ADVERTISEMENT

‘ಗ್ಯಾರಂಟಿಗೆ ₹1.12 ಲಕ್ಷ ಕೋಟಿ ವ್ಯಯ’

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹರೋಜ್ ಖಾನ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:59 IST
Last Updated 18 ಜನವರಿ 2026, 5:59 IST
ಸಂವಾದ
ಸಂವಾದ   

ಮಡಿಕೇರಿ : ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗೆ ರಾಜ್ಯದಲ್ಲಿ ಇದುವರೆಗೆ ₹1.12 ಲಕ್ಷ ಕೋಟಿ,  ಜಿಲ್ಲೆಯಲ್ಲಿ ಇದುವರೆಗೆ ₹647.59 ಕೋಟಿ  ವೆಚ್ಚ ಮಾಡಲಾಗಿದೆ’ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ  ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ಮಾಹಿತಿ ನೀಡಿದರು.

ನಗರದಲ್ಲಿ ಶನಿವಾರ ‘ಕೊಡಗು ಪತ್ರಕರ್ತರ ಸಂಘ’ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

 ಗ್ಯಾರಂಟಿ ಯೋಜನೆಗಳ ಯಶಸ್ಸಿನ ಮೂಲಕ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಪ್ರಯತ್ನಿಸಿದೆ. ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಬೆಳವಣಿಗೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಭರವಸೆಯಂತೆ ಐದು ಗ್ಯಾರಂಟಿ ಯೋಜನೆಯನ್ನು  ಕಾಲಮಿತಿಯಲ್ಲಿ ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ಅವರು ತಿಳಿಸಿದರು.

‘ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಹಣ ಬಳಸಲು ಸಾಧ್ಯವಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಆದರೆ  ಅಭಿವೃದ್ಧಿ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದಿಗೂ ಬಡತನವಿದ್ದು, ಗ್ಯಾರಂಟಿ ಯೋಜನೆಗಳು ಎಷ್ಟು ಉಪಯುಕ್ತವಾಗಿವೆ. ಸರ್ಕಾರ ಬಡವರಿಗೆ, ಮಹಿಳೆಯರಿಗೆ ಮತ್ತು ಯುವ ಜನರಿಗೆ ಶಕ್ತಿ ನೀಡಿದೆ’ ಎಂದರು.

ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ  ಮಾತನಾಡಿ  ಜಿಲ್ಲೆಯ ರಸ್ತೆ ಅಭಿವೃದ್ಧಿ ಕಾರ್ಯವು ಮೇ ಅಂತ್ಯದೊಳಗೆ ಶೇ75 ರಷ್ಟು ಪೂರ್ಣಗೊಳ್ಳಲಿದೆ. ಮಡಿಕೇರಿ-ವಿರಾಜಪೇಟೆ, ವಿರಾಜಪೇಟೆ-ಮಾಕುಟ್ಟ, ವಿರಾಜಪೇಟೆ-ತಿತಿಮತಿ ಸೇರಿದಂತೆ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದರು.  
ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಪರಿಸರ ಸಂರಕ್ಷಣೆ,ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಖಾನ್‌ ಹೇಳಿದರು. 

ADVERTISEMENT

 ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ವಿ.ರವಿಕುಮಾರ್ ಇದ್ದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಬಿ.ವೈ.ರಾಜೇಶ್, ಪ್ರಮುಖರಾದ ಮುನೀರ್ ಅಹ್ಮದ್, ಅಂಬೆಕಲ್ಲು ನವೀನ್. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ಕೊಲ್ಯ ಗಿರೀಶ್ ಇದ್ದರು.

‘ಗ್ಯಾರಂಟಿಯಿಂದ ಜಿಡಿಪಿ ಶೇ 24 ಏರಿಕೆ’

ಜಿಎಸ್‍ಟಿ ಸಂಗ್ರಹಣೆಯಲ್ಲಿ ಸರಾಸರಿ ಹೆಚ್ಚಳವಾಗಿದೆ. ಐದು ಗ್ಯಾರಂಟಿ ಯೋಜನೆ ಜಾರಿಯಿಂದ ಶೇ 24  ಜಿಡಿಪಿ ದರ ಏರಿದೆ. ನಿರುದ್ಯೋಗ ಪ್ರಮಾಣ ಶೇ 4.3  ಇದ್ದದ್ದು ಈಗ ಶೇ 2.5 ಕ್ಕೆ ಇಳಿಕೆಯಾಗಿದೆ. ಮಹಿಳೆಯರು ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲಿ ಶೇ 25 ರಿಂದ ಶೇ 30 ಕ್ಕೆ ಏರಿಕೆಯಾಗಿರುವುದು ವಿಶೇಷವಾಗಿದೆ.  ರಾಷ್ಟ್ರದ ತಲಾ ಆದಾಯದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಮೆಹರೋಜ್‌ಖಾನ್‌ ಮಾಹಿತಿ ನೀಡಿದರು. ಗ್ಯಾರಂಟಿ ಯೋಜನೆಯಿಂದ ಬಡತನ ಪ್ರಮಾಣ ಶೇ 12  ಇಳಿಕೆಯಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶದಿಂದ ನಗರಪ್ರದೇಶಗಳಿಗೆ ವಲಸೆ ಹೋಗುವವರ ಪ್ರಮಾಣ ಶೇ 15  ಇಳಿಕೆಯಾಗಿದೆ. ಹಾಗೆಯೇ ಅಪೌಷ್ಟಿಕತೆಯು ಶೇ 50 ಕಡಿಮೆಯಾಗಿದೆ. ಶಕ್ತಿ ಯೋಜನೆಯಿಂದ ಆರಾಧನಾಲಯಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.  ಆರ್ಥಿಕ ಚಟುವಟಿಕೆ ವಿನಿಮಯ ಆಗುತ್ತಿದೆ ಎಂದರು.

‘ಎಸ್‍ಸಿ ಎಸ್‍ಟಿ ಹಣ: ಸಚಿವರಿಗೆ ಮಾಹಿತಿ’

ಸಂವಾದದಲ್ಲಿ ಪತ್ರಕರ್ತರು ‘ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಯಾಗಬೇಕು. ಗೃಹಲಕ್ಷ್ಮಿ ಯೋಜನೆ ಹಣ ಪ್ರತೀ ತಿಂಗಳು ಬಿಡುಗಡೆಯಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ  ಅನುದಾನ ಪರಿಶಿಷ್ಟರಿಗೆ ಬಳಸಬೇಕು’ ಮುಂತಾಗಿ ಗಮನಸೆಳೆದರು. ಎಸ್‍ಸಿ/ಎಸ್‍ಟಿಪಿ ಕಾರ್ಯಕ್ರಮಗಳ ಹಣ ಬಳಕೆ ಸಂಬಂಧ ಸಮಾಜ ಕಲ್ಯಾಣ ಸಚಿವರ ಗಮನ ಸೆಳೆಯಲಾಗುವುದು ಎಂದು ಮೆಹರೋಜ್‌ ಖಾನ್‌ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.