ADVERTISEMENT

ಮಡಿಕೇರಿ | ಜಮ್ಮಾ ಬಾಣೆ ಸಮಸ್ಯೆ ಅಂತ್ಯ: ಶಾಸಕ ಡಾ.ಮಂತರ್ ಗೌಡಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:02 IST
Last Updated 27 ಡಿಸೆಂಬರ್ 2025, 7:02 IST
ಶಾಸಕ ಡಾ.ಮಂತರ್‌ಗೌಡ ಅವರನ್ನು ತೆರೆದ ಜೀಪಿನಲ್ಲಿ ಮಡಿಕೇರಿಯಲ್ಲಿ ಮೆರವಣಿಗೆ ಮಾಡಲಾಯಿತು
ಶಾಸಕ ಡಾ.ಮಂತರ್‌ಗೌಡ ಅವರನ್ನು ತೆರೆದ ಜೀಪಿನಲ್ಲಿ ಮಡಿಕೇರಿಯಲ್ಲಿ ಮೆರವಣಿಗೆ ಮಾಡಲಾಯಿತು   

ಮಡಿಕೇರಿ: ನಗರದಲ್ಲಿ ಶಾಸಕ ಡಾ.ಮಂತರ್‌ಗೌಡ ಅವರನ್ನು ಸಾರ್ವಜನಿಕರು ಅಭಿನಂದಿಸಿದರು.

ನಗರದ ಲಯನ್ಸ್ ಸಂಸ್ಥೆ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಹಲವು ದಶಕಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕೊಡಗಿನ ಜಮ್ಮಾ ಭೂಮಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿ ಕಾಯ್ದೆ ರೂಪಕ್ಕೆ ಜಾರಿಗೊಳಿಸುವಲ್ಲಿ ಶ್ರಮಿಸಿದ್ದಾರೆ ಎಂದು ಅನೇಕ ಮಂದಿ ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮಂತರ್‌ಗೌಡ, ‘ಕೊಡಗು ಜಿಲ್ಲೆಯ ಕೃಷಿಕರನ್ನು ನೂರಾರು ವರ್ಷಗಳ ಕಾಲ ಕಾಡಿದ್ದ ಜಮ್ಮಾ ಬಾಣೆ ಸಮಸ್ಯೆಯನ್ನು ಒಂದು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಯತ್ನಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಈ ನಿಟ್ಟಿನಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರನ್ನು ಸದಾ ಸ್ಮರಿಸಬೇಕು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ನಿರಂತರ ಪ್ರಯತ್ನ ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಈ ಸಂಬಂಧ ಹಲವು ಬಾರಿ ಸಭೆ ನಡೆಸಿ ಸದನಕ್ಕೆ ಮಂಡಿಸುವ ಮೂಲಕ ಜಮ್ಮಾ ಬಾಣೆ ಸಮಸ್ಯೆಯನ್ನು ಕಾಯ್ದೆರೂಪಕ್ಕೆ ಜಾರಿಗೊಳಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದು ಅವರು ತಿಳಿಸಿದರು.

ಕೃಷಿಕರು ಸಹಕಾರ ಸಂಘದಲ್ಲಿ ಅಥವಾ ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯ ಪಡೆಯಲು, ಬೆಳೆ ವಿಮೆ, ಬೆಳೆ ಹಾನಿ ಮತ್ತಿತರ ಸರ್ಕಾರದ ಸೌಲಭ್ಯ ಪಡೆಯಲು ಆಯಾಯ ತೋಟದ ಮಾಲೀಕರಿಗೆ ಆರ್‌ಟಿಸಿ ಮಾಡಿಕೊಡಲು ಈ ಕಾಯ್ದೆ ಅನುಕೂಲವಾಗಲಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಪಟ್ಟೆದಾರರ ಹೆಸರಿನಲ್ಲಿ ಭೂಮಿ ಇದೆ. ಆದರೆ ಅವರ ಕುಟುಂಬದವರು ತೋಟವನ್ನು ಅನುಭವಿಸಿಕೊಂಡು ಬರುತ್ತಾರೆ. ಆದರೆ ಆರ್‌ಟಿಸಿ ಇಲ್ಲದೆ ಸೌಲಭ್ಯ ಪಡೆಯುವುದು ಕಷ್ಟವಾಗಿದೆ. ಜಮ್ಮಾಬಾಣೆ ಕಾಯ್ದೆ ತಿದ್ದುಪಡಿಯಿಂದ ಸರ್ಕಾರದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ. ಸ್ವತಂತ್ರ ಭೂಮಿ ಹಕ್ಕು ಪಡೆಯಲೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಒಳಿತು ಕೆಡುಕು ಇರುತ್ತದೆ. ಆದರೆ ಭೂಮಿ ಮಾರಿಕೊಳ್ಳದೆ ಭೂಮಿಯನ್ನು ಉಳಿಸಿಕೊಳ್ಳಬೇಕು. ಪ್ರತಿ ಕ್ಷೇತ್ರದಲ್ಲೂ ಕೆಲವು ಲೋಪದೋಷಗಳು ಇದ್ದು, ಅದನ್ನು ಸರಿಪಡಿಸಲು ಮುಂದಾಗಲಾಗಿದೆ. ಇದರಿಂದ ಸಣ್ಣ ಕೃಷಿಕರಿಗೆ ಅನುಕೂಲವಾಗಿದೆ ಎಂದರು. 

ಭೂಕಾಯ್ದೆ ತಿದ್ದುಪಡಿಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಪಕ್ಷಾತೀತವಾಗಿ ಎಲ್ಲರೂ ಸಹಕರಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾ ರಾಜೇಶ್ ಯಲ್ಲಪ್ಪ, ಮುಖಂಡರಾದ ಜಿ.ಚಿದ್ವಿಲಾಸ್, ಪ್ರಕಾಶ್ ಆಚಾರ್ಯ, ಹಂಸ, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಕೆ.ಎ.ದೇವಯ್ಯ, ಅಂಬೆಕಲ್ಲು ನವೀನ್ ಭಾಗವಹಿಸಿದ್ದರು.

ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿದೇಯಕ ಜಾರಿಗೊಳಿಸುವಲ್ಲಿ ಶಾಸಕರು ಶ್ರಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ಸಣ್ಣ ಸಣ್ಣ ಕೃಷಿಕರಿಗೆ ಅನುಕೂಲವಾಗಲಿದೆ
ತೇನನ ರಾಜೇಶ್ ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ .
ತೋಟದ ಮಾಲೀಕರ ಹೆಸರಿಗೆ ಕಂದಾಯ ನಿಗದಿಯಾಗಬೇಕು. ಆ ನಿಟ್ಟಿನಲ್ಲಿ ಈ ಕಾಯ್ದೆ ಜಾರಿಗೊಳಿಸಿರುವುದು ಸಹಕಾರಿಯಾಗಿದೆ
ಚುಮ್ಮಿ ದೇವಯ್ಯ ಓಂಕಾರೇಶ್ವರ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ.

‘ಮರು ಸರ್ವೆ ಮಾಡಿ ಗಡಿ ಗುರುತಿಸಬೇಕು’

‘ಕೊಡಗು ಜಿಲ್ಲೆಯಲ್ಲಿ ಜಮ್ಮಾ ಭೂಮಿಗೆ ಸಂಬಂಧಿಸಿದಂತೆ ಎಷ್ಟೋ ವರ್ಷಗಳಿಂದ ಸರ್ವೇ ಕಾರ್ಯ ಆಗಿಲ್ಲ. ಆದ್ದರಿಂದ ಮರು ಸರ್ವೆ ಮಾಡಿ ಗಡಿಯನ್ನು ಗುರುತಿಸುವುದು ಅತ್ಯಗತ್ಯ ಎಂದು ಡಾ.ಮಂತರ್‌ಗೌಢ ಅಭಿಪ್ರಾಯಪಟ್ಟರು. ಜೊತೆಗೆ ಸಿ ಮತ್ತು ಡಿ ಭೂಮಿಯ ಸಮಸ್ಯೆಯನ್ನು ಸಹ ಪರಿಹರಿಸಲು ಪ್ರಯತ್ನಿಸಲಾಗುವುದು. ರೈತರ ಪರವಾಗಿ ಸದಾ ಕೆಲಸ ಮಾಡಲು ಸಿದ್ದವಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಹೀಗೆ ಎಲ್ಲರ ಸಹಕಾರದಿಂದ ನಾವು ರೈತರ ಜೊತೆಗಿದ್ದೇವೆ ಎಂದರು.

ಮುಖಂಡರ ಶ್ಲಾಘನೆ ಮುಖಂಡ

ಟಿ.ಪಿ.ರಮೇಶ್ ಮಾತನಾಡಿ ‘ರಾಜ್ಯದಲ್ಲಿ ಜಾರಿಗೊಂಡ ಏಕರೂಪ ಭೂ ಕಾಯ್ದೆ ಕೊಡಗು ಜಿಲ್ಲೆಯಲ್ಲಿ ಜಾರಿಗೊಂಡಿರಲಿಲ್ಲ. ಹಾಗಾಗಿ ಸಮಸ್ಯೆಯಾಗಿ ಉಳಿದಿತ್ತು. ಕೊಡಗು ಜಮ್ಮಾ ಹಿಡುವಳಿದಾರರಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಕೃಷಿಕರಿಗೆ ಅನುಕೂಲವಾಗುವಲ್ಲಿ ಜಿಲ್ಲೆಯ ಶಾಸಕರು ದೊಡ್ಡ ಕಾಣಿಕೆ ನೀಡಿದ್ದು ಹೊಸ ಚೈತನ್ಯ ತುಂಬಿದ್ದಾರೆ’ ಎಂದು ಹೇಳಿದರು.

ವಕೀಲರಾದ ಎಂ.ಎ.ನಿರಂಜನ ಮಾತನಾಡಿ ‘ಜಮ್ಮಾ ಭೂಮಿ ಇಂದಿಗೂ ಸಹ ಕುಟುಂಬದ ಪಟ್ಟೆದಾರರ ಹೆಸರಿನಲ್ಲಿದೆ. ಬಹಳ ಕಾಲದಿಂದಲೂ ಜಟಿಲವಾಗಿದ್ದ ಸಮಸ್ಯೆಯನ್ನು ಪರಿಹರಿಸುವಲ್ಲಿ ಶಾಸಕರು ಶ್ರಮಿಸಿದ್ದಾರೆ’ ಎಂದರು. ‘ಜಮ್ಮಾ ಬಾಣೆ ಭೂಮಿ ಸಂಬಂಧ ಹೊಸ ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ಕೆಎಎಸ್ ದರ್ಜೆಯ ವಿಶೇಷ ಕಂದಾಯ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಅವರು ಸಲಹೆ ನೀಡಿದರು.

‘ಭೂ ಮಾಲೀಕತ್ವದ ಸಂಬಂಧ ಭೂಮಿ ಅನುಭವಿಸುತ್ತಿರುವ ಕುಟುಂಬಗಳು ಪಾಲು ಮಾಡಿಕೊಳ್ಳಬಹುದು. ಆದರೆ ಮಾಲೀಕತ್ವ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಸಲಹೆ ನೀಡಿದರು.’ ಮುಖಂಡ ತೆನ್ನಿರಾ ಮೈನಾ ಮಾತನಾಡಿ ಕೊಡಗಿನ ಜ್ವಲಂತ ಸಮಸ್ಯೆಯನ್ನು ಪರಿಹರಿಸುವಲ್ಲಿ ಶಾಸಕದ್ವಯರು ಶ್ರಮಿಸಿದ್ದಾರೆ. ನೂರಾರು ವರ್ಷಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಯತ್ನಿಸಿದ್ದಾರೆ’ ಎಂದರು. ಕೂರ್ಗ್ ಪ್ಲಾಂಟೇಶನ್ ಅಸೋಷಿಯೇಷನ್‍ನ ನಂದ ಬೆಳ್ಯಪ್ಪ ಮಾತನಾಡಿ ‘ಕರ್ನಾಟಕ ಭೂ ಕಂದಾಯ ಜಾರಿಗೊಳಿಸಿರುವುದರಿಂದ ಕೊಡಗು ಜಿಲ್ಲೆಯ ಕೃಷಿಕರಿಗೆ ಅನುಕೂಲವಾಗಿದೆ. ಹಲವು ವರ್ಷಗಳ ಸಮಸ್ಯೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.