ADVERTISEMENT

ಶತಕಂಠದಲ್ಲಿ ಮೊಳಗಿತು ಕನ್ನಡ ಗೀತೆಗಳು

ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:40 IST
Last Updated 6 ಡಿಸೆಂಬರ್ 2025, 6:40 IST
ಸೋಮವಾರಪೇಟೆ ಮಹಿಳಾ ಸಮಾಜದ ಸಭಾಂಗದಲ್ಲಿ ನಡೆದ ಶತಕಂಠ ಗಾಯನ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಡಿದರು.
ಸೋಮವಾರಪೇಟೆ ಮಹಿಳಾ ಸಮಾಜದ ಸಭಾಂಗದಲ್ಲಿ ನಡೆದ ಶತಕಂಠ ಗಾಯನ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಡಿದರು.   

ಸೋಮವಾರಪೇಟೆ: ವಂದೇ ಮಾತರಂ, ಜೈ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡುಗಳನ್ನು 100ಕ್ಕೂ ಅಧಿಕ ಗಾಯಕರು ಏಕಕಾಲದಲ್ಲಿ ಹಾಡುವ ಮೂಲಕ ಗೀತ ಸಂಗಮ ಕಾರ್ಯಕ್ರಮವನ್ನು ಅಂದಗಾಣಿಸಿದರು. ಇದರೊಂದಿಗೆ ಸೋಮವಾರಪೇಟೆ ವ್ಯಾಪ್ತಿಯ 25ಕ್ಕೂ ಅಧಿಕ ಗಾಯಕರು ತಮ್ಮ ಕಂಠಸಿರಿಯಲ್ಲಿ ವಿವಿಧ ಹಾಡುಗಳನ್ನು ಹಾಡಿ ಕನ್ನಡದ ವೈಭವ ಸಾರಿದರು.

ಈ ಎಲ್ಲ ದೃಶ್ಯಗಳು ಜಿಲ್ಲಾ ಕನ್ನಡ ಸಿರಿ ಸ್ನೇಹ ಬಳಗದ ನೇತೃತ್ವದಲ್ಲಿ ಶುಕ್ರವಾರ ಸೋಮವಾರಪೇಟೆ ಭಾಗದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಶತಕಂಠದಲ್ಲಿ ಗೀತ ಸಂಗಮ ಕಾರ್ಯಕ್ರಮದಲ್ಲಿ ಕಂಡು ಬಂತು.

ದೇಶದ ಸ್ವಾತಂತ್ರ‍್ಯಕ್ಕಾಗಿ ಬಂಕಿಮಚಂದ್ರ ಚಟರ್ಜಿ ರವರು ರಚಿಸಿದ ವಂದೇ ಮಾತರಂ ಗೀತೆಯು 150 ವರ್ಷಗಳನ್ನು ಪೂರೈಸಿದ್ದು, ಏಕೀಕರಣಕ್ಕಾಗಿ ಹುಯಿಲುಗೋಳ ನಾರಾಯಣ ರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು 100 ವರ್ಷ ಹಾಗೂ ವಿಶ್ವಮಾನವ ಕುವೆಂಪು ರಚಿಸಿದ ಜಯ ಭಾರತ ಜನನಿಯ ತನುಜಾತೆ ಗೀತೆ 100 ವರ್ಷಗಳನ್ನು ಪೂರೈಸಿರುವ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.‌ಅನಂತಶಯನ, ‘ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಪುಣ್ಯ. ಈ ಮಣ್ಣಿನ ಪಾವಿತ್ರ‍್ಯತೆ ಕಾಪಾಡಬೇಕು. ಕಲೆ, ಸಾಹಿತ್ಯ ಸಂಸ್ಕ್ರತಿಯ ಉಳಿವಿಗೆ ಎಲ್ಲರ ಕೈಜೋಡಿಸಬೇಕು’ ಎಂದರು.

ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ‘ಕನ್ನಡ ಸಿರಿ ಸ್ನೇಹ ಬಳಗದಿಂದ 50ಕ್ಕೂ ಅಧಿಕ ಕಾರ್ಯಕ್ರಮ ನಡೆಸಲಾಗಿದೆ. ಸ್ವಾತಂತ್ರ‍್ಯ ಹಾಗೂ ಕನ್ನಡತನವನ್ನು ಉದ್ದೀಪಿಸುವ ಗೀತೆಗಳಿಗೆ 100 ಹಾಗೂ 150 ವರ್ಷಗಳು ತುಂಬಿದ ಹಿನ್ನೆಲೆ ನೂರು ಕಂಠಗಳನ್ನು ಒಂದುಗೂಡಿಸುವ ಪ್ರಯತ್ನ ಯಶಕಂಡಿದೆ’ ಎಂದರು.

ಲೇಖಕಿ ಶರ್ಮಿಳಾ ರಮೇಶ್ ರಚಿಸಿರುವ ಅವ್ವಯ್ಯಜ್ಜಿ ಕಥೆಗಳು ಮುತ್ತು ರತ್ನದ ರಾಜಕುಮಾರಿ ಪುಸ್ತಕವನ್ನು ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶಿವಪ್ಪ ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾದ್ಯಾಪಕಿ ತಿಲೋತ್ತಮೆ ನಂದಕುಮಾರ್, ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ.ಮುರಳೀಧರ್, ಕನ್ನಡ ಸಿರಿ ಸ್ನೇಹ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಜೆ.ಜವರಪ್ಪ, ಕನ್ನಡ ಸಿರಿ ಸ್ನೇಹ ಬಳಗದ ಪ್ರೇಮಾ, ನ.ಲ.ವಿಜಯ, ಜಾನಪದ ಪರಿಷತ್ ಅಧ್ಯಕ್ಷ ಕೆ.ಎ.ಪ್ರಕಾಶ್, ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ರೋಟರಿ ಅಧ್ಯಕ್ಷೆ ವೀಣಾ ಮನೋಹರ್, ಜೇಸಿ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್, ಲಯನ್ಸ್ ಅಧ್ಯಕ್ಷ ರಾಮಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಿಕಾ ಕುಮಾರ್, ದೇವೀ ಬಳಗದ ಅಧ್ಯಕ್ಷೆ ಕುಮುದಿನಿ ಜಗದೀಶ್, ಕರವೇ ಅಧ್ಯಕ್ಷ ಕೆ.ಎನ್.ದೀಪಕ್, ಅಕ್ಕನ ಬಳಗದ ಅಧ್ಯಕ್ಷೆ ಗೀತಾ ರಾಜು, ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕೆಟಿಡಿಒ ಅಧ್ಯಕ್ಷ ವಸಂತ್, ಸೀತಾ ಬಳಗದ ಅಧ್ಯಕ್ಷೆ ಯಶೋಧ, ಹಿರಿಯ ನಾಗರಿಕರ ಟ್ರಸ್ಟ್ ಅಧ್ಯಕ್ಷ ಕೆ.ಜಿ. ಸುರೇಶ್  ಭಾಗವಹಿಸಿದ್ದರು.

ಇದೇ ವೇಳೆ ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿ ಅವರು ಸೋಮವಾರಪೇಟೆಗೆ ಆಗಮಿಸಿದ್ದ ಸಂದರ್ಭ ಬೇಳೂರಿನಲ್ಲಿರುವ ಮನೆಯಲ್ಲಿ ಆತಿಥ್ಯ ಒದಗಿಸಿದ ಕುಟುಂಬದ ಸದಸ್ಯರಾದ ಗುರುಮಲ್ಲೇಶ್ ಅವರನ್ನು ಕನ್ನಡ ಸಿರಿ ಸ್ನೇಹ ಬಳಗದ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಭಿನಂದಿಸಲಾಯಿತು.

ಸೋಮವಾರಪೇಟೆ ಮಹಿಳಾ ಸಮಾಜದ ಸಭಾಂಗದಲ್ಲಿ ನಡೆದ ಶತಕೋಠಿ ಗಾಯನ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.