ADVERTISEMENT

ಕನ್ನಡ ಭಾಷೆ ಬಳಸಿದಷ್ಟು ಬೆಳೆಯುತ್ತದೆ: ಇಸ್ಮಾಯಿಲ್

ಎನ್.ಮಹಾಬಲೇಶ್ವರ ಭಟ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 13:52 IST
Last Updated 12 ಸೆಪ್ಟೆಂಬರ್ 2024, 13:52 IST
ವಿರಾಜಪೇಟೆ ಸಮೀಪದ ಬೇಟೋಳಿ ಗುಂಡಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಈಚೆಗೆ ನಡೆದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮಕ್ಕೆ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ್ ಪದ್ಮನಾಭ ಚಾಲನೆ ನೀಡಿದರು
ವಿರಾಜಪೇಟೆ ಸಮೀಪದ ಬೇಟೋಳಿ ಗುಂಡಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಈಚೆಗೆ ನಡೆದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮಕ್ಕೆ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ್ ಪದ್ಮನಾಭ ಚಾಲನೆ ನೀಡಿದರು   

ವಿರಾಜಪೇಟೆ: ‘ಕನ್ನಡಿಗರು ಕನ್ನಡ ಭಾಷೆ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಿರಬೇಕೇ ಹೊರತು ಇತರ ಭಾಷೆಯ ಮೇಲಲ್ಲ’ ಎಂದು ಬೇಟೋಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೀತಲತಂಡ ಇಸ್ಮಾಯಿಲ್ ಹೇಳಿದರು.

ತಾಲ್ಲೂಕಿನ ಬೇಟೋಳಿ ಗ್ರಾಮದ ಗುಂಡಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ನಡೆದ ‘ಎನ್.ಮಹಾಬಲೇಶ್ವರ ಭಟ್ ದತ್ತಿನಿಧಿ ಉಪನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವ ಮೂಲಕ ಕನ್ನಡವನ್ನು ಬೆಳೆಸಬೇಕು’ ಎಂದರು.

ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಸವರಾಜ್ ಮಾತನಾಡಿ, ‘ಪಂಪ, ರನ್ನ, ಪೊನ್ನರು ರಚಿಸಿದ ಕಾವ್ಯಗಳು ಇಂದಿಗೂ ಜೀವಂತವಾಗಿದ್ದು, ಸಾರ್ವಕಾಲಿಕ ಸಂದೇಶ ನೀಡುತ್ತವೆ. ವಚನ ಸಾಹಿತ್ಯವು ವಿಶ್ವಮಾನ್ಯವಾಗಿದ್ದು ಸಾರ್ವತ್ರಿಕವಾಗಿ ಜನಮನ ಸೆಳೆದಿವೆ. ಭಕ್ತಿ ರಸ ಚೆಲ್ಲಿದ ದಾಸ ಸಾಹಿತ್ಯದ ಕೀರ್ತನೆಗಳು ಎಂದೆಂದೂ ಜನಪ್ರಿಯ. ಇಷ್ಟೆಲ್ಲಾ ಶ್ರೀಮಂತಿಕೆಯಿರುವ ಭಾಷೆಯನ್ನು ಇಂದು ಅಭಿಮಾನ ಶೂನ್ಯತೆಯಿಂದ ಮಾತನಾಡದೇ ಕಡೆಗಣಿಸಲಾಗುತ್ತಿದೆ.  ಕನ್ನಡ ಭಾಷೆಯು ಇಂಗ್ಲಿಷ್, ಹಿಂದಿ ಭಾಷೆಗಳಿಂದಾಗಿ ನಲುಗುತ್ತಿದೆ. ಇಂಗ್ಲಿಷ್ ಉದ್ಯೋಗದ ಭಾಷೆಯಾದರೂ ಭಾವ ಅಭಿವ್ಯಕ್ತಿಗೆ ಹೃದ್ಯವಾದುದು ಕನ್ನಡವೇ’ ಎಂದರು.

ADVERTISEMENT

ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ, ಗೌರವ ಕಾರ್ಯದರ್ಶಿ ಎಚ್.ಜಿ ಸಾವಿತ್ರಿ, ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ.ರಜಾಕ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸೀತಾ, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.