ಮಡಿಕೇರಿ: ನಗರ ಸೇರಿದಂತೆ ಕೊಡಗಿನ ಹಲವೆಡೆ ಭಾನುವಾರ ಬಿರುಸಿನಿಂದ ಮಳೆ ಸುರಿದಿದೆ. ಗಾಳಿಯ ವೇಗವೂ ಹೆಚ್ಚಿದ್ದು, ಬೀಸುತ್ತಿರುವ ಚಳಿ ಗಾಳಿ ಜನರನ್ನು ಅಕ್ಷರಶಃ ನಡುಗಿಸಿದೆ.
ದಿನವಡಿ ಸುರಿದ ಜೋರು ಮಳೆಯಿಂದ ಹಾರಂಗಿಯ ಒಳಹರಿವು ಭಾನುವಾರ ರಾತ್ರಿ 8 ಗಂಟೆಯ ಹೊತ್ತಿಗೆ 5,618 ಸಾವಿರ ಕ್ಯುಸೆಕ್ ತಲುಪಿತ್ತು. ಇದರಿಂದ ನದಿಗೆ ಬಿಡುತ್ತಿದ್ದ ನೀರಿನ ಪ್ರಮಾಣವನ್ನೂ 5 ಸಾವಿರ ಕ್ಯುಸೆಕ್‌ಗೆ ಏರಿಕೆ ಮಾಡಲಾಯಿತು. ಸದ್ಯ, 2,851.85 ಅಡಿ ನೀರಿದೆ.
ಶನಿವಾರ ತಡರಾತ್ರಿಯೇ ಆರಂಭವಾದ ಮಳೆ ಬೆಳಗು ಮೂಡುತ್ತಿದ್ದಂತೆ ಬಿರುಸು ಪಡೆಯಿತು. ಭಾನುವಾರ ದಿನವಿಡೀ ಜೋರಾಗಿ ಸುರಿದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಸುರಿಯುತ್ತಿದ್ದ ಮಳೆಗೆ ರಾಜಕಾಲುವೆಗಳು ಉಕ್ಕಿ ಹರಿದವು. ಮೊದಲೆ ಗುಂಡಿಗಳಿಂದ ಕೂಡಿದ್ದ ನಗರದ ರಸ್ತೆಗಳ ಬದಿಗಳಲ್ಲಿ ಕುಡಿಯುವ ನೀರಿನ ಸಂಪರ್ಕ ನೀಡಲು ಅಗೆದಿರುವ ಗುಂಡಿಗಳನ್ನು ಸಮಪರ್ಕವಾಗಿ ಮುಚ್ಚದ ಕಾರಣ ಎಲ್ಲ ರಸ್ತೆಗಳೂ ಕೆಸರು ಗದ್ದೆಯಂತಾದವು.
ಜನರು ಓಡಾಡಲು ಕಷ್ಟಪಟ್ಟರೆ, ವಾಹನ ಸವಾರರು ವಾಹನ ಚಾಲನೆ ಮಾಡುವಷ್ಟರಲ್ಲಿ ಹೈರಾಣಾದರು. ಕವಿಯುತ್ತಿದ್ದ ದಟ್ಟ ಮಂಜು, ಬೀಸುತ್ತಿದ್ದ ಶೀತಗಾಳಿ, ಬೀಳುತ್ತಿದ್ದ ಮಳೆಯ ನಡುವೆ ಪ್ರವಾಸಿಗರು ಸುತ್ತಾಡಿದರು.
ಸಂಜೆಯ ಹೊತ್ತಿಗೆ ಮಳೆಯ ಬಿರುಸು ತಗ್ಗಿತು. ಆದರೆ, ಶೀತಗಾಳಿ ಬಿಡುವು ನೀಡದೇ ಬೀಸುತ್ತಲೇ ಇದ್ದು, ಜನರನ್ನು ಥರಗುಟ್ಟುವಂತೆ ಮಾಡಿತು.
ತುಸು ಕಡಿಮೆಯಾಗಲಿದೆ: ವರ್ಷಧಾರೆ ಬಿರುಸಾಗಿರುವ ಮಧ್ಯೆಯೇ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಕೊಡಗು ಜಿಲ್ಲೆಗೆ ನೀಡಿರುವ ರೆಡ್ ಅಲರ್ಟ್ ಅನ್ನು ವಾಪಸ್ ಪಡೆದಿದೆ. ಜೂನ್ 15ರಿಂದ 17ರವರೆಗೆ ಆರೆಂಜ್ ಅಲರ್ಟ್ ನೀಡಿದೆ. ನಂತರದಲ್ಲಿ ಎಲ್ಲೊ ಅಲರ್ಟ್ ನೀಡಿದೆ. ಸದ್ಯ, ಈ ದಿನಗಳಲ್ಲಿ ರೆಡ್ ಅಲರ್ಟ್ ನೀಡಿಲ್ಲ. ಹಾಗಾಗಿ, ಅತಿ ಭಾರಿ ಮಳೆ ಸುರಿಯುವ ಸಾಧ್ಯತೆ ಇಲ್ಲ. ಆದರೆ, ಆರೆಂಜ್ ಅಲರ್ಟ್ ಇದೆ.
ಭಾಗಮಂಡಲ ವಿರಾಜಪೇಟೆ ಸಂಪಾಜೆಯಲ್ಲಿ ಹೆಚ್ಚು ಮಳೆ
ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ 13 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ. ಉಳಿದಂತೆ ಶಾಂತಳ್ಳಿ 7 ಸೆಂ.ಮೀ ವಿರಾಜಪೇಟೆ ಸಂಪಾಜೆ ತಲಾ 6 ಸೆಂ.ಮೀ ಮಡಿಕೇರಿ ನಾಪೋಕ್ಲು ಅಮ್ಮತ್ತಿ ಶ್ರೀಮಂಗಲ ತಲಾ 4 ಸೆಂ.ಮೀ ಹುದಿಕೇರಿ 3.5 ಸೆಂ.ಮೀ ಸೋಮವಾರಪೇಟೆ 3 ಸೆಂ.ಮೀ ಶನಿವಾರಸಂತೆ ಸುಂಟಿಕೊಪ್ಪ ತಲಾ 2.5 ಸೆಂ.ಮೀ ಪೊನ್ನಂಪೇಟೆ ಕೊಡ್ಲಿಪೇಟೆಯಲ್ಲಿ ತಲಾ 2 ಸೆಂ.ಮೀನಷ್ಟು ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.