ಮಡಿಕೇರಿ: ಕೊಡಗು ಜಿಲ್ಲೆಯಲ್ಲೆಡೆ ಭಾನುವಾರ ಕಕ್ಕಡ–18 ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಮದ್ದು ಸೊಪ್ಪು ಅಥವಾ ಆಟಿ ಸೊಪ್ಪಿನಿಂದ ವೈವಿಧ್ಯಮಯವಾದ ಖಾದ್ಯಗಳನ್ನು ತಯಾರಿಸಿ ಜನರು ಸವಿದರು. ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ಸಾಂಪ್ರದಾಯಿಕ ಆಚರಣೆಗಳು ನಡೆದವು.
ಮಡಿಕೇರಿ ಕೊಡವ ಸಮಾಜ, ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಮತ್ತು ಮಡಿಕೇರಿಯ 12 ಕೊಡವ ಕೇರಿ ವತಿಯಿಂದ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆದ ‘ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ’ದಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮಗಳು ನಡೆದವು.
ಮದ್ದು ಸೊಪ್ಪಿನಿಂದ ತಯಾರಿಸಿ 45ಕ್ಕೂ ಅಧಿಕ ವಿವಿಧ ಬಗೆಯ ತಿನಿಸುಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಕ್ಕಡ –18ರ ಮಹತ್ವ ಕುರಿತು ತಜ್ಞರು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಹಿಂದಿನಿಂದಲೂ ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಆಹಾರ ಪದ್ದತಿಗಳು ಆರೋಗ್ಯಕರವಾಗಿತ್ತು. ಈಗ ಅವುಗಳನ್ನು ಮರೆಯದೆ ನಾವೂ ಪಾಲಿಸಿಕೊಂಡು ಹೋಗಬೇಕು’ ಎಂದು ಹೇಳಿದರು.
ಇಂದು ರಾಸಾಯನಿಕಯುಕ್ತ ಆಹಾರ ಪದಾರ್ಥಗಳೆ ಇವೆ. ಅವುಗಳಿಂದ ನಾವು ದೂರ ಇರಬೇಕು. ಜೀವನದಲ್ಲಿ ಎಷ್ಟೇ ಕೆಲಸದ ಒತ್ತಡವಿದ್ದರೂ, ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶಾಸಕ ಎ.ಎಸ್ ಪೊನ್ನಣ್ಣ ಅವರ ಪತ್ನಿ, ಸಮಾಜ ಸೇವಕಿ ಕಾಂಚನ್ ಪೊನ್ನಣ್ಣ ಮಾತನಾಡಿ, ‘ಕೊಡಗಿನ ವಾತಾವರಣಕ್ಕೆ ತಕ್ಕಂತೆ ಪೂರ್ವಜರು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಪದ್ದತಿಗಳೇ ನಮ್ಮನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ. ಕಕ್ಕಡ 18 ಕೊಡವರ ಹೆಮ್ಮೆಯ ಹಬ್ಬ. ಇಂತಹ ಆಚರಣೆಗಳಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆಯ ಪರಿಚಯವಾಗುತ್ತದೆ’ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷೆ ವೀಣಾ ಅಚ್ಚಯ್ಯ ಮಾತನಾಡಿ, ‘ಸಮಾಜದ ಅಭಿವೃದ್ಧಿಗೆ ಹಣಕಾಸಿನ ಅಗತ್ಯವಿದ್ದು, ಅನುದಾನಕ್ಕಾಗಿ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿ ಗಮನ ಸೆಳೆಯಲಾಗಿದೆ. ಸರ್ಕಾರದಿಂದ ಅನುದಾನ ಒದಗಿಸಲು ಶಾಸಕರು ಪ್ರಯತ್ನಿಸಬೇಕು’ ಎಂದು ಮನವಿ ಮಾಡಿದರು.
ಕನ್ನಂಡ ಕವಿತಾ ಅವರ ನಿಯೋಗವು ಮಡಿಕೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾಗಿ ಕೊಡವ ಸಮುದಾಯದ ಸಮಸ್ಯೆ ಹಾಗೂ ಸ್ಥಿತಿಗತಿ ಬಗ್ಗೆ ಮನವರಿಕೆ ಮಾಡಿದ್ದು, ಅಗತ್ಯ ನೆರವಿನ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕೊಡವ ಸಮಾಜದ ಅಧ್ಯಕ್ಷ ಮಂಡುಂಡ ಪಿ.ಮುತ್ತಪ್ಪ ಹಿಂದಿನ ಕಾಲದ ಕೃಷಿ ಚಟುವಟಿಕೆ ಹಾಗೂ ದಿನದ ವಿಶೇಷ ಕುರಿತು ಮಾತನಾಡಿದರು.
ಪೊಮ್ಮಕ್ಕಡ ಒಕ್ಕೂಟದ ಬ್ಯಾಡ್ಜ್ ಅನ್ನು ಕಾಂಚನ್ ಪೊನ್ನಣ್ಣ ಅನಾವರಣಗೊಳಿಸಿದರು. ಉಪನ್ಯಾಸಕಿ ಅಜ್ಜಿಕುಟ್ಟಿರ ಸುನಿತಾ ಗಿರೀಶ್ ‘ಕಕ್ಕಡ ನಮ್ಮೆರ ಬೋಜ’ ವಿಷಯದ ಕುರಿತು ವಿಚಾರ ಮಂಡಿಸಿದರು.
ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದರಾದ ರಾಣಿ ಮಾಚಯ್ಯ, ಕೊಡವ ಸಮಾಜದ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ ಭಾಗವಹಿಸಿದ್ದರು.
₹ 20 ಲಕ್ಷ ಅನುದಾನ: ಶಾಸಕ ಭರವಸೆ
ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟಕ್ಕೆ ಕಟ್ಟಡ ನಿರ್ಮಿಸಿಕೊಡಲು ರಾಜ್ಯ ಸರ್ಕಾರದಿಂದ ₹ 20 ಲಕ್ಷ ಅನುದಾನ ಒದಗಿಸಿಕೊಡಲಾಗುವುದು ಎಂದು ಶಾಸಕ ಡಾ.ಮಂತರ್‌ಗೌಡ ಭರವಸೆ ನೀಡಿದರು. ಕೊಡವ ಸಮಾಜದಂತೆ ಪೊಮ್ಮಕ್ಕಡ ಒಕ್ಕೂಟಕ್ಕೂ ಸ್ವಂತ ಕಟ್ಟಡದ ಅಗತ್ಯತೆ ಇದೆ. ನೂತನ ಕಟ್ಟಡ ನಿರ್ಮಾಣಕ್ಕೆ ₹ 20 ಲಕ್ಷ ಅನುದಾನ ಒದಗಿಸಲಾಗುವುದು. ಸಂಘಟನೆಯ ಅಭಿವೃದ್ಧಿಗೆ ಎಲ್ಲ ಬಗೆಯ ನೆರವು ನೀಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.