ಮಡಿಕೇರಿ: ನಾಡಿನ ಜೀವನದಿ ಎನಿಸಿದ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಕ್ಷಣಗಳಿಗಾಗಿ ಭಕ್ತ ವೃಂದ ಕಾತರವಾಗಿದೆ. ಅ. 17ರಂದು ಮಧ್ಯಾಹ್ನ 1.44ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ತೀರ್ಥೋದ್ಭವ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ.
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ ಮೂಲಕ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ರಸ್ತೆ ಮಾರ್ಗದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವರ್ಷ ತೀರ್ಥೊದ್ಭವ ಮಧ್ಯಾಹ್ನ ನಡೆಯಲಿರುವುದರಿಂದ ಅಪಾರ ಜನಸ್ತೋಮ ಈ ಸಂಭ್ರಮದ ಕ್ಷಣಗಳಿಗಾಗಿ ಆಗಮಿಸುವ ನಿರೀಕ್ಷೆ ಇದೆ.
ತಲಕಾವೇರಿ ಪವಿತ್ರ ತೀರ್ಥೋದ್ಭವ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕೆ ಹಾಗೂ ಜನಸಂದಣಿ, ನೂಗುನುಗ್ಗಲು ತಪ್ಪಿಸಲು ಅಗತ್ಯ ಇರುವ ಕಡೆ ಬ್ಯಾರಿಕೇಡ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲೂ ತೀರ್ಥೋದ್ಭವ ನಡೆಯುವ ಪುಷ್ಕರಣಿಯ ಸುತ್ತ ಸುಮಾರು 10 ಅಡಿ ಎತ್ತರದ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ.
ಭಕ್ತಾದಿಗಳು ತೀರ್ಥ ಪಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಇದಕ್ಕಾಗಿ ಸ್ವಯಂಸೇವಕರನ್ನೂ ನಿಯೋಜಿಸಲಾಗಿದೆ.
ಮಡಿಕೇರಿ, ಭಾಗಮಂಡಲ, ತಲಕಾವೇರಿಗೆ ಹೋಗುವ ರಸ್ತೆ ಬದಿಯಲ್ಲಿರುವ ಗಿಡಗಂಟಿಗಳನ್ನು ತೆರವು ಮಾಡಿ, ಸುಗಮ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾಯಿ ಕಾವೇರಿ ಮಾತೆಯ ಭಕ್ತಿಗೀತೆಗಳ ಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಈ ಸಂಬಂಧ ವೇದಿಕೆ ನಿರ್ಮಾಣ ಮಾಡಲಾಗಿದೆ. ಕೊಡಗು ಏಕೀಕರಣ ರಂಗದಿಂದ ಭಕ್ತಾದಿಗಳ ಪ್ರಸಾದ ವಿನಿಯೋಗಕ್ಕೆ ಅಗತ್ಯ ಸಿದ್ಧತೆಗಳೂ ನಡೆದಿವೆ.
ಪರಿಸರ ಶುಚಿತ್ವ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಂದಾಯ, ಪೊಲೀಸ್, ಪಂಚಾಯತ್ ರಾಜ್, ಸೆಸ್ಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸಗಳನ್ನು ಕೈಗೊಂಡಿದ್ದಾರೆ.
ತಲಕಾವೇರಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಎಲ್‍ಇಡಿ ಪರದೆಗಳ ಅಳವಡಿಕೆ, ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಸಹ ಶ್ರೀ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೂಜಾ ವಿಧಿ ವಿಧಾನಗಳು ನಡೆಯಲಿವೆಕೋಡಿ ಮೋಟಯ್ಯ ತಕ್ಕ ಮುಖ್ಯಸ್ಥ.
ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿಯೂ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ತ್ರಿವೇಣಿ ಸಂಗಮದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆಚಂದ್ರಶೇಖರ್ ಭಗಂಡೇಶ್ವರ-ತಲಕಾವೇರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ.
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಸಿದ್ಧತೆಯನ್ನು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಗುರುವಾರ ಪರಿಶೀಲಿಸಿದರು. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಬಳಿಕ ತಲಕಾವೇರಿಯಲ್ಲಿನ ಸಿದ್ಧತೆ ಪರಿಶೀಲಿಸಿದರು.
ಭಕ್ತಾದಿಗಳಿಗೆ ಯಾವುದೇ ರೀತಿ ಕಿರಿಕಿರಿ ಉಂಟಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ತಕ್ಕ ಮುಖ್ಯಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.