ್ಚೆ ಸಿದ್ಧ ಎಂದ ಬಿಜೆಪಿ ನಾಯಕರು

ಬಿಜೆಪಿ ಮುಖಂಡರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್ ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:51 IST
Last Updated 24 ಜನವರಿ 2026, 6:51 IST
ಕೆ.ಜಿ.ಬೋಪಯ್ಯ
ಕೆ.ಜಿ.ಬೋಪಯ್ಯ   

ಮಡಿಕೇರಿ: ‘ಜಮ್ಮಬಾಣೆ ಸಮಸ್ಯೆ ನಿವಾರಣೆಗೆ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದಿದ್ದು ಬಿಜೆಪಿ. ಮಾತ್ರವಲ್ಲ, ಈ ಸಮಸ್ಯೆಯ ನಿವಾರಣೆಗೆ ಶೇ 90ರಷ್ಟು ಪ್ರಯತ್ನ ಮಾಡಿದ್ದು ಬಿಜೆಪಿ. ಈ ಕುರಿತು ಮಾತ್ರವಲ್ಲ ಕಾಂಗ್ರೆಸ್ ತನ್ನ ಸಾಧನೆಯ ಬಗ್ಗೆಯೂ ಬಹಿರಂಗ ಚರ್ಚೆಗೆ ಬರಲಿ’ ಎಂದು ಬಿಜೆಪಿಯ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಸವಾಲೆಸೆದರು.

ಕೆ.ಜಿ.ಬೋಪಯ್ಯ ಮಾತನಾಡಿ, ‘ಈ ಸಮಸ್ಯೆ ನಿವಾರಣೆ ಹಿಂದೆ ಅನೇಕ ಮಹನೀಯರು ಇದ್ದಾರೆ. ಅವರ ಮತ್ತು ಬಿಜೆಪಿಯ ಪರಿಶ್ರಮವನ್ನೆಲ್ಲ ಬಿಟ್ಟು ಎಲ್ಲವನ್ನೂ ತಾವೇ ಮಾಡಿದ್ದು ಎಂದು ಕಾಂಗ್ರೆಸ್ ಪ್ರಚಾರ ಪಡೆಯುತ್ತಿರುವುದು ಸರಿಯಲ್ಲ’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

2011 ಡಿಸೆಂಬರ್ 16ರಲ್ಲಿ ‘ 2011ನೇ ಸಾಲಿನ ಕರ್ನಾಟಕ ಭೂ ಕಂದಾಯ (2ನೇ ತಿದ್ದುಪಡಿ) ವಿಧೇಯಕ’ವನ್ನು ಮಂಡಿಸಿ ಸದನದ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಆಗಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಿದರು. ಅಂತಿಮವಾಗಿ, ಆಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈ ಮಸೂದೆಗೆ ಅಂಕಿತ ಹಾಕಿದ ನಂತರ 2013ರ ಫೆಬ್ರುವರಿ 1ರಂದು ಜಾರಿಗೆ ಬಂದಿತು. ಈ ವಿಚಾರವನ್ನು ಕಾಂಗ್ರೆಸ್ ಮರೆಮಾಚಿದೆ ಎಂದು ಹೇಳಿದರು.

ADVERTISEMENT

ಈ ಕಾನೂನಿನ ವಿರುದ್ಧ 43 ಮಂದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಸುದೀರ್ಘವಾಗಿ ವಿಚಾರಣೆ ನಡೆಸಿದ ನ್ಯಾಯಾಲಯವು 2024ರ ಜುಲೈ 25ರಂದು ಈ ಅರ್ಜಿಗಳನ್ನು ವಜಾಗೊಳಿಸಿ ಜಮ್ಮಾಬಾಣೆ ಕುರಿತು ಸ್ಪಷ್ಟವಾಗಿ ತೀರ್ಮಾನ ನೀಡಿತು. ಜೊತೆಗೆ, ಈ ತೀರ್ಪನ್ನು ಒಂದು ತಿಂಗಳೊಳಗೆ ಜಾರಿಗೊಳಿಸಬೇಕು ಎಂದೂ ಸೂಚಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಈ ಆದೇಶವನ್ನು ಜಾರಿಗೆ ತರಲಿಲ್ಲ ಎಂದು ಅವರು ಆರೋಪಿಸಿದರು.

ಈ ಮಧ್ಯೆ ಬಿಜೆಪಿ ಸರ್ಕಾರ 2020ರಲ್ಲಿ ನೋಟರಿ ಅಫಿಡವಿಡ್‌ ಕೊಡುವ ಮೂಲಕ ಸುಲಲಿತವಾಗಿ ವಿಭಾಗ ಮಾಡಿಕೊಡುವಂತಹ ಸುತ್ತೋಲೆಯೊಂದನ್ನು ಜಾರಿಗೆ ತಂದಿತ್ತು. ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ 2024ರ ಜನವರಿ 31ರಂದು ಸುತ್ತೋಲೆಯೊಂದನ್ನು ಹೊರಡಿಸಿ, ವಿಭಾಗ ಪತ್ರಗಳು ನೋಂದಾಯಿತವಾಗಿದ್ದಲ್ಲಿ ಮಾತ್ರವೇ ಮ್ಯೂಟೆಶನ್ ಮಾಡಬೇಕು ಎಂದು ಸೂಚಿಸಿತು. ಇಲ್ಲಿಂದ ಸಮಸ್ಯೆ ಆರಂಭವಾಯಿತು ಎಂದು ಅವರು ಹೇಳಿದರು.

ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ನಾವು ಹಿಂದಿನಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಕಾಂಗ್ರೆಸ್‌ನವರು ಹೋರಾಟ ಏನು ಎಂಬುದನ್ನು ಅವರು ಬಹಿರಂಗಪಡಿಸಬೇಕು. ಬಿಜೆಪಿ ಜಾರಿಗೆ ತಂದಿದ್ದ ಪೌತಿ ಖಾತೆ ಆಂದೋಲನವನ್ನು ಕಾಂಗ್ರೆಸ್ ಮುಂದುವರಿಸಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ವಿಧಾನಪ‍ರಿಷತ್ತಿನ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್‌ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.