ADVERTISEMENT

ಕೊಡಗು: ಜಿಲ್ಲೆಗೆ ಸೇರ್ಪಡೆಯಾಯಿತು ಮತ್ತೊಂದು ಇಂದಿರಾ ಕ್ಯಾಂಟೀನ್

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:42 IST
Last Updated 10 ಮೇ 2025, 15:42 IST
ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಅನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಶನಿವಾರ ಲೋಕಾರ್ಪಣೆಗೊಳಿಸಿದರು.
ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಅನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಶನಿವಾರ ಲೋಕಾರ್ಪಣೆಗೊಳಿಸಿದರು.   

ಕುಶಾಲನಗರ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಶನಿವಾರ ಶಾಸಕ ಡಾ.ಮಂತರ್‌ಗೌಡ ಅವರು ಇಂದಿರಾ ಕ್ಯಾಂಟೀನ್‌ ಅನ್ನು ಲೋಕಾರ್ಪಣೆಗೊಳಿಸಿದರು. ಈ ಮೂಲಕ ಉತ್ತರ ಕೊಡಗಿನಲ್ಲಿ ಮೊದಲ ಇಂದಿರಾ ಕ್ಯಾಂಟೀನ್ ಚಾಲನೆಗೊಂಡಿತು. ಬಡಜನರ ಬಹು ವರ್ಷಗಳ ಬೇಡಿಕೆಯೂ ಈಡೇರಿತು.

ಲೋಕಾರ್ಪಣೆಗೊಳಿಸಿ ಮಾತನಾಡಿದ ಡಾ.ಮಂತರ್‌ಗೌಡ, ‘ಹಸಿವಿನ ಸೂಚ್ಯಂಕದಲ್ಲಿ ದೇಶ 105ನೇ ಸ್ಥಾನದಲ್ಲಿದೆ. ಹಸಿವನ್ನು ನಿವಾರಿಸುವುದು ನಮ್ಮ ಸರ್ಕಾರದ ಧ್ಯೇಯ’ ಎಂದರು.

₹ 1.14 ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರ ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದೆ. ಇದರಿಂದ ಬಡವರಿಗೆ, ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಉಂಟಾಗಲಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಹೆಚ್ಚು ದುಡ್ಡು ಕೊಟ್ಟರೆ ಹೆಚ್ಚು ರುಚಿ ಎನ್ನುವ ಭಾವನೆ ಇದೆ. ಅದು ತಪ್ಪು ಎನ್ನುವುದು ಇಂದಿರಾ ಕ್ಯಾಂಟೀನ್ ಮೂಲಕ ಸಾಬೀತಾಗಬೇಕು. ಶುಚಿ, ರುಚಿ ಕಾಪಾಡಿಕೊಳ್ಳಬೇಕು. ಜನಪ್ರತಿನಿಧಿಗಳು, ಪ್ರಮುಖರು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುವಂತಾಗಬೇಕು. ಸಾರ್ವಜನಿಕರಿಗೆ ಗೌರವ ಕೊಟ್ಟು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿದ ಶಾಸಕರು ನೂತನ ಕಟ್ಟಡವನ್ನು ಉದ್ಘಾಟಿಸಿ ಅಡುಗೆ ಕೋಣೆ ಪರಿಶೀಲಿಸಿದ ಶಾಸಕರು ಶುಚಿ, ರುಚಿ, ಗುಣಮಟ್ಟ ಕಾಯ್ದುಕೊಂಡು ಆಹಾರ ಒದಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ‘ಇಂದಿರಾ ಕ್ಯಾಂಟೀನ್ ಬಡಜನರ ಹೊಟ್ಟೆ ತುಂಬಿಸಲಿದೆ. ಕಡಿಮೆ ದರದಲ್ಲಿ ಉಪಾಹಾರ, ಊಟ ಪೂರೈಸುವ ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇಂದಿರಾ ಕ್ಯಾಂಟಿನ್ ಬಡವರಿಗೆ ಅಶಾಕಿರಣ’ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಉಪಾಧ್ಯಕ್ಷೆ ಪುಟ್ಟಲಕ್ಷ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ‘ಕುಡಾ’ ಅಧ್ಯಕ್ಷ ಪ್ರಮೋದ್ ‌ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ನಟೇಶ್ ಗೌಡ, ಪುರಸಭೆ ಸದಸ್ಯರಾದ ವಿ.ಎಸ್.ಆನಂದಕುಮಾರ್, ಎಂ.ಕೆ.ದಿನೇಶ್, ಶಿವಶಂಕರ್, ಎಂ.ಎಂ.ಪ್ರಕಾಶ್, ಜಯಲಕ್ಷ್ಮಮ್ಮ ನಂಜುಂಡಸ್ವಾಮಿ, ಶೇಖ್ ಕಲೀಮುಲ್ಲಾ, ಸುರಯ್ಯಭಾನು, ಹರೀಶ್, ತಹಸೀಲ್ದಾರ್ ಕಿರಣ್ ಗೌರಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಮುಖಂಡರಾದ ಸುನಿತಾ ಮಂಜುನಾಥ್, ರಂಜನ್ ಹೆಬ್ಬಾಲೆ, ಟಿ.ಬಿ.ಜಗದೀಶ್, ಬಿ.ಡಿ.ಅಣ್ಣಯ್ಯ, ಎಸ್.ಎಸ್. ಚಂದ್ರಶೇಖರ್, ಚಂದನ್ ಭಾಗವಹಿಸಿದ್ದರು.

Highlights - ₹ 1.14 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ ಬಡವರಿಗೆ ಅನುಕೂಲವಾಗಲಿರುವ ಇಂದಿರಾ ಕ್ಯಾಂಟೀನ್‌ ಶುಚಿ, ರುಚಿ ಕಾಪಾಡಿಕೊಳ್ಳಲು ಶಾಸಕ ಸೂಚನೆ

Cut-off box - ಆನೆ ಶಿಬಿರ: ಅನಿಯಂತ್ರಿತ ಪ್ರವೇಶ ನಿಲ್ಲಿಸಲು ಸೂಚನೆ ಹಾರಂಗಿ ಅಣೆಕಟ್ಟಿಗೆ ಪ್ರವಾಸಿಗರನ್ನು ಬಿಡುತ್ತಿಲ್ಲ ಎನ್ನುವುದು ಸರಿಯಲ್ಲ. ನಾಗರಿಕರ ರಕ್ಷಣೆ ನಮ್ಮ ಜವಾಬ್ದಾರಿ. ಅಣೆಕಟ್ಟೆಗೆ ಭದ್ರತೆ ಕಲ್ಪಿಸಲಾಗಿದೆ. ಆನೆ ಶಿಬಿರದ ಅನಿಯಂತ್ರಿತ ಪ್ರವೇಶ ನಿಲ್ಲಿಸಲೂ ಸೂಚನೆ ನೀಡಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.