ADVERTISEMENT

ಮಂಜಿನ ನಗರಿಯಲ್ಲಿ ವಿದ್ಯಾರ್ಥಿಗಳ ‘ಕಲಾವೈಭವ’

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 15:41 IST
Last Updated 3 ಜೂನ್ 2023, 15:41 IST
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ನಡೆದ ‘ಕಲಾವೈಭವ’ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ನಡೆದ ‘ಕಲಾವೈಭವ’ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು   

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ಕಲೆಯ ರಂಗು ತುಂಬಿತ್ತು. ಕಾಲೇಜು ಏರ್ಪಡಿಸಿದ್ದ ‘ಕಲಾ ವೈಭವ’ ಹಲವು ವಿಶೇಷಗಳಿಂದ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯಿತು. ಕೊಡಗು ಜಿಲ್ಲೆ ಮಾತ್ರವಲ್ಲ ಮೈಸೂರು, ಪುತ್ತೂರು, ಮಂಗಳೂರಿನ 19 ಕಾಲೇಜುಗಳ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು 10 ಸ್ಪರ್ಧೆಗಳಲ್ಲಿ ಭಾಗವಹಿಸಿ ಕಣ್ಮನ ಸೆಳೆದರು.

ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿಗಳು ತಮ್ಮ ಕಲೆಯನ್ನು ಪ್ರದರ್ಶಿಸಿದ್ದರು. ಚಾವಣಿಗೆ ಅಂದವಾಗಿ ಬಣ್ಣ ಬಣ್ಣದ ಕೊಡೆಯನ್ನು ಅಲಂಕರಿಸಿದ್ದರೆ, ಹಳೆಯ ಕಾರೊಂದರ ಪ್ರತಿಕೃತಿಯನ್ನು ಮಾಡಿದ್ದರು. ‘ಸೆಲ್ಫಿ ಜೋನ್‌’ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿತ್ತು.

ಮಡಿಕೇರಿಯ ಉದ್ಯಮಿ ಪೊನ್ನಚ್ಚನ ಮಧು ಸೋಮಣ್ಣ ಅವರು ಸಂಗ್ರಹಿಸಿದ ಹಳೆಯ ವಸ್ತುಗಳ ವಸ್ತು ಪ್ರದರ್ಶನ ‘ಕಲಾವೈಭವ’ಕ್ಕೆ ಮೆರುಗನ್ನು ತುಂಬಿತ್ತು. ಹಳೆಯ ಕಾಲದ ಸ್ಟೌವ್, ಫಿಲ್ಟರ್, ಬುತ್ತಿ, ಪಾನ್ ಡಬ್ಬ, ದೀಪ, ಗಂಜಿ ಪಾತ್ರೆ, ಬೋಗನಿ, ಬಿಂದಿಗೆ, ಸೆಕಾಲ, ಸಣ್ಣ ಹಂಡೆ, ಕಂಜಿಕಲ, ಬುಟ್ಟಿಗಳು, ಮೀನು ಹಿಡಿಯುವ ಪೊಡ, ಏಲಕ್ಕಿ ಬುಟ್ಟಿ, ಪೆಟ್ಟಿಗೆ, ಇಡೆಮನೆ ಹಿಟ್ಟು ಒರಳ್, ತುರಿ ಮಣೆ, ಕೆಟಲ್ ಕಗ್ ಧೂಪ, ಕಾಫಿರೋಸ್ಟರ್ ಸೇರಿದಂತೆ ಹಲವು ಬಗೆಯ ವಸ್ತುಗಳು ಕುತೂಹಲ ಹುಟ್ಟಿಸಿದವು.

ADVERTISEMENT

ವೇದಿಕೆಯಲ್ಲಿ ನಡೆದ ಬರೋಬರಿ 10 ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಲವಲವಿಕೆಯಿಂದಲೇ ಭಾಗವಹಿಸಿದ್ದರು. ಫ್ಯಾಷನ್ ಶೊ, ವಿಶಿಷ್ಟ ಸಂಗೀತ ಸ್ಪರ್ಧೆ,‌ ಜನಪದ ನೃತ್ಯ, ಐತಿಹಾಸಿಕ ವ್ಯಕ್ತಿಯ ಬಗ್ಗೆ ಫ್ಯಾಷನ್ ಶೊ, ಆಂಗ್ಲ ಭಾಷಾ ಹಿಡಿತ ಸ್ಪರ್ಧೆ, ಛಾಯಾಚಿತ್ರ ಲೇಖನ, ತರಕಾರಿ ವಿನ್ಯಾಸ ಸೇರಿದಂತೆ ಹಲವು ಸ್ಪರ್ಧೆಗಳು ದಿನವಿಡೀ ನಡೆದವು.

ವಿರಾಜಪೇಟೆ ಕಾವೇರಿ ಕಾಲೇಜು ಪ್ರಥಮ ಸ್ಥಾನ ಪಡೆದರೆ, ಸಂತ ಅನ್ನಮ್ಮ ಕಾಲೇಜು ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದವು. ಈ ಎಲ್ಲ ಕಾರ್ಯಕ್ರಮಗಳನ್ನು ವಿವಿಧ ಕಾಲೇಜುಗಳ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಕಣ್ಮನಗಳನ್ನು ತುಂಬಿಕೊಂಡರು.

‘ಕಲಾ ವೈಭವ’ ಉದ್ಘಾಟಿಸಿದ ಕೊಡಗು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸೀನಪ್ಪ ಅವರು ನಿರುದ್ಯೋಗ ಸಮಸ್ಯೆ ಕುರಿತು ಪ್ರಸ್ತಾಪಿಸಿದರು.

‘ಲಕ್ಷಾಂತರ ಮಂದಿ ಪದವೀಧರರು ಇಂದು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಉದ್ಯೋಗ ಪಡೆಯುವ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ವಿದ್ಯಾರ್ಥಿ ಸಂಘದ ಸಂಯೋಜಕ ತಳವಾರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಹಬರ್ ಪಾಷಾ, ಮೇಜರ್ ಪ್ರೊ.‌ರಾಘವ.‌ ಬಿ, ಕಾರ್ಯಕ್ರಮದ ಸಂಯೋಜಕ ಅಲೋಕ್ ಬಿಜೈ,ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ಮೇಘ‌ ಇದ್ದರು.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ನಡೆದ ‘ಕಲಾವೈಭವ’ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ನಡೆದ ‘ಕಲಾವೈಭವ’ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಪೊನ್ನಚ್ಚನ ಮಧು ಸೋಮಣ್ಣ ಅವರು ಸಂಗ್ರಹಿಸಿದ ಹಳೆಯ ವಸ್ತುಗಳ ವಸ್ತು ಪ್ರದರ್ಶನ ಗಮನ ಸೆಳೆಯಿತು
ವಿದ್ಯಾರ್ಥಿನಿಯರು ಸಂಭ್ರಮದಿಂದ ಸೆಲ್ಫೀ ಜ್ಹೋನ್‌ನಲ್ಲಿ ಫೋಟೊ ತೆಗೆಸಿಕೊಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.