ADVERTISEMENT

ಮಡಿಕೇರಿ: ‘ಕರ್ನಾಟಕ ಹಕ್ಕಿ ಹಬ್ಬ’ಕ್ಕೆ ಸಚಿವ ಉಮೇಶ ಕತ್ತಿ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 13:06 IST
Last Updated 8 ಏಪ್ರಿಲ್ 2022, 13:06 IST
'ಕರ್ನಾಟಕ ಹಕ್ಕಿ ಹಬ್ಬ'ದಲ್ಲಿ ಪಕ್ಷಿಗಳ ಚಿತ್ರ ವೀಕ್ಷಣೆ
'ಕರ್ನಾಟಕ ಹಕ್ಕಿ ಹಬ್ಬ'ದಲ್ಲಿ ಪಕ್ಷಿಗಳ ಚಿತ್ರ ವೀಕ್ಷಣೆ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮೂರು ದಿನ ನಡೆಯುವ 8ನೇ ಆವೃತ್ತಿಯ ‘ಕರ್ನಾಟಕ ಹಕ್ಕಿ ಹಬ್ಬ’ಕ್ಕೆ ಅರಣ್ಯ ಸಚಿವ ಉಮೇಶ ಕತ್ತಿ ಅವರು ಶುಕ್ರವಾರ ನಗರದಲ್ಲಿ ಚಾಲನೆ ನೀಡಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಗೋಗಿ ಮಾತನಾಡಿ, ‘ಪ್ರತಿಯೊಂದು ಜೀವಿಗೂ ಮಹತ್ವವಿದೆ. ಪಕ್ಷಿಗಳು ಹಣ್ಣುಗಳನ್ನು ತಿಂದು ಅದರ ಬೀಜವನ್ನು ಅರಣ್ಯ ಪ್ರದೇಶದಲ್ಲಿ ಬೀಳಿಸಿ ಸಸಿಗಳ ಹುಟ್ಟಿಗೆ ಕಾರಣವಾಗುತ್ತಿವೆ. ಪರಿಸರ ಉಳಿಸಲು ಪಕ್ಷಿಗಳೂ ಪೂರಕವಾಗಿ ಕೆಲಸ ಮಾಡುತ್ತಿವೆ. ಪಕ್ಷಿಗಳ ಮಹತ್ವ ಕುರಿತು ಅರಿವು ಮೂಡಿಸಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತಿವರ್ಷ ಹಕ್ಕಿ ಹಬ್ಬ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಪಕ್ಷಿಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿವೆ’ ಎಂದು ಹೇಳಿದರು.

ADVERTISEMENT

ಈ ಬಾರಿ ‘ಕಪ್ಪು ಜುಟ್ಟಿನ ಗಿಡುಗ’ ಪಕ್ಷಿಯನ್ನು ಕೇಂದ್ರೀಕರಿಸಿ ಹಕ್ಕಿ ಹಬ್ಬ ನಡೆಯುತ್ತಿದೆ. ಜಿಲ್ಲೆಯ ಏಳು ಸ್ಥಳಗಳಲ್ಲಿ ಪಕ್ಷಿಗಳ ವೀಕ್ಷಣೆ ಹಾಗೂ ಅಧ್ಯಯನ ನಡೆಯಲಿದೆ. ರಾಜ್ಯದ ನಾನಾ ಭಾಗದಿಂದ 80 ಮಂದಿ ಪಕ್ಷಿಪ್ರೇಮಿಗಳು ಈ ಹಬ್ಬದಲ್ಲಿ ಪಾಲ್ಗೊಂಡಿದ್ದು, ಪೂರ್ವ ಹಿಮಾಲಯ, ಚೀನಾ ಹಾಗೂ ಆಗ್ನೇಯ ಏಷ್ಯಾದಿಂದ ವಲಸೆ ಬಂದಿರುವ ಕಪ್ಪು ಜುಟ್ಟಿನ ಗಿಡುಗ ವಲಸೆ ಹಕ್ಕಿಯ ಅಧ್ಯಯನ ನಡೆಯಲಿದೆ.
ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮದನ್‌ ಗೋಪಾಲ್‌, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.