
ಮಡಿಕೇರಿ: ಬ್ರಹ್ಮಗಿರಿ ಸಹೋದಯ ಒಕ್ಕೂಟದ ವತಿಯಿಂದ ಸಿಬಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಇಲ್ಲಿನ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಬುಧವಾರ ನಡೆದ ‘ಕನ್ನಡ ಕಲರವ’ ರಸಪ್ರಶ್ನೆ ಸ್ಪರ್ಧೆಯಲ್ಲಿ 8 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಸ್ಕೂಲ್, ವಿರಾಜಪೇಟೆಯ ಅರಮೇರಿಯ ಎಸ್‌ಎಂಎಸ್ ಶಾಲೆ, ಗೋಣಿಕೊಪ್ಪಲುವಿನ ನ್ಯಾಷನಲ್ ಅಕಾಡೆಮಿ, ಮಡಿಕೇರಿಯ ಕೊಡಗು ವಿದ್ಯಾಲಯ, ಕುಶಾಲನಗರದ ಸೈನಿಕ ಶಾಲೆ, ಸುಳ್ಯದ ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸಿದ್ದಾಪುರದ ಸೇಂಟ್ ಆನ್ಸ್ ಸಿಬಿಎಸ್‌ಇ ಶಾಲೆ ಹಾಗೂ ಎಎಲ್‌ಜಿ ಕ್ರೆಸೆಂಟ್ ಶಾಲೆಗಳ ತಂಡಗಳು ಭಾಗವಹಿಸಿದ್ದವು.
ಕನ್ನಡ ಭಾಷೆ, ಸಾಹಿತ್ಯ, ನಾಡಿನ ಸಂಸ್ಕೃತಿ, ಇತಿಹಾಸ ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಒಟ್ಟು 11 ಸುತ್ತುಗಳಲ್ಲಿ ಸ್ಪರ್ಧೆ ನಡೆಯಿತು. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡ ಶಿಕ್ಷಕಿ ಸುಲ್ಹತ್ ಅವರು ಈ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಎಎಲ್‌ಜಿ ಕ್ರೆಸೆಂಟ್ ಶಾಲೆಯ ಪ್ರಾಂಶುಪಾಲರಾದ ಜಾಯ್ಸ್ ವಿನಯ ಮಾತನಾಡಿ, ‘ಕನ್ನಡ ಕಲರವವು ಭಾಷಾಭಿಮಾನವನ್ನು ಹೆಚ್ಚಿಸುವ ಸಾಂಸ್ಕೃತಿಕ ಹಬ್ಬ. ಇಂತಹ ಕಾರ್ಯಕ್ರಮಗಳು ಯುವಪೀಳಿಗೆಯಲ್ಲಿ ಕನ್ನಡದ ಅರಿವು ಬೆಳೆಸಲು ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ಸ್ಪರ್ಧೆಯಲ್ಲಿ ಸೈನಿಕ ಶಾಲೆ ಪ್ರಥಮ ಸ್ಥಾನ, ಕೊಡಗು ವಿದ್ಯಾಲಯ ದ್ವಿತೀಯ ಹಾಗೂ ಕೆವಿಜಿ ಐಪಿಎಸ್ ಸುಳ್ಯ ತೃತೀಯ ಸ್ಥಾನ ಗಳಿಸಿದರು. ಆಯೋಜಕರಾದ ಎಎಲ್‌ಜಿ ಕ್ರೆಸೆಂಟ್ ಶಾಲೆಯ ತಂಡದ ವಿದ್ಯಾರ್ಥಿಗಳು ಅತ್ಯಂತ ಗರಿಷ್ಠ ಅಂಕ ಗಳಿಸಿದರು.
ಬಹುಮಾನ ವಿತರಿಸಿ ಮಾತನಾಡಿ, ‘ಎಎಲ್‌ಜಿ ಶಾಲೆಯ ಕಾರ್ಯದರ್ಶಿ ಜನಾಬ್ ಮೊಹಮ್ಮದ್ ಹನೀಫ್, ‘ಭಾಷೆ ಮಾನವೀಯತೆಗೆ ಸೇತುವೆಯಂತೆ ಕೆಲಸ ಮಾಡುವ ಸಾಧನ. ನಮ್ಮ ಮಣ್ಣಿನ ಭಾಷೆಯು ಮೌಲ್ಯಗಳನ್ನು ಸಾರುತ್ತದೆ. ಕನ್ನಡದ ಪರಂಪರೆ ಮತ್ತು ಸಂಸ್ಕೃತಿ ಉಳಿಯಲು ಎಲ್ಲರ ಸಹಕಾರ ಅಗತ್ಯ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಾನಿ ಚಿದಾನಂದ ಅವರನ್ನು ಸನ್ಮಾನಿಸಲಾಯಿತು. ಎಲ್ಲ ಶಾಲೆಗಳಿಂದಲೂ ಒಬ್ಬಬ್ಬ ಶಿಕ್ಷಕರು ಮತ್ತು ಎಎಲ್‌ಜಿ ಕ್ರೆಸೆಂಟ್ ಎಲ್ಲ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.