ನಾಪೋಕ್ಲು: ಜಿಲ್ಲೆಯಾದ್ಯಂತ ಬುಧವಾರ ಕೈಲ್ ಪೊಳ್ದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಾಪೋಕ್ಲು, ಮೂರ್ನಾಡು, ಪೇರೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೃಷಿಕರು ಕೈಲ್ ಮುಹೂರ್ತ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಭತ್ತದ ಗದ್ದೆ ಕೆಲಸದಲ್ಲಿ ದಣಿದ ಎತ್ತುಗಳ ಮೈತೊಳೆದು ನಂತರ ಉಳುವುದಕ್ಕೆ ಉಪಯೋಗಿಸಿದ ಆಯುಧಗಳಾದ ನೇಗಿಲು, ನೋಗಕ್ಕೆ ಪೂಜೆ ಸಲ್ಲಿಸಿದರು. ಎತ್ತುಗಳಿಗೆ ಪಣಿ ಪುಟ್ಟು ತಿನ್ನಿಸಿದರು. ಮನೆಯಲ್ಲಿರುವ ಆಯುಧಗಳಾದ ಕೋವಿ, ಕತ್ತಿಗಳನ್ನು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟು ಪೂಜೆ ಸಲ್ಲಿಸಿ ಹಬ್ಬದಲ್ಲಿ ಮಾಡಿದ ಮಾಂಸದ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸಿದರು.
ಪ್ರತಿವರ್ಷ ಮಳೆ ಕಡಿಮೆಯಾಗುತ್ತಿದ್ದಂತೆ ಕೃಷಿಕರು ಕೈಲ್ ಪೊಳ್ದ್ ಹಬ್ಬವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸುವುದು ರೂಢಿ. ಈ ವರ್ಷ ಬೆಳಗ್ಗಿನಿಂದ ಬಿಡದೇ ಸುರಿದ ಮಳೆ ಕ್ರೀಡಾಕೂಟದ ಸಂಭ್ರಮಕ್ಕೆ ಅಡ್ಡಿಯಾಯಿತು. ಪೇರೂರು ಗ್ರಾಮದ ಸ್ಪೋರ್ಟ್ಸ್ ಕ್ಲಬ್, ಮೂರ್ನಾಡಿನ ಸಹಕಾರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟಗಳನ್ನು ಮಳೆಯ ಕಾರಣದಿಂದ ಮುಂದೂಡಲಾಯಿತು.
ಸಮೀಪದ ಹೊದ್ದೂರು ಗ್ರಾಮದ ಕಬಡಕೇರಿ ಸ್ಪೋರ್ಟ್ಸ್ ಕ್ಲಬ್, ಮಡಿಕೇರಿಯ ನೆಹರೂ ಯುವ ಕೇಂದ್ರ, ಜಿಲ್ಲಾ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ 50ನೇ ವರ್ಷದ ಕೈಲ್ ಮುಹೂರ್ತ ಹಬ್ಬದ ಆಟೋಟ ಸ್ಪರ್ಧೆಗಳನ್ನು ಸಂಘದ ಆಟದ ಮೈದಾನದಲ್ಲಿ ಆಯೋಜಿಸಲಾಗಿತ್ತು. ವೇದಿಕೆಯ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ. ಹಂಸ ಉದ್ಘಾಟಿಸಿದರು.
ಕಾಫಿಬೆಳೆಗಾರ ಚೌರಿರ ಎ.ನಿರನ್ ಅಪ್ಪಯ್ಯ, ಕಬಡಕೇರಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚೆಟ್ಟಿಮಾಡ ಎಸ್. ಬಾಲಕೃಷ್ಣ ಪಾಲ್ಗೊಂಡಿದ್ದರು. ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಮಳೆಯ ಕಾರಣದಿಂದ ಮುಂದೂಡಲಾಯಿತು.
ಕೊಡವ ಸಮಾಜದ ಆಚರಣೆ 27ಕ್ಕೆ
ವಿರಾಜಪೇಟೆ: ಪಟ್ಟಣದ ಕೊಡವ ಸಮಾಜದಿಂದ ಕೈಲ್ ಪೊಲ್ದ್ ನಮ್ಮೆಯನ್ನು ಶನಿವಾರ (ಸೆ.27) ಕೊಡವ ಸಮಾಜ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕೊಡವ ಸಮಾಜದ ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ರತ್ನಾ ಸುಬ್ರಮಣಿ ತಿಳಿಸಿದರು.
ಪಟ್ಟಣದ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಂದು ಬೆಳಿಗ್ಗೆ 9.30ಕ್ಕೆ ಸ್ಪರ್ಧೆಗಳಿಗೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಚಾಲನೆ ನೀಡಲಿದ್ದಾರೆ. ಮಹಿಳೆಯರಿಗೆ ಮತ್ತು ಪುರುಷರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಹಗ್ಗಜಗ್ಗಾಟ, ವಾಲಗದ ಕುಣಿತ, ಶಾಟ್‌ಪಟ್ ಸೇರಿದಂತೆ ಹಲವು ಸ್ಪರ್ಧೆ ಇರಲಿವೆ ಎಂದರು.
ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಉಪಾಧ್ಯಕ್ಷ ಕಾಣತಂಡ ಜಗದೀಶ್, ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಮರಣನಿಧಿ ಕಾರ್ಯದರ್ಶಿ ಮಾದೇಯಂಡ ಸಂಪಿ ಪೂಣಚ್ಚ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.