ಸೋಮವಾರಪೇಟೆ: ಕನ್ನಡ ನಾಡು ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಎಂದು ಮುಖಂಡ ಟಿ.ಪಿ.ರಮೇಶ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಮತ್ತು ಹೋಬಳಿ ಘಟಕ ಬುಧವಾರ ಸಂಜೆ ಪಟ್ಟಣದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ಸಮೃದ್ದ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿ ನಾಡಿನ ಮೂಲೆಮೂಲೆಗೆ ಕನ್ನಡದ ಕಂಪು ಪಸರಿಸುವ ಕಾರ್ಯವನ್ನು ಸಾಹಿತ್ಯ ಪರಿಷತ್ ಸದ್ದಿಲ್ಲದೆ ಮಾಡುತ್ತಿದೆ. 1915ರಲ್ಲಿ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ₹5 ಸಾವಿರ ಹಣವನ್ನು ದಾನವಾಗಿ ನೀಡಿ, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಮುಂದೆ 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ನಾಮಕರಣವಾಯಿತು. ಕೊಡಗು ಸಾಹಿತ್ಯ ಕೃಷಿಯಲ್ಲಿ ಬೇರೆ ಜಿಲ್ಲೆಗಳಿಗೆ ಸಮಾನವಾಗಿ ಬೆಳೆದಿದೆ’ ಎಂದರು.
‘ಮುಂದೆ ಯುವಜನರಲ್ಲಿ ಕನ್ನಡ ಭಾಷೆ ಆಸಕ್ತಿ ಬೆಳೆಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ಮುಂದಿನ ಪೀಳಿಗೆ ಕನ್ನಡ ಕಟ್ಟುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ಕೊಡಗಿನಲ್ಲಿ 41 ದತ್ತಿ ಸ್ಥಾಪನೆ ಮಾಡಲಾಗಿದೆ. ವರ್ಷವಿಡಿ ಕನ್ನಡ ಭಾಷಾ ಬೆಳವಣಿಗೆ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡಿಗರಿಗೆ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉನ್ನತ ಹುದ್ದೆಗಳು ಸಿಗುವಂತಾಗಬೇಕು. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲೇಬೇಕು’ ಎಂದು ಆಶಿಸಿದರು.
ಸಾಹಿತ್ಯ ಪರಿಷತ್ ನಿರ್ದೇಶಕರು ಮತ್ತು ಸಹಕಾರ ಸಂಘಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ, ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಇ.ಜಯೇಂದ್ರ, ಚೌಡ್ಲು ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ಮಡಿಕೇರಿ ದಿವ್ಯಜ್ಯೋತಿ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಂ.ಡಿಸಿಲ್ವಾ, ಜೋಕಿಂವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಜಲಜಾ ಶೇಖರ್, ಸೋಮವಾರಪೇಟೆ ಸಹಕಾರ ಸಂಘದ ನಿರ್ದೇಶಕರಾದ ಪಿ.ಕೆ.ರವಿ, ಬಿ.ಕೆ.ಉದಯಕುಮಾರ್, ಹಂಡ್ಲಿ ಸಹಕಾರ ಸಂಘದ ನಿರ್ದೇಶಕ ಮೋಹನ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್, ಎ.ಪಿ.ವೀರರಾಜು, ಖಚಾಂಚಿ ಕೆ.ಪಿ.ದಿನೇಶ್, ಜಿಲ್ಲಾ ನಿರ್ದೇಶಕ ಶ್ರೀಧರ್ ಹೂವಲ್ಲಿ ಮತ್ತು ಜೆ.ಸಿ. ಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.