ADVERTISEMENT

‘ಕೊಡಗರ್‌ ಸಿಪಾಯಿ’ ಚಿತ್ರೀಕರಣ ಆರಂಭ

ಮುಕ್ಕೋಡ್ಲು ವ್ಯಾಲಿ ಡ್ಯೂ ಹೋಮ್‌ ಸ್ಟೇಯಲ್ಲಿ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 14:34 IST
Last Updated 3 ಜುಲೈ 2019, 14:34 IST
ಮುಕ್ಕೋಡ್ಲು ಗ್ರಾಮದ ವ್ಯಾಲಿ ಡ್ಯೂ ಹೋಮ್‌ ಸ್ಟೇಯಲ್ಲಿ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಫೋರಂ ಅಧ್ಯಕ್ಷರೂ ಆದ ನಿವೃತ್ತ ಕರ್ನಲ್‌ ಕೆ.ಸುಬ್ಬಯ್ಯ ಅವರು ಬುಧವಾರ ‘ಕೊಡಗರ್‌ ಸಿಪಾಯಿ’ ಚಿತ್ರಕ್ಕೆ ಕ್ಲಾಪ್‌ ಮಾಡಿ ಚಾಲನೆ ನೀಡಿದರು 
ಮುಕ್ಕೋಡ್ಲು ಗ್ರಾಮದ ವ್ಯಾಲಿ ಡ್ಯೂ ಹೋಮ್‌ ಸ್ಟೇಯಲ್ಲಿ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಫೋರಂ ಅಧ್ಯಕ್ಷರೂ ಆದ ನಿವೃತ್ತ ಕರ್ನಲ್‌ ಕೆ.ಸುಬ್ಬಯ್ಯ ಅವರು ಬುಧವಾರ ‘ಕೊಡಗರ್‌ ಸಿಪಾಯಿ’ ಚಿತ್ರಕ್ಕೆ ಕ್ಲಾಪ್‌ ಮಾಡಿ ಚಾಲನೆ ನೀಡಿದರು    

ಮಡಿಕೇರಿ: ಕೊಡಗಿನ ಪ್ರಕೃತಿ ಮಡಿಲಲ್ಲಿ ‘ಕೊಡಗರ್‌ ಸಿಪಾಯಿ’ ಚಿತ್ರಕ್ಕೆ ಬುಧವಾರ ಮುಹೂರ್ತ ನಡೆಯಿತು.

ಮುಕ್ಕೋಡ್ಲು ಗ್ರಾಮದ ವ್ಯಾಲಿ ಡ್ಯೂ ಹೋಮ್‌ ಸ್ಟೇಯಲ್ಲಿ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಫೋರಂ ಅಧ್ಯಕ್ಷರೂ ಆಗಿರುವ ನಿವೃತ್ತ ಕರ್ನಲ್‌ ಕೆ.ಸುಬ್ಬಯ್ಯ ಅವರು ಚಿತ್ರಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸುಬ್ಬಯ್ಯ,‘ ಕೊಡವ ಸಂಸ್ಕೃತಿ ಆಚಾರ, ವಿಚಾರ ಉಳಿಸಬೇಕು. ನೆಲ, ಜಲ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸಗಳೂ ನಡೆಯಲಿ. ವಿವಿಧ ಮಾಧ್ಯಮಗಳ ಮೂಲಕವೂ ಪರಿಸರ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ADVERTISEMENT

ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್‌ ಮಾತನಾಡಿ, ‘ಉಳುವಂಗಡ ಕಾವೇರಿ ಉದಯ ಅವರ ‘ಕೊಡಗರ್‌ ಸಿಪಾಯಿ’ ಕಾದಂಬರಿ ಓದಿದ ಕೂಡಲೇ ಅದೇ ಕತೆ ಆಧರಿಸಿ ಚಿತ್ರ ತೆಗೆಯಲು ನಿರ್ಧರಿಸಿದೆ. ಮುಕ್ಕೋಡ್ಲು ಭಾಗದಲ್ಲಿ ಹತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಈ ಭಾಗದ ಪರಿಸರವೂ ಪೂರಕವಾಗಿದೆ’ ಎಂದು ಹೇಳಿದರು.

ನಿರ್ದೇಶಕ ಕೌಶಿಕ್‌ ಮಾತನಾಡಿ, ‘ಕೊಡಗಿನವರು ಪ್ರೀತಿ– ವಿಶ್ವಾಸ ತೋರುವ ಜನರು’ ಎಂದು ಹೇಳಿದರು.

ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಾದೇಶಿಕ ಸಿನಿಮಾಗಳು ದೊಡ್ಡಮಟ್ಟದಲ್ಲಿ ಬೆಳೆಯಬೇಕು. ಭಾರತವು ಹಲವು ಧರ್ಮ, ಜಾತಿಗಳಿಂದ ಕೂಡಿದ್ದು ಪರಸ್ಪರ ಗೌರವಿಸಿದರೆ ಮಾತ್ರ ಎಲ್ಲರ ಬೆಳವಣಿಗೆ ಸಾಧ್ಯ. ನಮ್ಮವರ ಪ್ರಯತ್ನಕ್ಕೆ ಮೊದಲು ನಾವೇ ಬೆಂಬಲವಾಗಿ ನಿಲ್ಲಬೇಕು. ಆಗ ಮಾತ್ರ ಫಲ ಸಿಗಲಿದೆ ಎಂದು ಹೇಳಿದರು.

‘ಕೊಡಗಿನಲ್ಲಿ ಪರಿಸರ ಉಳಿದರೆ ದಕ್ಷಿಣ ಭಾರತದಲ್ಲಿ ಜೀವಂತಿಕೆ ಕಾಣಲು ಸಾಧ್ಯ. ಪರಿಸರ ಉಳಿಸುವ ಸಂದೇಶವುಳ್ಳ ಕಾರ್ಯಕ್ರಮ ಹಾಗೂ ಸಿನಿಮಾ ಮೂಡಿಬರಬೇಕು. ಪರಿಸರವನ್ನೂ ಉಳಿಸಿಕೊಂಡು ಮೂಲಸೌಕರ್ಯ ಕಲ್ಪಿಸುವ ಕೆಲಸ ಆಗಬೇಕು’ ಎಂದು ಕರೆ ನೀಡಿದರು.

ನಟಿ ತೇಜಸ್ವಿನಿ ಶರ್ಮಾ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಬರಹಗಾರ್ತಿ ಉಳುವಂಗಡ ಕಾವೇರಿ ಉದಯ್‌, ಪತ್ರಕರ್ತೆ ಸವಿತಾ ರೈ, ಮನು, ಸಹ ನಿರ್ಮಾಪಕಿ ಯಶೋಧಾ ಕಾರ್ಯಪ್ಪ, ಛಾಯಾಗ್ರಾಹಕ ಜಗನ್ನಾಥ್, ಪೋಷಕ ನಟ ವಾಂಚಿರ ವಿಠಲ್‌, ಅಮಿತ್‌, ಪ್ರಸನ್ನ, ಭೂಮಿಕಾ, ವರುಣ್‌, ರಜಿ ಬೆಳ್ಯಪ್ಪ ಹಾಜರಿದ್ದರು.

ಅಥ್ಲೀಟ್ ತೀತಮಾಡ ಅರ್ಜುನ್‌ ದೇವಯ್ಯ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.