
ಪ್ರಾತಿನಿಧಿಕ ಚಿತ್ರ
ಮಡಿಕೇರಿ: ‘ಆಟೊ ಚಾಲಕರ ಚಾಲನಾ ಪರಿಮಿತಿಯನ್ನು 55 ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘ, ಕಾವೇರಿ ವಾಹನ ಮಾಲೀಕರು ಮತ್ತು ಚಾಲಕರ ಸಂಘ ಹಾಗೂ ಕಾಫಿನಾಡು ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಸಂಘಗಳು ಎಚ್ಚರಿಕೆ ನೀಡಿವೆ.
ಯಾವುದೇ ಕಾರಣಕ್ಕೂ ಆಟೊ ಚಾಲಕರ ಚಾಲನಾ ಪರಿಮಿತಿಯನ್ನು ಈಗ ಇರುವ 15 ಕಿ.ಮೀ ವ್ಯಾಪ್ತಿಯಿಂದ ಹೆಚ್ಚಿಸಬಾರದು ಎಂದು ಈ ಸಂಘಗಳ ಪದಾಧಿಕಾರಿಗಳು ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸಂತೋಷ್ ಕಾರ್ಯಪ್ಪ ಮಾತನಾಡಿ, ‘ಆಟೊ ಚಾಲಕರು ಈಗ ತಮ್ಮ ಆಟೊವನ್ನು 15 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಬಹುದು. ಈಗ ಅವರು 55 ಕಿ.ಮೀವರೆಗೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದು ಸರಿಯಲ್ಲ’ ಎಂದು ಅವರು ಖಂಡಿಸಿದರು.
ಒಂದು ವೇಳೆ ಅವರ ಮನವಿಯಂತೆ ಸರ್ಕಾರ ಆಟೊ ಚಾಲಕರಿಗೆ 55 ಕಿ.ಮೀ ವರೆಗೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಿದರೆ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಬದುಕು ಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಹೇಳಿದರು.
‘ಈಗಾಗಲೇ ಬಾಡಿಗೆ ಬೈಕ್‌ಗಳಿಂದ ನಮಗೆ ತೀವ್ರತರವಾದ ನಷ್ಟ ಉಂಟಾಗಿದೆ. 500ಕ್ಕೂ ಅಧಿಕ ಬಾಡಿಗೆ ಬೈಕ್‌ಗಳು ನಗರದಲ್ಲಿ ಸಂಚರಿಸುತ್ತಿವೆ. ಇದರಿಂದ ಅಪಾರ ನಷ್ಟ ಉಂಟಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.
‘ಟ್ಯಾಕ್ಸಿಗಳಿಗೆ ಪ್ಯಾನಿಕ್ ಬಟನ್ ಅಳವಡಿಸಬೇಕು, ಜಿಪಿಎಸ್ ಹಾಕಿಸಬೇಕು ಎಂಬ ನಿಯಮ ಜಾರಿಗೊಳಿಸಲಾಗುತ್ತಿದೆ. ವಾಹನ ವಿಮೆ ಸೇರಿದಂತೆ ಇನ್ನಿತರ ವೆಚ್ಚಗಳೂ ದುಬಾರಿಯಾಗಿವೆ. ಇಂತಹ ಸನ್ನಿವೇಶದಲ್ಲಿ ಒಂದು ವೇಳೆ ಆಟೊ ಚಾಲಕರಿಗೆ 55 ಕಿ.ಮೀವರೆಗೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಿದರೆ ನಮ್ಮ ಗತಿ ಏನು’ ಎಂದು ಪ್ರಶ್ನಿಸಿದರು.
ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಉಪಾಧ್ಯಕ್ಷ ಅರಸು ಮುಕ್ಕಾಟಿ, ಕಾವೇರಿ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಸತೀಶ್, ಕಾಫಿನಾಡು ಪ್ರವಾಸಿ ವಾಹನ ಚಾಲಕರ ಸಂಘದ ಅಧ್ಯಕ್ಷ ಗಗನ್ ಹಾಗೂ ಕಾರ್ಯದರ್ಶಿ ಬ್ರಿಜೇಶ್ ಹಾಗೂ ಖಾದರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.