ಕುಶಾಲನಗರ: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ, ಹೆಬ್ಬಾಲೆ, ರಾಂಪುರ ಸುತ್ತಲಿನ ಗ್ರಾಮಗಳಲ್ಲಿ ರೈತರ ಜಮೀನಿಗೆ ಕಾವೇರಿ ನದಿ ನೀರು ನುಗ್ಗಿದ್ದು, ಅಪಾರ ಪ್ರಮಾಣದಲ್ಲಿ ಕೃಷಿಗೆ ಹಾನಿ ಉಂಟಾಗಿದೆ.
ಧಾರಾಕಾರ ಮಳೆಯಿಂದಾಗಿ ಕಾವೇರಿ ಹಾಗೂ ಹಾರಂಗಿ ನದಿ ನೀರಿನ ಮಟ್ಟ ಗಣನೀಯ ಏರಿಕೆಯಾಗಿದ್ದು, ಮೈದುಂಬಿ ಹರಿಯುತ್ತಿದೆ. ನದಿಯ ಹೆಚ್ಚುವರಿ ನೀರು ರೈತರ ಜಮೀನಿಗೆ ನುಗ್ಗಿದೆ. ರೈತರಾದ ಕಪನಪ್ಪ, ಶಿವನಂಜಯ್ಯ, ಕಪನಯ್ಯ ಹಾಗೂ ಶ್ರೀನಿವಾಸ್ ಎಂಬುವರ ಹತ್ತಾರು ಎಕರೆ ಪ್ರದೇಶದ ಶುಂಠಿ, ಜೋಳ, ಅಡಿಕೆ ಹಾಗೂ ತೆಂಗು ಇನ್ನಿತರ ಕೃಷಿಗೆ ಹಾನಿಯಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ನದಿ ದಡದ ಜಮೀನುಗಳಿಗೆನೀರು ನುಗ್ಗಿ ಹಾನಿ ಬೆಳೆ ನಷ್ಟವಾಗಿ, ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಭೂಮಿ ಸತ್ವ ಕಳೆದು ಸಮೃದ್ಧ ಬೆಳೆ ಬೆಳೆಯಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಪನಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಹಾರಂಗಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು, ನದಿದಂಡೆಯ ಹುದುಗೂರು, ಮಲ್ಲೇನಹಳ್ಳಿ, ಮಾದಲಾಪುರ ಕಾಳಿದೇವನ ಹೊಸೂರು, ವ್ಯಾಪ್ತಿಯಲ್ಲಿ ಜಮೀನಿಗೆ ನೀರು ನುಗ್ಗಿ ಅಡಿಕೆ, ಶುಂಠಿ, ಜೋಳದ ಬೆಳೆಗಳು ಜಲಾವೃತವಾಗಿವೆ. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಸಂಘದ ಮುಖಂಡ ಮಂಜುನಾಥ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.