
ಜಾತ್ರಾ ಮಹೋತ್ಸವ
ಮಡಿಕೇರಿ: ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ. 23ರಿಂದ 28ರವರೆಗೆ ನಡೆಯಲಿದೆ.
‘23ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮದೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. 27ರಂದು ಮಧ್ಯಾಹ್ನ 2.30ಕ್ಕೆ ದೇವರು ಜಳಕಕ್ಕೆ ಹೊರಡುವ ಕಾರ್ಯಕ್ರಮ ನಡೆಯಲಿದೆ. ನಂತರ, ಸಂಜೆ 6 ಗಂಟೆಗೆ ದೇವಾಲಯದ ಆವರಣದಲ್ಲಿ ದೇವರ ನೃತ್ಯ ಬಲಿ, ನಡೆ ಭಂಡಾರ ನಡೆಯಲಿದೆ’ ಎಂದು ಕ್ಷೇತ್ರದ ಅಧ್ಯಕ್ಷ ಶಶಿ ಜನಾರ್ದನ ಕಟ್ಟೆಮನೆ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾತ್ರೆ ನಡೆಯುವ ಅಷ್ಟೂ ದಿನಗಳ ಕಾಲ ನಿತ್ಯ ಮಧ್ಯಾಹ್ನ 1 ಗಂಟೆಗೆ ಹಾಗೂ ರಾತ್ರಿ 8.30ಕ್ಕೆ ಭಕ್ತರಿಗೆ ದೇಗುಲದಲ್ಲಿ ಅನ್ನಸಂತರ್ಪಣೆ ಇರಲಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದೆ ಎಂದರು.
ಡಿ. 23ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗಣಪತಿ ಹೋಮ, ಬ್ರಹ್ಮರಾಕ್ಷಸನಿಗೆ ನೈವೇದ್ಯ ಸಮರ್ಪಣೆ, ದುರ್ಗಾಪೂಜೆ, ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ, ಸಂಜೆ ಧ್ವಜಾರೋಹಣ, ಮಹಾಪೂಜೆಗಳು ನಡೆಯಲಿವೆ ಎಂದು ಹೇಳಿದರು.
24ರಂದು ಬೆಳಿಗ್ಗೆ 6.30ರಿಂದ ಮಧ್ಯಾಹ್ನದವರೆಗೆ ನಡೆಯುವ ಧಾರ್ಮಿಕ ಕೈಂಕರ್ಯಗಳಲ್ಲಿ ನೈರ್ಮಾಲ್ಯ ಬಲಿ, ಧ್ವಜಸ್ಥಂಭ ಪೂಜೆ, ಮಹಾಪೂಜೆ, ಸಂಜೆ ಶ್ರೀಭೂತಬಲಿ, ಮಹಾಪೂಜೆ ನಡೆಯಲಿದೆ ಎಂದರು.
25ರಂದು ಸಹ ಇದೇ ಬಗೆಯ ಕೈಂಕರ್ಯಗಳು ನಡೆಯಲಿದ್ದು, 26ರಂದು ಬೆಳಿಗ್ಗೆ ತುಲಾಭಾರ ಸೇವೆ ಇರಲಿದೆ. ಸಂಜೆ ನೃತ್ಯಬಲಿ, ವಸಂತಪೂಜೆ, ದೇವರ ಶಯನೋತ್ಸವಗಳು ಜರುಗಲಿವೆ ಎಂದು ಹೇಳಿದರು.
27ರಂದು ಬೆಳಿಗ್ಗೆ ಕವಾಟಪೂಜೆ, ತೈಲಾಭ್ಯಂಜನ, ಪಂಚಾಮೃತ ಅಭಿಷೇಕದ ನಂತರ ಮಧ್ಯಾಹ್ನ 2.30ಕ್ಕೆ ನಂದಿಪಾರೆಯ ಕಾವೇರಿ ನದಿಯಲ್ಲಿ ದೇವರು ಜಳಕಕ್ಕೆ ಹೊರಡಲಿದೆ. ಸಂಜೆ ದೇವರ ನೃತ್ಯಬಲಿ, ನಡೆ ಭಂಡಾರಗಳು ಜರುಗಲಿವೆ ಎಂದರು.
28ರಂದು ಬೆಳಿಗ್ಗೆ ನವಕ ಕಳಸ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆಯೊಂದಿಗೆ ಜಾತ್ರಾ ಮಹೋತ್ಸವ ಸಮಾಪ್ತಿಯಾಗಲಿದೆ ಎಂದು ಮಾಹಿತಿ ನೀಡಿದರು.
ಸಮಿತಿ ಕಾರ್ಯದರ್ಶಿ ಕಾಶಿ ಕಾರ್ಯಪ್ಪ, ಸದಸ್ಯರಾದ ಎನ್.ಕೆ.ಗಣಪತಿ, ಪಿ.ಕೆ.ಮಹೇಶ್, ಎಂ.ಟಿ.ದೇವಪ್ಪ, ಬಿ.ಎಸ್.ವೇಣುಗೋಪಾಲ್ ಭಾಗವಹಿಸಿದ್ದರು.