ADVERTISEMENT

ಮೂರ್ನಾಡಿನಲ್ಲಿ ಕನ್ನಡದ ಡಿಂಡಿಮ, ರಾಜ್ಯೋತ್ಸವ ಸಂಭ್ರಮ

ಪಟ್ಟಣದಲ್ಲಿ ಇಡೀ ದಿನ ಕನ್ನಡದ ಕಾರ್ಯಕ್ರಮ, ವಿಚಾರ ಮಂಥನ, ಸಾಂಸ್ಕೃತಿಕ ಕಾರ್ಯಕ್ರಮಗಳ ಅನುರಣನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 15:27 IST
Last Updated 29 ನವೆಂಬರ್ 2024, 15:27 IST
ಮೂರ್ನಾಡಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು
ಮೂರ್ನಾಡಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು   

ಮಡಿಕೇರಿ: ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ಶುಕ್ರವಾರ ಕನ್ನಡದ ಹಬ್ಬ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕವು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ, ಪಿಎಂಶ್ರೀ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ವಿವಿಧ ಶಾಲೆ, ಕಾಲೇಜು, ಸಂಘ ಸಂಸ್ಥೆಗಳ ಸಹಯೋಗದಲ್ಲಿ ‍‍ಪಟ್ಟಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕನ್ನಡ ಸಾಹಿತ್ಯ ಸಮ್ಮೇಳನದಂತಿತ್ತು. ವಿಜೃಂಭಣೆಯ ಮೆರವಣಿಗೆ, ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಉಳಿಸುವ ಚಿಂತನ, ಮಂಥನಗಳು ಸಾಹಿತ್ಯ ಸಮ್ಮೇಳನದ ಮೆರುಗನ್ನು ತಂದು ಕೊಟ್ಟವು.

ಮೂರ್ನಾಡು ವಿದ್ಯಾಸಂಸ್ಥೆಯ ಮೈದಾನದಿಂದ ಮೂರ್ನಾಡು-ಕೊಂಡಂಗೇರಿ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಹಲವು ಕಲಾತಂಡಗಳು ಭಾಗಿಯಾದವು. ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಮಹಿಳೆಯರು ತುಂಬು ಕಳಸದ ಸ್ವಾಗತ ಕೋರಿದರು.

ADVERTISEMENT

ರಾಷ್ಟ್ರಧ್ವಜವನ್ನು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಕುಶನ್ ರೈ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಪ್ರೌಢಶಾಲೆಯ 51 ವಿದ್ಯಾರ್ಥಿಗಳು ನಾಡಗೀತೆ ಹಾಡಿ ಗಮನ ಸೆಳೆದರು. ಮೂರ್ನಾಡು ಟೈಲರ್ ಅಸೋಸಿಯೇಷನ್‌ನ 21 ಮಂದಿ ರಾಷ್ಟ್ರಗೀತೆ ಹಾಡಿದರು.

ಸಮ್ಮೇಳನದ ಪರಿಯಲ್ಲಿ ರಾಜ್ಯೋತ್ಸವ: ಪಿಎಂಶ್ರೀ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಮ್ಮ ಅನಾರೋಗ್ಯದ ನಡುವೆಯೂ ಗಾಲಿಕುರ್ಚಿಯಲ್ಲಿ ಬಂದಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಅವರು ‘ಕನ್ನಡ ರಾಜ್ಯೋತ್ಸವವು ಸಮ್ಮೇಳನದ ಪರಿಯಲ್ಲಿ ಆಯೋಜನೆಗೊಂಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು ಜಿಲ್ಲೆಯ ಎಲ್ಲ ತಾಲ್ಲೂಕು ಹಾಗೂ ಹೋಬಳಿಗಳಲ್ಲಿ ರಾಜ್ಯೋತ್ಸವ ಆಯೋಜಿಸುವ ಗುರಿ ಹೊಂದಿದೆ. ಈಗಾಗಲೇ ಸೋಮವಾರಪೇಟೆ ಹಾಗೂ ಕುಶಾಲನಗರ ಸೇರಿದಂತೆ ಹಲವೆಡೆ ವೈಭವದ ರಾಜ್ಯೋತ್ಸವಗಳು ನಡೆದಿವೆ. ಮುಂದೆಯೂ ವರ್ಷದುದ್ದಕ್ಕೂ ಕನ್ನಡದ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಹೇಳಿದರು.

‘ಪಂಜೆ ಮಂಗೇಶರಾಯರ 150ನೇ ಜನ್ಮದಿನಾಚರಣೆ ಹಾಗೂ ನಾಡಗೀತೆ ರಚನೆಯಾಗಿ 100 ವರ್ಷ ತುಂಬಿದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದರು.

ಉಳುವಂಗಡ ಕಾವೇರಿ ಉದಯ ಅವರ ‘ಪವಿತ್ರ ಪ್ರೀತಿ ಪ್ರಾಪ್ತಿ’ ಎಂಬ ಪುಸ್ತಕವನ್ನು ಸಾಹಿತಿ ಕಿಗ್ಗಾಲು ಗಿರೀಶ್  ಬಿಡುಗಡೆ ಮಾಡಿದರು.

ಸಾಹಿತಿ ಕಿಗ್ಗಾಲು ಗಿರೀಶ್, ಕೊರೊನ ವಾರಿಯರ್‌ಗಳಾದ ಕುಟ್ಟಪ್ಪ, ಪಿ.ಕೆ.ಅಬೂಬಕ್ಕರ್, ಎಸ್‌ಎಸ್‌ಎಲ್‌ಸಿ ಕನ್ನಡದಲ್ಲಿ 125ಕ್ಕೆ 124 ಅಂಕ ಗಳಿಸಿದ ನಿಸ್ಮಿತಾ, ಸಮಾಜ ಸೇವಕಿ ಬಾಚೇಟಿರ ಕಮಲು ಮುದ್ದಯ್ಯ ಅವರನ್ನು ಸನ್ಮಾನಿಸಲಾಯಿತು.

ಸಾಹಿತಿ ನಾಗೇಶ್‌ ಕಾಲೂರು, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‌ರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಗೌರವ ಕೋಶಾಧಿಕಾರಿ ಸಂಪತ್‌ಕುಮಾರ್, ತಜ್ಞ ವೈದ್ಯ ಮೋಹನ್ ಅಪ್ಪಾಜಿ, ಸಮಾಜ ಸೇವಕಿ ಬಾಚೇಟಿರ ಕಮಲು ಮುದ್ದಯ್ಯ, ಕಂದಾಯ ಪರಿವೀಕ್ಷಕ ಚಂದ್ರಪ್ರಸಾದ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿನೆರವನ ರೇವತಿ ರಮೇಶ್ ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಶಾಸಕ ಡಾ.ಮಂತರ್‌ಗೌಡ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಗೈರಾದರು.

ಮೂರ್ನಾಡಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾದವು
ಮೂರ್ನಾಡಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಉದ್ಘಾಟಿಸಿದರು
ಮೆರವಣಿಗೆಯಲ್ಲಿ 10 ಕಲಾತಂಡಗಳು ಭಾಗಿ ರಾಜ್ಯೋತ್ಸವದಲ್ಲಿ ಪುಸ್ತಕ ಬಿಡುಗಡೆ ಸಾವಿರಕ್ಕೂ ಅಧಿಕ ಮಂದಿ ಭಾಗಿ
ಮೂರ್ನಾಡು ಗ್ರಾಮ ಪಂಚಾಯಿತಿ ಎಲ್ಲ ಸಂಘ ಸಂಸ್ಥೆಗಳು ಶಾಲಾ ಕಾಲೇಜುಗಳ ಸಹಕಾರದಿಂದ ರಾಜ್ಯೋತ್ಸವ ಯಶಸ್ವಿಯಾಯಿತು
ಈರಮಂಡ ಹರಿಣಿ ವಿಜಯ್ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ

‘ತಾಯಿ ಭಾಷೆಗೆ ಮೊದಲ ಸ್ಥಾನ ಕೊಡಿ’

‘ತಾಯಿ ಭಾಷೆ ಉಳಿಸಿಕೊಳ್ಳಲು ಸರ್ಕಾರ ಬರಬೇಕಾ’ ಎಂದು ಪ್ರಶ್ನಿಸುತ್ತಲೇ ಮಾತಿಗಿಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ‘1ರಿಂದ 5ನೇ ತರಗತಿಯವರೆಗೆ ಎಲ್ಲ ಮಕ್ಕಳಿಗೂ ಕನ್ನಡ ಭಾಷೆಯಲ್ಲೇ ಶಿಕ್ಷಣ ಕೊಡಬೇಕು’ ಎಂದು ಪ್ರತಿಪಾದಿಸಿದರು. ‘ಇಂಗ್ಲಿಷ್ ಭಾಷೆ ಕಲಿಯಿರಿ. ಆದರೆ ಮಾತೃಭಾಷೆಯನ್ನು ಏಕೆ ಮರೆಯುತ್ತೀರಿ. ಮನೆಯಲ್ಲಿ ಕನ್ನಡದ ವಾತಾವರಣ ಕಲ್ಪಿಸಿ’ ಎಂದು ಸಲಹೆ ನೀಡಿದರು. ‘ಕನ್ನಡ ನೆಲದಲ್ಲಿ ಕನ್ನಡಕ್ಕೆ ದ್ರೋಹ ಬಗೆಯುವವರ ವಿರುದ್ಧ ದನಿ ಎತ್ತಬೇಕು. ಕನ್ನಡ ಶಾಲೆ ಅವನತಿಗೆ ಹೋಗುತ್ತಿದೆ. ಕನ್ನಡ ಅಧಃಪತನಕ್ಕೆ ಇಳಿಯುತ್ತಿದೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಉದ್ಯೋಗದಲ್ಲಿ ಮೀಸಲಾತಿ ಬೇಕು’

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ‘ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ ತಂದರೆ ಕನ್ನಡ ಉಳಿಯುತ್ತದೆ’ ಎಂದು ಪ್ರತಿಪಾದಿಸಿದರು. ‘ಇಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನು ಪ್ರಯೋಜನ ಎಂದು ಕೇಳುತ್ತಿದ್ದಾರೆ. ಕನ್ನಡ ಅನ್ನದ ಭಾಷೆಯಾಗಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತರೆ ಉದ್ಯೋಗ ಸಿಗುತ್ತದೆ ಎಂಬ ನಿಯಮ ರೂಪಿಸಿದರೆ ಆಗ ಕನ್ನಡ ಶಾಲೆಗಳು ಅವನತಿ ಹೊಂದುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.