ADVERTISEMENT

ಸೋಮವಾರಪೇಟೆ | ಶ್ರೀ ತಪೋಕ್ಷೇತ್ರದಲ್ಲಿ ಜಾತ್ರೋತ್ಸವ 12ರಿಂದ

ಜನಮನ್ನಣೆ ಗಳಿಸಿರುವ ಕ್ಷೇತ್ರದಲ್ಲಿ ಮಹಾರಥೋತ್ಸವಕ್ಕೆ ಭರದ ಸಿದ್ಧತೆ

ಡಿ.ಪಿ.ಲೋಕೇಶ್
Published 8 ಏಪ್ರಿಲ್ 2025, 6:30 IST
Last Updated 8 ಏಪ್ರಿಲ್ 2025, 6:30 IST
ಸೋಮವಾರಪೇಟೆ ತಾಲ್ಲೂಕಿನ ಮನೆಹಳ್ಳಿ ಶ್ರೀ ತಪೋಕ್ಷೇತ್ರ
ಸೋಮವಾರಪೇಟೆ ತಾಲ್ಲೂಕಿನ ಮನೆಹಳ್ಳಿ ಶ್ರೀ ತಪೋಕ್ಷೇತ್ರ    

ಸೋಮವಾರಪೇಟೆ: ತಾಲ್ಲೂಕಿನ ಮನೆಹಳ್ಳಿಯ ಶ್ರೀ ತಪೋಕ್ಷೇತ್ರದಲ್ಲಿ ಏ.12ರಿಂದ ಅದ್ದೂರಿ ಜಾತ್ರೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. 

24 ವರ್ಷಗಳ ಇತಿಹಾಸವಿರುವ ತಾಲ್ಲೂಕಿನ ಮನೆಹಳ್ಳಿ ಶ್ರೀ ತಪೋಕ್ಷೇತ್ರ ಅತಿ ಕಡಿಮೆ ಅವದಿಯಲ್ಲಿ ಜನಮನ್ನಣೆ ಗಳಿಸಿ, ಹಲವು ಜನಪರ ಕಾರ್ಯ, ಸಮಾಜಮುಖಿ ಕೆಲಸಗಳಿಂದ ಭಕ್ತರ ಪ್ರೀತಿಗೆ ಪಾತ್ರವಾಗಿದೆ.

ಕೊಡ್ಲಿಪೇಟೆ ಹೋಬಳಿಯಲ್ಲಿನ ಸುಂದರ ಪ್ರಕೃತಿಯ ಮಧ್ಯೆ ಪ್ರಶಾಂತ ವಾತಾವರಣದಲ್ಲಿ ರಾರಾಜಿಸುತ್ತಿರುವ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಮಠ, ಶ್ರೀ ಮಹಂತ ಸ್ವಾಮೀಜಿಯವರ ನೇತೃತ್ವದಲ್ಲಿ ವೀರಶೈವ ಪರಂಪರೆಯ ಶಕ್ತಿಯಾಗಿ, ಸಂಸ್ಕಾರ, ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿ ಭಕ್ತರಿಗೆ ದಾರಿ ದೀಪವಾಗುವುದರೊಂದಿಗೆ ಪುಣ್ಯಕ್ಷೇತ್ರವಾಗಿದೆ.

ADVERTISEMENT

ಶ್ರೀ ಕ್ಷೇತ್ರ ಯತಿಗಳ ತಪೋನುಷ್ಠಾನಕ್ಕೆ ಅವಕಾಶ ಕಲ್ಪಿಸಿಕೊಟ್ಟ ಪುಣ್ಯ ಭೂಮಿಯಾಗಿತ್ತು. ಶ್ರೀ ಗುರುಸಿದ್ಧ ವೀರೇಶ ಯತಿಗಳ ತಪಶಕ್ತಿಯ ಫಲವಾಗಿ ಮನೆಹಳ್ಳಿಯ ಈ ಕ್ಷೇತ್ರಕ್ಕೆ ‘ತಪೋವನ’ ಎಂಬ ಹೆಸರು ಬಂದಿತು. ಹಿಂದೆ ಶ್ರೀ ವೀರೇಶ ಎಂಬ ಯತಿಗಳು ತಮ್ಮ ಸಂಚಾರದ ಅವಧಿಯಲ್ಲಿ ಕೇರಳ ಸಂಚಾರದ ನಂತರ ಕರ್ನಾಟಕದ ಸುಂದರ ಜಿಲ್ಲೆ ಪ್ರಕೃತಿಯ ರಮಣೀಯ ಸ್ಥಳವಾದ ಕೊಡಗಿಗೆ ಭೇಟಿ ಕೊಡುತ್ತಾರೆ. ಇಲ್ಲಿಯ ಜೀವನದಿ ಕಾವೇರಿ ಉಗಮ ಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಸೋಮವಾರಪೇಟೆ ಸಮೀಪ ಇರುವ ಪುಷ್ಪಗಿರಿ ತಪ್ಪಲಿನಲ್ಲಿ ಧ್ಯಾನಸ್ಥರಾಗಿರುವಾಗ ಶ್ರೀ ವೀರಭದ್ರರ ಪ್ರೇರಣೆಯಾಗುತ್ತದೆ. 

ಈ ಪ್ರೇರಣೆಯನ್ನು ಸಂಕಲ್ಪವಾಗಿಸಿಕೊಂಡು ಸೂಕ್ತ ಸ್ಥಾನವನ್ನು ಅರಸುತ್ತಾ ಶನಿವಾರಸಂತೆ ಸಮೀಪದ ಮನೆಹಳ್ಳಿ ಎಂಬ ಕಾಡಿನ ಪ್ರಶಾಂತತೆಗೆ ಮನಸೋತು, ಇಲ್ಲಿಯ ಪ್ರಕೃತಿ ಮಡಿಲಲ್ಲಿ ಕುಳಿತು, ಶ್ರೀ ವೀರಭದ್ರರನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ. ಇವರ ತಪಸ್ಸಿಗೆ ಮೆಚ್ಚಿದ ವೀರಭದ್ರ ದೇವರು ವೀರೇಶ ಯತಿಗಳೊಡನೆ ಇಲ್ಲಿಯೇ ನೆಲೆಸುತ್ತಾರೆ. ಹಾಗಾಗಿ ಹರ-ಗುರು ಎಂಬ ಬೇಧವಿಲ್ಲದೆ, ಇಲ್ಲಿನ ಆಲಯದಲ್ಲಿ ಮೂಲ ಮೂರ್ತಿಯಾಗಿ ಶ್ರೀ ವೀರಭದ್ರ ಹಾಗೂ ಉತ್ಸವ ಮೂರ್ತಿಯಾಗಿ ಶ್ರೀ ಸಿದ್ಧಯತಿಗಳು ಒಂದೇ ಗರ್ಭಗುಡಿಯಲ್ಲಿ ನೆಲೆನಿಂತು ‘ಹರ-ಗುರು’ವಿನ ಏಕೈಕ ಸನ್ನಿಧಾನವೆಂಬ ಕೀರ್ತಿ ಪಾತ್ರವಾಗಿದೆ. 

ಈ ಕ್ಷೇತ್ರವು ಅಜ್ಞಾತ ಸ್ಥಳವಾಗಿತ್ತು. ದಟ್ಟ ಕಾಡಿನಿಂದ ಆವೃತವಾಗಿದ್ದ ಸ್ಥಳವನ್ನು 2004ರಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿಯವರ ಅಣತಿಯಂತೆ ಮಹಾಂತ ಸ್ವಾಮೀಜಿಯವರು, ಇಲ್ಲಿಗೆ ಬಂದು ನೆಲೆಸಿದರು. ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಅತೀ ದೊಡ್ಡ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು, ಶ್ರೀ ಕ್ಷೇತ್ರವನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸುತ್ತಿದ್ದಾರೆ. 

ಇಂತಹ ಅಜ್ಞಾತ ಸ್ಥಳವನ್ನು ಸುಂದರ ಕ್ಷೇತ್ರವಾಗಿಸುವುದು ಶ್ರೀ ಗಳಿಗೆ ಒಂದು ಸವಾಲಾಗಿತ್ತು. ಇಲ್ಲಿನ ಮಳೆ ಗಾಳಿಗೆ ಹೊಂದಿಕೊಂಡು ಇಲ್ಲಿನ ಜನರ ಮನಸ್ಸನ್ನು ಗೆದ್ದು ಶ್ರೀ ಕ್ಷೇತ್ರವನ್ನು ಸುಂದರ ತಪೋವನವಾಗಿಸಿ, ಲೋಕಹಿತವೆ ಸ್ವಹಿತವೆಂದೂ ಶ್ರಮಿಸುತ್ತಾ ಕರ್ಮಸಿದ್ಧಾಂತವನ್ನು ಕಾಯಕ ಸಿದ್ಧಾಂತವನ್ನಾಗಿಸಿ ದುಡಿಯುತ್ತಾ ಭಿಕ್ಷಾಟನೆ ಮಾಡಿ ಬಂದ ಹಣದಲ್ಲಿ ಕಗ್ಗಲ್ಲುಗಳನ್ನು ಶಿಲೆಗಳನ್ನಾಗಿ ಮಾಡಿ, ಕಾಡನ್ನು ಚಂದದ ಹಳ್ಳಿಯಾಗಿ ಪರಿವರ್ತಿಸುತ್ತಾರೆ. ಬರಡಾಗಿದ್ದ ಭೂಮಿಯನ್ನು ಬೆಳೆ ಬೆಳೆಯುವ ಹಸಿರು ನೆಲವನ್ನಾಗಿಸಿ, ಸೂರಿಲ್ಲದ ಗುಡಿಸಲನ್ನು ಮಠವನ್ನಾಗಿ ಪರಿವರ್ತಿಸಿ, ತಮ್ಮ ಭಗೀರಥ ಪ್ರಯತ್ನದಿಂದ ಶ್ರೀ ಕ್ಷೇತ್ರವನ್ನು ಇಂದು ಪುಣ್ಯ ಭೂಮಿಯನ್ನಾಗಿ ಮಾಡಿ ಭಕ್ತರ ಪಾಲಿಗೆ ಆಶ್ರಯದಾತರಾಗಿದ್ದಾರೆ.

ಹಿಂದೂಸ್ಥಾನದ ಸಂಸ್ಕೃತಿಯ ದ್ಯೋತಕವಾಗಿರುವ, ಕ್ಷೀರಾಮೃತವನ್ನು ನೀಡಿ ಜನರ ಜೀವನಕ್ಕೆ ಆಸರೆಯಾಗಿರುವ ಪೂಜನೀಯ ಗೋವುಗಳನ್ನು ರಕ್ಷಿಸಲಾಗುತ್ತಿದೆ. ಇಲ್ಲಿನ ಗೋ ಶಾಲೆಯಲ್ಲಿ ಸುಮಾರು ನೂರಕ್ಕೂ ಅಧಿಕ ಗೋವುಗಳಿದ್ದು, ಇದರಲ್ಲಿ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಇರುವ ಸುಮಾರು ಮೂವತ್ತೆಂಟಕ್ಕೂ ಹೆಚ್ಚಿನ ವಿವಿಧ ತಳಿಗಳ ಗೋವುಗಳನ್ನು ಸಲಹಲಾಗುತ್ತಿದೆ. 

ಶ್ರೀ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರೆ ಸಾವಯವ ಕೃಷಿ. ರಾಸಾಯನಿಕ ಮುಕ್ತ ಬೆಳೆಗಳನ್ನು ಬೆಳೆದು ಭೂಮಿಯನ್ನು ರಾಸಾಯನಿಕ ಗೊಬ್ಬರಗಳಿಂದ ಮುಕ್ತವಾಗಿಸಿ ರಕ್ಷಿಸುವ ನಿಟ್ಟಿನಲ್ಲಿ ಶ್ರೀಗಳು ರೈತರಿಗೆ ಪ್ರೇರಣೆಯಾಗಿದ್ದಾರೆ. 

ಪ್ರತಿದಿನವೂ ಎಷ್ಟೇ ಭಕ್ತರು ಬರಲಿ ಅನ್ನ ದಾಸೋಹ ಮಾಡುವ ಶ್ರೀ ಕ್ಷೇತ್ರ ಹಸಿದ ಹೊಟ್ಟೆಯಲ್ಲಿ ಯಾರನ್ನು ಕಳಿಸುವುದಿಲ್ಲ. ಇಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ, ವಿದ್ಯಾದಾನ, ಅನ್ನದಾನ, ಮಾಡುತ್ತಾ ಬಡವರಿಗೆ, ಬೇಡಿ ಬಂದವರಿಗೆ ಆಶ್ರಯ ತಾಣವಾಗಿದೆ.

ಏ. 12ರಿಂದ 14ರ ವರೆಗೆ ಮೂರು ದಿನಗಳ ಕಾಲ ಮಠದ ಆವರಣದಲ್ಲಿ ಶ್ರೀ ಗುರುಸಿದ್ಧಸ್ವಾಮಿ ಜಾತ್ರಾಮಹೋತ್ಸವ ನಡೆಯಲಿದೆ. 12ರಂದು ಬೆಳಿಗ್ಗೆ ಧ್ವಜಾರೋಹಣದ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗುವುದು. 13ರಂದು ಅಡ್ಡಪಲ್ಲಕ್ಕಿ ಉತ್ಸವ ನಡೆಯುವುದು. 14ರಂದು ಕೊನೆಯ ದಿನವಾಗಿದ್ದು, ಬೆಳಿಗ್ಗೆ 5ಕ್ಕೆ ಶ್ರೀ ಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ, 6ಕ್ಕೆ ವಟುಗಳಿಗೆ ಲಿಂಗಧೀಕ್ಷೆ, 7ಕ್ಕೆ ಸಣ್ಣ ಚಂದ್ರಮಂಡಲೋತ್ಸವ, 11ಕ್ಕೆ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪೀತ್ಯರ್ಥ ಮುತ್ತೂದೆ ಸೇವೆ ಹಾಗೂ ಮಹಿಳೆಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯುವುದು. 12ಕ್ಕೆ ದಾಸೋಹ, ಸಂಜೆ 5.30ಕ್ಕೆ ಶ್ರೀ ಸ್ವಾಮಿ ಪ್ರಾಕಾರ ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಸ್ವಾಮಿಯವರ ರಥೋತ್ಸವಕ್ಕೆ ಚಾಲನೆ, 6.30ಕ್ಕೆ ಮಹಾರಥೋತ್ಸವ ನಡೆಸಲಾಗುವುದು ಎಂದು ಮಠದ ಮಠಾಧೀಶರಾದ ಶ್ರೀ ಮಹಂತ ಸ್ವಾಮೀಜಿ ತಿಳಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಮನೆಹಳ್ಳಿ ಶ್ರೀ ತಪೋಕ್ಷೇತ್ರದಲ್ಲಿ ರಥೋತ್ಸವದ ಸಾಂದರ್ಭಿಕ ಚಿತ್ರ.
ಸೋಮವಾರಪೇಟೆ ತಾಲ್ಲೂಕಿನ ಮನೆಹಳ್ಳಿ ಶ್ರೀ ತಪೋಕ್ಷೇತ್ರದಲ್ಲಿ ಗೋವಿನೊಂದಿಗೆ ಸ್ವಾಮೀಜಿ
ಸೋಮವಾರಪೇಟೆ ತಾಲ್ಲೂಕಿನ ಮನೆಹಳ್ಳಿ ಶ್ರೀ ತಪೋಕ್ಷೇತ್ರದಲ್ಲಿ ಹರ-ಗುರು ಒಟ್ಟಾಗಿ ಪೂಜಿಸುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ಮನೆಹಳ್ಳಿ ಶ್ರೀ ತಪೋಕ್ಷೇತ್ರದಲ್ಲಿ ಜಾತ್ರೋತ್ಸವದ ಸಂದರ್ಭ.

ಗೋಶಾಲೆಯಲ್ಲಿದೆ ನೂರಕ್ಕೂ ಅಧಿಕ ಗೋವುಗಳು ಸಾವಯವ ಕೃಷಿ ಕ್ಷೇತ್ರದ ಮತ್ತೊಂದು ವಿಶೇಷತೆ ಪ್ರತಿದಿನ ಭಕ್ತರಿಗೆ ಅನ್ನದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.