ADVERTISEMENT

ಅಯ್ಯಪ್ಪ ಬೆಟ್ಟಕ್ಕೆ ಭೂವಿಜ್ಞಾನಿಗಳ ಭೇಟಿ, ಪರಿಶೀಲನೆ

ಬೆಟ್ಟದಲ್ಲಿ ವಾಸವಿದ್ದ 54 ಕುಟುಂಬಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 12:55 IST
Last Updated 17 ಆಗಸ್ಟ್ 2019, 12:55 IST

ವಿರಾಜಪೇಟೆ (ಕೊಡಗು): ಇಲ್ಲಿನ ಅಯ್ಯಪ್ಪ ಬೆಟ್ಟದಲ್ಲಿ ಭಾರೀ ಮಳೆಯಿಂದ ಬಿರುಕು ಕಾಣಿಸಿಕೊಂಡಿದ್ದು, ಆ ಸ್ಥಳಕ್ಕೆ ಶನಿವಾರ ಭೂವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದರು.

‘ಮಳೆಯ ನೀರು ಕಲ್ಲುಗಳ ಸಂದುಗಳಲ್ಲಿ ಸೇರಿ ಮಣ್ಣು ತೇವಗೊಂಡು ಬಿರುಕು ಕಾಣಿಸಿರುವ ಸಾಧ್ಯತೆಯಿದೆ. ನೀರು ಒಳಹೋಗದಂತೆ ಎಚ್ಚರಿಕೆ ವಹಿಸಬೇಕು. ಇಳಿಜಾರು ಹೊಂದಿರುವ ಬೆಟ್ಟದ ಕೆಲಭಾಗದಲ್ಲಿ ವಾಸಿಸುವ ನಿವಾಸಿಗಳು ಸದಾ ಜಾಗೃತರಾಗಿಬೇಕು’ ಎಂದು ಭೂವಿಜ್ಞಾನಿ ಸುನಂದನ್ ಬಸು ಹೇಳಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ‘ಮತ್ತೆ ಮಳೆ ಹೆಚ್ಚಾದರೆ ಸಮಸ್ಯೆಯಾಗಲಿದೆ ಎಂದು ಭೂವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಮಣ್ಣಿನ ಪರೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವಿಸ್ತೃತ ವರದಿ ಸಲ್ಲಿಸಲಿದ್ದಾರೆ. ಅಯ್ಯಪ್ಪ ಬೆಟ್ಟ ಹಾಗೂ ನೆಹರೂ ಬೆಟ್ಟದಲ್ಲಿ ವಾಸವಿದ್ದ 54 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮಳೆ ಕ್ಷೀಣಿಸಿದ ನಂತರ ಮತ್ತೊಂದು ತಜ್ಞರ ತಂಡವು ಈ ಸ್ಥಳದಲ್ಲಿ ಅಧ್ಯಯನ ನಡೆಸಲಿದೆ’ ಎಂದು ಮಾಹಿತಿ ನೀಡಿದರು.

ಭೂವಿಜ್ಞಾನಿ ಕಪಿಲ್ ಸಿಂಗ್, ಐಎಎಸ್ ಅಧಿಕಾರಿ ಸುಮೇಶ್ ಹಾಜರಿದ್ದರು. ಇತ್ತೀಚೆಗೆ ಕೊಡಗಿನಲ್ಲಿ ಸುರಿದಿದ್ದ ಭಾರೀ ಮಳೆಯಿಂದ ಪಟ್ಟಣದ ಅಯ್ಯಪ್ಪ ಬೆಟ್ಟದ ಮೇಲೆ ಬಿರುಕು ಬಿಟ್ಟು ಬೆಟ್ಟದ ನಿವಾಸಿಗಳಿಗೆ ಹಾಗೂ ಬೆಟ್ಟದ ತಪ್ಪಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.