ADVERTISEMENT

ತೀರ್ಥೋದ್ಭವ | ₹ 75 ಲಕ್ಷ ಅನುದಾನ: ಭರದ ಸಿದ್ಧತೆ

ತಲಕಾವೇರಿ, ಭಾಗಮಂಡಲಗಳಲ್ಲಿ ಕಾವೇರಿ ಜಾತ್ರೆಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:52 IST
Last Updated 9 ಅಕ್ಟೋಬರ್ 2025, 5:52 IST
ತಲಕಾವೇರಿಯಲ್ಲಿ ತೀರ್ಥೋ್ದ್ಭವ ನಡೆಯಲಿರುವ ಕುಂಡಿಕೆ ಹಾಗೂ ಸ್ನಾನದಕೊಳ.(ಸಂಗ್ರಹಚಿತ್ರ)
ತಲಕಾವೇರಿಯಲ್ಲಿ ತೀರ್ಥೋ್ದ್ಭವ ನಡೆಯಲಿರುವ ಕುಂಡಿಕೆ ಹಾಗೂ ಸ್ನಾನದಕೊಳ.(ಸಂಗ್ರಹಚಿತ್ರ)   

ನಾಪೋಕ್ಲು: ಮಡಿಕೇರಿ ದಸರಾ ಮುಗಿಯುತಿದ್ದಂತೆ ತಲಕಾವೇರಿಯಲ್ಲಿ ವಾರ್ಷಿಕ ಜಾತ್ರೆಗೆ ಬಿರುಸಿನ ತಯಾರಿ ನಡೆಯುತ್ತಿದೆ. ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ 9 ದಿನಗಳು ಮಾತ್ರ ಬಾಕಿ ಉಳಿದಿದ್ದು ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಅಕ್ಟೋಬರ್ 17 ರಂದು ಮಧ್ಯಾಹ್ನ 1.44ಕ್ಕೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಶ್ರೀ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಆವಿರ್ಭವಿಸಲಿದ್ದಾಳೆ. ಅಂದಿನಿಂದ ಒಂದು ತಿಂಗಳ ಕಾಲ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳಲ್ಲಿ ಕಾವೇರಿ ಜಾತ್ರೆ ನಡೆಯಲಿದ್ದು ಎರಡು ಕ್ಷೇತ್ರಗಳಲ್ಲಿ ಜಾತ್ರಾ ಸಿದ್ಧತೆಗಳು  ನಡೆದಿವೆ.

‘ಎರಡು ವರ್ಷಗಳಿಂದ ನಡುರಾತ್ರಿ ಕಾವೇರಿ ತೀರ್ಥೋದ್ಭವವಾಗಿದ್ದು, ಕಳೆದ ವರ್ಷ ಬೆಳಗಿನ ಜಾವ ತೀರ್ಥೋದ್ಭವ ಜರುಗಿತ್ತು. ಈ ವರ್ಷ ಮಧ್ಯಾಹ್ನ ಕಾವೇರಿ ತೀರ್ಥೋದ್ಭವ ಇರುವುದರಿಂದ ಕಾವೇರಿ ದರ್ಶನಕ್ಕಾಗಿ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ.  ಭದ್ರತೆ,  ಭಕ್ತರ ಅನುಕೂಲಕ್ಕಾಗಿ ಹೆಚ್ಚಿನ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಕ್ಷೇತ್ರದಲ್ಲಿ ಮೆಟಲ್ ಶೀಟ್ ಪೆಂಡಾಲ್, ಬ್ಯಾರಿಕೇಡ್, ಸಿಸಿ ಟಿವಿ ಕ್ಯಾಮೆರಾ ಹಾಗೂ ತೀರ್ಥೋದ್ಭವ ವೀಕ್ಷಿಸಲು ಅಲ್ಲಲ್ಲಿ ಎಲ್ಇಡಿ ಪರದೆ ಅಳವಡಿಸಲು ಯೋಜಿಸಲಾಗಿದೆ.  ತಲಕಾವೇರಿ ಮತ್ತು ಭಾಗಮಂಡಲಗಳಲ್ಲಿ ಅಗತ್ಯ ಪಾರ್ಕಿಂಗ್ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯಗಳ ನಿರ್ಮಿಸಲಾಗುತ್ತಿದೆ. ಆಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜಿಸಲಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡಪ್ರದಾನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ತಲಕಾವೇರಿ ಭಾಗಮಂಡಲ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಮಾಹಿತಿ ನೀಡಿದರು.

ADVERTISEMENT

ಕಾವೇರಿ ಜಾತ್ರೆಗಾಗಿ ₹ 75 ಲಕ್ಷ  ಅನುದಾನ ಬಿಡುಗಡೆಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಸದ್ಯದಲ್ಲೇ ಜಿಲ್ಲಾಧಿಕಾರಿ ಖಾತೆಗೆ ಬರಲಿದೆ. ದೀಪಾಲಂಕಾರ ಮತ್ತು ಪೆಂಡಾಲ್ ವ್ಯವಸ್ಥೆಯನ್ನು ಮಡಿಕೇರಿಯ ‘ಮರ್ಕೆರ ಪವರ್ಸ್’ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ. ₹10.80ಲಕ್ಷ  ವೆಚ್ಚದಲ್ಲಿ ಪೆಂಡಾಲ್, ಬ್ಯಾರಿಕೇಡ್ ಮತ್ತು ದೀಪಾಲಂಕಾರ ಮಾಡಲಾಗುತ್ತಿದ್ದು, ₹ 6.70 ಲಕ್ಷ ವೆಚ್ಚದಲ್ಲಿ ಕ್ಷೇತ್ರಕ್ಕೆ ಹೂವಿನ ಅಲಂಕಾರ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಸಿಸಿ ಟಿವಿ ಕ್ಯಾಮೆರಾ, ಅಲ್ಲಲ್ಲಿ ಎಲ್ಇಡಿ ಸ್ಕ್ರೀನ್, ಡ್ರೋನ್ ಕ್ಯಾಮೆರಾ ಮತ್ತು ಡಿಜಿಟಲ್‌ ಕ್ಯಾಮೆರಾಗಳನ್ನು ಬಳಸಿ ವಿಡಿಯೊ ಚಿತ್ರೀಕರಣಕ್ಕಾಗಿ ₹5.95 ಲಕ್ಷ  ಖರ್ಚು ಮಾಡಲಾಗುತ್ತಿದೆ.

ಜಾತ್ರಾ ದಿನದಂದು ಹೆಚ್ಚುವರಿಯಾಗಿ 25 ಕೆಎಸ್‌ಆರ್‌ಟಿಸಿ ಬಸ್‌ಗಳು ತಲಕಾವೇರಿ ಮತ್ತು ಭಾಗಮಂಡಲ ನಡುವೆ ಸಂಚರಿಸಲಿದ್ದು, ಭಕ್ತರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಗಮಂಡಲದಲ್ಲಿ ವಾಹನ ನಿಲ್ಲಿಸಿ ತಲಕಾವೇರಿಗೆ ತೆರಳಲು ಉಚಿತ ಬಸ್  ಇರುತ್ತದೆ.

ಮಳೆಯಿಂದಾಗಿ ದೇವಾಲಯಗಳ ಗೋಪುರ,ನೆಲಹಾಸು, ಆಲಂಕಾರಿಕ ಕಲ್ಲುಗಳು ಕಳೆಗುಂದಿದ್ದು, ಶುಚಿಗೊಳಿಸಿ, ಸುಣ್ಣಬಣ್ಣಗಳಿಂದ ಅಲಂಕರಿಸಲಾಗುತ್ತಿದೆ.ಕಾವೇರಿ ನೀರಾವರಿ ನಿಗಮದಿಂದ ತ್ರೀವೇಣಿ ಸಂಗಮದ ಸ್ನಾನಘಟ್ಟದಲ್ಲಿ ಹೂಳೆತ್ತುವ ಕಾರ್ಯ ಆರಂಭಗೊಂಡಿದೆ.

ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಬುಧವಾರ ಭಕ್ತರು ಆಗಮಿಸಿದರು.

ತೀರ್ಥೋದ್ಭವ 17ರಂದು

ತುಲಾ ಸಂಕ್ರಮಣದ ಅಂಗವಾಗಿಭಾಗಮಂಡಲದ ಭಗಂಡೇಶ್ವರ ಮತ್ತು ತಲಕಾವೇರಿಯ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ವಿಧಿಗಳ ಜರುಗುತ್ತಿವೆ. ಅ. 14ರಂಧು ಬೆಳಿಗ್ಗೆ 11.45 ಕ್ಕೆ  ಅಕ್ಷಯಪಾತ್ರೆ ಇರಿಸುವುದು. ಅಂದು ಸಂಜೆ 4.45ಕ್ಕೆ  ಕಾಣಿಕೆ ಡಬ್ಬ ಇರಿಸುವುದು.  ತಲಕಾವೇರಿ ದೇವಾಲಯದಲ್ಲಿ ಅ.17ರಂದು ಮಧ್ಯಾಹ್ನ 1. 44ಕ್ಕೆ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಮಡೆಯಲಿದೆ.

ಕಟ್ಟುಪಾಡು ಉಲ್ಲಂಘನೆಗೆ ಆಕ್ರೋಶ

ಕಾವೇರಿ ತೀರ್ಥೋದ್ಭವದ ಪ್ರಯುಕ್ತ ಕ್ಷೇತ್ರಗಳಲ್ಲಿ  ತಯಾರಿ ನಡೆಯುತ್ತಿದೆ. ಭಾಗಮಂಡಲದಲ್ಲಿ ತುಲಾ ಸಂಕ್ರಮಣ ಧಾರ್ಮಿಕ ವಿಧಿಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಜಾತ್ರೆಯ ಕಟ್ಟುಪಾಡುಗಳ ಆಚರಣೆ ಮಾಡುತ್ತಿದ್ದಾರೆ. ಅಕ್ಟೋಬರ್ 4 ರಂದು  ಆಜ್ಞಾ ಮಹೂರ್ತವನ್ನು ನೆರವೇರಿಸುವುದರೊಂದಿಗೆ ಭಾಗಮಂಡಲ ವ್ಯಾಪ್ತಿಯಲ್ಲಿ ವಿವಿಧ ಕಟ್ಟುಪಾಡುಗಳನ್ನು ವಿಧಿಸಲಾಗಿದೆ.

ಜಾತ್ರೆ ಮುಗಿಯುವವರೆಗೆ ನಾಡಿನಲ್ಲಿ ಮದ್ಯ ಮಾಂಸ ಸೇವನೆ ಮರಕಡಿಯುವುದು ಬಲಿ ಹಿಂಸಾ ಕೃತ್ಯಗಳಿಗೆ ನಿರ್ಬಂಧ ವಿಧಿಸಿದೆ. ಕಟ್ಟುಪಾಡು ಉಲ್ಲಂಘಿಸಿದ ಅಸ್ಸಾಂನಿಂದ ಬಂದಿದ್ದ  ಕಾರ್ಮಿಕರು ಬುಧವಾರ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಮೀನು ಹಿಡಿದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪವಿತ್ರ ಕ್ಷೇತ್ರವನ್ನು ಅಶುದ್ಧ ಮಾಡಿರುವ ಬಗ್ಗೆ ಸ್ಥಳೀಯರು ಪಿಡಿಒ ಗಮನಕ್ಕೆ ತಂದು ಪೊಲೀಸ್ ಅಧಿಕಾರಿಗಳಿಗೆ ಕಾರ್ಮಿಕರನ್ನು ‌ಹಸ್ತಾಂತರಿಸಿದರು. ಕಾರ್ಮಿಕರ ವಿರುದ್ಧ ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಸ್ಸಾಂ ಮೂಲದಕಾರ್ಮಿಕರು ತ್ರಿವೇಣಿ ಸಂಗಮದಲ್ಲಿ ಹಿಡಿದ ಮೀನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.