
ಸೋಮವಾರಪೇಟೆ: ಐಗೂರಿನಲ್ಲಿ ಫೆ.9 ರಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ವಿವಿಧ ಸಮಿತಿಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳ ಪೂರ್ವಭಾವಿ ಸಭೆ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ನಡೆಯಿತು.
ಸಮ್ಮೇಳನ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ನಡೆಸಲು ವಿವಿಧ ಸಮಿತಿಯವರ ಕೊಡುಗೆ ಅಪಾರವಾದದು ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್ ಹೇಳಿದರು.
‘ಸಮ್ಮೇಳನದಲ್ಲಿ ಭಾಗವಹಿಸುವ ಕನ್ನಡಾಭಿಮಾನಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಬೇಕು. ಅತಿಥ್ಯದ ವಿಷಯದಲ್ಲಿ ಆಹಾರ ಸಮಿತಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಸಮಿತಿಗೆ ಹೆಚ್ಚಿನ ಜನರನ್ನು ಸೇರಿಸಿಕೊಳ್ಳಬೇಕು. ಹಣಕಾಸು ಸಮಿತಿಯವರಿಗೆ ಎಲ್ಲರೂ ಸಹಕಾರ ನೀಡಬೇಕು. ಪ್ರತಿಯೊಂದು ಸಮಿತಿಯವರ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಲಿದೆ’ ಎಂದರು.
ಮೆರವಣಿಗೆಯಲ್ಲಿ ಗ್ರಾಮೀಣ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ರೀಶಕ್ತಿ, ಸ್ವಸಹಾಯ, ಅಂಗನವಾಡಿ, ಧರ್ಮಸ್ಥಳ ಸಂಘದ ಮಹಿಳೆಯರು ಮತ್ತು ಎಲ್ಲಾ ಕನ್ನಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯದರ್ಶಿ ಜ್ಯೋತಿ ಅರುಣ್ ಮಾಹಿತಿ ಒದಗಿಸಿದರು.
ಸಾಧಕರಿಗೆ ಸನ್ಮಾನ, ದ್ವಾರಗಳು ಮತ್ತು ವೇದಿಕೆಯ ನಿರ್ಮಾಣದ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು. ಕಸಾಬ ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿ, ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಎ.ಪಿ.ವೀರರಾಜು, ಖಜಾಂಚಿ ಕೆ.ಪಿ. ದಿನೇಶ್, ಪದಾಧಿಕಾರಿಗಳಾದ ವಾಸಂತಿ, ಶುಭ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.