ಮಡಿಕೇರಿ: ಶಾಸಕ ಡಾ.ಮಂತರ್‌ಗೌಡ ಅವರು ಕುಶಾಲನಗರದಲ್ಲಿ ಶನಿವಾರ ನಡೆಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರ ‘ಜನಸ್ಪಂದನ’ ಕಾರ್ಯಕ್ರಮಕ್ಕೆ ಮನವಿಗಳ ಮಹಾಪೂರವೇ ಹರಿದು ಬಂತು.
42 ಸರ್ಕಾರಿ ಕಚೇರಿಗಳಲ್ಲಿ ಆಗದೇ ಇರುವ ತಮ್ಮ ಕೆಲಸಗಳನ್ನು ಮಾಡಿಸಿಕೊಡಬೇಕು ಎಂದು 151 ಮಂದಿ ಮನವಿ ಮಾಡಿದರು. ಅನಗತ್ಯವಾಗಿ ಅಧಿಕಾರಿಗಳು ಅಲೆದಾಡಿಸುತ್ತಿರುವ ಕುರಿತು ಶಾಸಕರಲ್ಲಿ ಅಳಲು ತೋಡಿಕೊಂಡರು.
ಮನವಿ ನೀಡಿದವರನ್ನು ವೇದಿಕೆಯ ಮೇಲೆ ಕುಳ್ಳಿರಿಸಿ ಅವರ ನೋವನ್ನು ಆಲಿಸಿದ ಶಾಸಕ ಮಂತರ್‌ಗೌಡ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ವೇದಿಕೆಯ ಮೇಲೆಯೇ ಕರೆದು ಅರ್ಜಿ ಬಾಕಿ ಉಳಿಸಿಕೊಂಡಿರುವ ಕುರಿತು ವಿಚಾರಿಸಿದರು. ಬೇಗನೆ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೂಚಿಸಿದರು.
ಸಲ್ಲಿಕೆಯಾದ ಅರ್ಜಿಗಳಲ್ಲಿ ಕುಶಾಲನಗರದ ಕಂದಾಯ ಇಲಾಖೆಯ ಕಚೇರಿಗೆ ಸಂಬಂಧಿಸಿದ್ದೇ ಸಿಂಹಪಾಲು ಇದ್ದವು. ಈ ಕಚೇರಿಗೆ ಸಂಬಂಧಿಸಿದಂತೆ ಇದ್ದ 58 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕುಶಾಲನಗರದ ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ 28 ಅರ್ಜಿಗಳು ಸ್ವೀಕೃತವಾದವು.
ಅಲೆದಾಡಿಸುವುದು ಬೇಡ: ಮನವಿಗಳ ಸ್ವೀಕಾರ ಕಾರ್ಯದಲ್ಲಿ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ, ‘ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸಬಾರದು’ ಎಂದು ಹೇಳಿದರು.
ನಾಳೆ ಬನ್ನಿ, ನೋಡುತ್ತೇವೆ, ಮಾಡಿಕೊಡುತ್ತೇವೆ ಎಂಬ ಸಬೂಬುಗಳನ್ನಂತೂ ಹೇಳಲೇಬಾರದು. ನಿಯಮಗಳಡಿಯಲ್ಲಿ ಮಾಡಿಕೊಡಬಹುದಾದ ಕೆಲಸಗಳಾಗಿದ್ದರೆ ತಕ್ಷಣವೇ ಮಾಡಿಕೊಡಬೇಕು. ಒಂದು ವೇಳೆ ನಿಯಮಾನುಸಾರ ಆಗುವುದಿಲ್ಲ ಎಂದಾದರೆ ತಕ್ಷಣವೇ ಹಿಂಬರಹ ನೀಡಬೇಕು’ ಎಂದು ಅವರು ಸೂಚಿಸಿದರು.
ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುವುದು ಮುಖ್ಯ, ಸಾರ್ವಜನಿಕರ ಕೆಲಸಗಳನ್ನು ಕಾರ್ಯಾಂಗದ ಮೂಲಕ ಮಾಡಿಕೊಡಬೇಕಿದೆ. ಅದಕ್ಕಾಗಿ ಸರ್ಕಾರ ‘ಜನಸ್ಪಂದನ’ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ‘ಸರ್ಕಾರದ ಹಲವು ಕಾರ್ಯಕ್ರಮವನ್ನು ಅರ್ಹರಿಗೆ ತಲುಪಿಸುವುದು ಮುಖ್ಯ. ಆ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಇದೇ ವೇಳೆ ಮಂತರ್‌ಗೌಡ ಅವರು, ನಿವೇಶನ, ಮನೆ ಹಕ್ಕುಪತ್ರ ಹಾಗೂ ಪಿಂಚಣಿ ಪತ್ರವನ್ನು ಅರ್ಹರಿಗೆ ವಿತರಿಸಿದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರವನ್ನೂ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲ್ಲೂಕು ಅಧ್ಯಕ್ಷ ವಿ.ಪಿ.ಶಶಿಧರ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಡಿಪಿ ಸಮಿತಿ ಸದಸ್ಯೆ ಸುನಿತಾ, ತಹಶಿಲ್ದಾರರಾದ ಕಿರಣ್ ಗೌರಯ್ಯ, ನವೀನ್ ಕುಮಾರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಅರ್ಜಿ ಸಲ್ಲಿಸಲು ನಿಂತವರು 151 ಮಂದಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳ ಸ್ವೀಕಾರ ಸಲ್ಲಿಕೆಯಾದ ಮನವಿಗಳಲ್ಲಿ ಕುಶಾಲನಗರದ ಕಂದಾಯ ಇಲಾಖೆಗೆ ಸಂಬಂಧಿಸಿದ್ದೇ ಹೆಚ್ಚು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.