ವಿರಾಜಪೇಟೆ: ರಾಜ್ಯದ ವಿವಿಧ ಸ್ಥಳಗಳಲ್ಲಿ ಕಣಿಯರು ನೆಲೆ ನಿಂತಿದ್ದರೂ ಆರ್ಥಿಕವಾಗಿ ಸಬಲರಾಗಿಲ್ಲ ಎಂದು ಮೇಲುಕೋಟೆಯ ಯತಿರಾಜದಾಸರು ಗುರುಪೀಠದ ಪೀಠಾಧಿಪತಿ ಶ್ರೀನಿವಾಸ ನರಸಿಂಹ ಗುರೂಜಿ ಬೇಸರಿಸಿದರು.
ಸಮೀಪದ ಬಿಟ್ಟಂಗಾಲ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಬೆಂಗಳೂರಿನ ಬಿ.ಸಿ. ರಂಗಪ್ಪ ವಿದ್ಯಾನಿಧಿ ಟ್ರಸ್ಟ್, ಮೇಲುಕೋಟೆಯ ಯತಿರಾಜದಾಸರ್ ಗುರುಪೀಠ ಮತ್ತು ಕೊಡಗು ಕಣಿಯರ ವಿದ್ಯಾಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ಕಣಿಯರ ಜನಾಂಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪೂರ್ವಜರಿಂದ ಬಂದ ಕಲೆ ಇಂದು ನಶಿಸಿ ಹೋಗುವ ಹಂತದಲ್ಲಿದೆ. ಶಾಸ್ತ್ರ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕು. ಕೊಡಗಿನ ಆರಾಧ್ಯ ದೈವ ಇಗ್ಗುತಪ್ಪ ದೇಗುಲದಲ್ಲಿ ಹುತ್ತರಿ ಮತ್ತು ಕೈಲ್ ಮುಹೂರ್ತದ ದಿನಾಂಕ ಮತ್ತು ಸಮಯವನ್ನು ಕಣಿಯರು ಮಾಡುತ್ತಿದ್ದು, ಇದು ಜನಾಂಗಕ್ಕೆ ದೊರೆತಿರುವ ಮನ್ನಣೆಯಾಗಿದೆ. ಸರ್ಕಾರವು ಇತರ ಜನಾಂಗಕ್ಕೆ ನೀಡುವ ಸೌಲಭ್ಯ ಮತ್ತು ಸವಲತ್ತುಗಳನ್ನು ಕಣಿಯರ ಜನಾಂಗಕ್ಕೂ ನೀಡಬೇಕು’ ಎಂದು ಒತ್ತಾಯಿಸಿದರು.
ಕೊಡಗು ಕಣಿಯರ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಕಣಿಯರ ಜೆ.ಪ್ರಕಾಶ್ ಮಾತನಾಡಿ, ‘ಜಿಲ್ಲೆಯಲ್ಲಿ ಕಣಿಯ ಜನಾಂಗದ ಸಂಖ್ಯೆ ವಿರಳವಾಗಿದೆ. ಇಂದಿಗೂ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಕಣಿಯರಿಗೆ ವಿಶೇಷ ಸ್ಥಾನಮಾನ ಲಭಿಸಿರುವುದು ಉತ್ತಮ ವಿಚಾರ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಕಣಿಯರ ವಿಧ್ಯಾಭಿವೃದ್ಧಿ ಸಂಘದ ಅಧ್ಯಕ್ಷ ದೇವಯ್ಯ, ‘ಜಿಲ್ಲೆಯಲ್ಲಿ ಕಣಿಯರ ಸಮುದಾಯವರು ಸಂಖ್ಯೆಯಲ್ಲಿ ಕಡಿಮೆಯಿದ್ದರೂ, ಸಾಧನೆ ಮಾತ್ರ ಅಪಾರ. ಸಮುದಾಯದವರು ಕುಲ ಕಸುಬನ್ನು ಮರೆಯಬಾರದು. ಅಳಿವಿನಂಚಿನಲ್ಲಿರುವ ಮೂಲ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ನಗದು ಹಾಗೂ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಸಮಾಜ ಸೇವೆ ಕ್ಷೇತ್ರದಲ್ಲಿ ಸಿ. ಸಂಜಯ್ ಕುಮಾರ್, ಸಂಗೀತ ಕ್ಷೇತ್ರದಲ್ಲಿ ವಿದ್ವಾನ್ ಆರ್. ಪುರುಷೋತ್ತಮ, ನೃತ್ಯ ಕ್ಷೇತ್ರದಲ್ಲಿ ವಿದ್ವಾನ್ ಯೋಗೇಶ್ ಕುಮಾರ್ ಎಸ್., ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಗಿರೀಶ್ಚಂದ್ರ, ಕಿರುತೆರೆಯ ಕಲಾವಿದ ಕಡುವಚೇರಿರ ಉಮೇಶ್, ನಿವೃತ್ತ ಸೈನಿಕ ಚೋಂಡೆಪಂಡ ಶಂಬು ಪೂಣಚ್ಚ, ಜ್ಯೋತಿಷ್ಯ ಕ್ಷೇತ್ರದಲ್ಲಿ ನಾಗರತ್ನಾ ಆರ್., ಡಾ. ರವಿಕುಮಾರ್, ಶಶಿಕುಮಾರ್ ಪಂಡಿತ್ ಸುಳ್ಯ, ಪಂಡಿತ್ ಶಿಜು ಗುರುಕಳ್ ವಿರಾಜಪೇಟೆ, ಪ್ರಭಾಕರ್ ಪಂಡಿತ್ ಉಳ್ಳಾಲ ಅವರನ್ನು ಸನ್ಮಾನಿಸಲಾಯಿತು.
‘ಕೊಡಗಿನಲ್ಲಿ ಕಣಿಯರು ಜ್ಯೋತಿಷ್ಯ ಸಮುದಾಯ’ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಉದ್ಯಮಿ ಸಿ.ಸಂಜಯ್ ಕುಮಾರ್, ಬಿ.ಇ.ಎಲ್ ನಿವೃತ್ತ ಡಿ.ಜಿ.ಎಂ ಲೋಲಕೃಷ್ಣ, ಬೆಂಗಳೂರು ಕಣಿಯರ ಸೇವಾ ಸಮಾಜದ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕಣಿಯರ ವಿದ್ಯಾಭಿವೃದ್ಧಿ ಸಂಘ ಕೊಡಗು ಘಟಕದ ಸಂಸ್ಥಾಪಕ ಅಧ್ಯಕ್ಷ ಕೆ.ಎನ್ ನಾಣಯ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಕಣಿಯರ ಸೇವಾ ಸಂಘದ ಪದಾಧಿಕಾರಿಗಳು, ಜನಾಂಗದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.