ADVERTISEMENT

ದಶಕದ ನಂತರ ಕೊಡಗು ಜಿಲ್ಲಾ ಸಮಿತಿಗೆ ಬಂತು ಜೀವ: ಯೋಜನೆಯೇ ಇಲ್ಲದೆ ಸಭೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 3:11 IST
Last Updated 21 ಜನವರಿ 2026, 3:11 IST
ಮಡಿಕೇರಿಯಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಯೋಜನಾ ಸಮಿತಿಯ ಸಭೆಯಲ್ಲಿ ಸಭೆಯಲ್ಲಿ ಸಚಿವ ಎನ್.ಎಸ್.ಭೋಸರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು
ಮಡಿಕೇರಿಯಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಯೋಜನಾ ಸಮಿತಿಯ ಸಭೆಯಲ್ಲಿ ಸಭೆಯಲ್ಲಿ ಸಚಿವ ಎನ್.ಎಸ್.ಭೋಸರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು   

ಮಡಿಕೇರಿ: 2014ರ ನಂತರ ನಡೆದ ಮೊದಲ ಕೊಡಗು ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಅಧಿಕಾರಿಗಳು ಅಕ್ಷರಶಃ ತಡವರಿಸಿದರು. ಬಹುತೇಕ ಅಧಿಕಾರಿಗಳು ಯಾವುದೇ ಯೋಜನೆ ಇಲ್ಲದೇ ಬಂದಿದ್ದರು. ಕೆಲವರು ಪ್ರಗತಿ ಪರಿಶೀಲನಾ ಸಭೆ ಎಂಬಂತೆ ಹಿಂದಿನ ಸಾಲಿನ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು. ಯಾವುದೇ ದೂರದೃಷ್ಟಿಯ ಯೋಜನೆ ಪ್ರಸ್ತಾವಕ್ಕೆ ಬಾರದೇ, ಯಾವುದೂ ಅಂತಿಮಗೊಳ್ಳದೇ ಸಭೆ ಮುಕ್ತಾಯ ಕಂಡಿತು.

ಇಲ್ಲಿ ಮಂಗಳವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ನೇತೃತ್ವದಲ್ಲಿ ನಡೆದ ಕೊಡಗು ಜಿಲ್ಲಾ ಯೋಜನಾ ಸಮಿತಿಯ ಸಭೆಯಲ್ಲಿ ಈ ದೃಶ್ಯಗಳು ಕಂಡು ಬಂದವು. ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಬಳಿಕ ಜಿಲ್ಲಾಮಟ್ಟದ ಸಭೆ ಕರೆಯಲು ತೀರ್ಮಾನಿಸಲಾಯಿತು.

ಮುಂಬರುವ ಸಾಲಿಗೆ ಜಿಲ್ಲೆಗೆ ಬೇಕಾದ ಯೋಜನೆಗಳ ಕುರಿತು ಪ್ರಸ್ತಾವ ಸಲ್ಲಿಸಲೆಂದು ಕರೆಯಲಾಗಿದ್ದ ಸಭೆಗೆ ಕೆಲವು ಅಧಿಕಾರಿಗಳು ಗೈರಾಗಿದ್ದರು. ಅವರಿಗೆಲ್ಲ ತುರ್ತಾಗಿ ನೋಟಿಸ್ ನೀಡುವಂತೆ ಸಚಿವರು ಸೂಚಿಸಿದರು.

ADVERTISEMENT

‘ಸಭೆಗೂ ಮುನ್ನ ತಮ್ಮಡನೆ ಯಾವೊಬ್ಬ ಅಧಿಕಾರಿಯೂ ಚರ್ಚೆ ನಡೆಸಿಲ್ಲ. ಹಾಗಾದರೆ, ನಮ್ಮನ್ನು ಸಭೆಗೆ ಆಯ್ಕೆ ಮಾಡಿದ ಉದ್ದೇಶವಾದರೂ ಏನು’ ಎಂದು ಸಮಿತಿ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಪ್ರಶ್ನಿಸಿದರು. ಸ್ವತಃ ಶಾಸಕರೂ ಇದಕ್ಕೆ ದನಿಗೂಡಿಸಿ ‘ನಮ್ಮೊಡನೆಯೂ ಚರ್ಚೆ ನಡೆಸಿಲ್ಲ’ ಎಂದು ಅಸಮಾಧಾನ ಹೊರ ಹಾಕಿದರು.

ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಯಾವುದೇ ಕಾರಣಕ್ಕೂ ಉದಾಸೀನ ಧೋರಣೆ ತಳೆಯದೇ ಹೆಚ್ಚು ಕಾಳಜಿಯಿಂದ ಹೊಸ ಯೋಜನೆ ರೂಪಿಸಿ’ ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ‘ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮದಂತೆ ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕರಡು ಅಭಿವೃದ್ಧಿ ಯೋಜನೆಗಳನ್ನು ಕ್ರೋಢೀಕರಿಸಲು ಜಿಲ್ಲಾ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಯೋಜನಾ ಸಮಿತಿಯನ್ನು ಸರ್ಕಾರ ರಚಿಸಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ, ‘ರಾಜಾಸೀಟು ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಾಹನಗಳ ನಿಲುಗಡೆಗೆ ತುಂಬಾ ತೊಂದರೆ ಇದೆ. ಆದ್ದರಿಂದ ಸೂಕ್ತ ಸ್ಥಳ ಕಲ್ಪಿಸಬೇಕು’ ಎಂದು ಸಲಹೆ ಮಾಡಿದರು.

ಸಮಿತಿ ಸದಸ್ಯ ಕೊಲ್ಲಿರ ಬೋಪಣ್ಣ ಮಾತನಾಡಿ, ‘ಬರಪೊಳೆಯಿಂದ ನೀರು ಕೇರಳಕ್ಕೆ ಹೋಗುತ್ತಿದ್ದು, ಈ ನೀರನ್ನು ಕೊಡಗು ಜಿಲ್ಲೆಗೆ ಬಳಸಬೇಕು’ ಎಂದು ಇದೇ ವೇಳೆ ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ‘ಜಿಲ್ಲೆಯ ಕೆಲವು ಭಾಗದಲ್ಲಿ 9-10 ಅಡಿ ರಸ್ತೆ ಇದ್ದು, ಚರಂಡಿ ನಿರ್ಮಿಸದೆ ರಸ್ತೆಗಳು ಹಾಳಾಗುತ್ತಿವೆ. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಹೆಚ್ಚಿನ ಗಮನಹರಿಸಬೇಕು’ ಎಂದು ಸಲಹೆ ನೀಡಿದರು. ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಅವರು ಪಡಿತರ ಚೀಟಿ ಸಂಬಂಧ ವಿಷಯ ಪ್ರಸ್ತಾಪಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು
ಪಡಿತರ ಚೀಟಿಗೆ ಸಂಬಂಧಿಸಿದಂತೆ ಬಿಪಿಎಲ್‍ನಿಂದ ಎಪಿಎಲ್‍ಗೆ ಬದಲಾಗಿರುವ ಕಾರ್ಡುಗಳನ್ನು ಪರಿಷ್ಕರಿಸಲು ತಾಲ್ಲೂಕುವಾರು ಮಾಹಿತಿ ನೀಡಬೇಕು. ಸರಿಪಡಿಸಲು ಕ್ರಮವಹಿಸಲಾಗುವುದು
ಎಸ್.ಜೆ.ಸೋಮಶೇಖರ್ ಜಿಲ್ಲಾಧಿಕಾರಿ
ಚುನಾವಣೆ ಮೂಲಕ ನೂತನ ಸದಸ್ಯರು ಆಯ್ಕೆಯಾಗಿದ್ದು ಯೋಜನೆ ಸಂಬಂಧ ಅಧ್ಯಯನ ಮಾಡಬೇಕಿದೆ. ಆ ನಿಟ್ಟಿನಲ್ಲಿ ಒಂದು ವಾರಗಳ ಕಾಲಾವಕಾಶ ನೀಡಬೇಕು
ಬಿ.ವೈ.ರಾಜೇಶ್ ಕೊಡಗು ಜಿಲ್ಲಾ ಯೋಜನಾ ಸಮಿತಿ ಸದಸ್ಯ
ಕರಿಕೆ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಆಗಬೇಕು. ಜೊತೆಗೆ ವೈದ್ಯರನ್ನು ನೇಮಿಸಬೇಕು
ಬಾಲಕೃಷ್ಣ ನಾಯರ್ ಸಮಿತಿ ಸದಸ್ಯ
ಯಾವುದೇ ಕ್ರಿಯಾಯೋಜನೆ ತಯಾರಿಸುವಾಗ ಹೆಚ್ಚಿನ ಅನುದಾನ ಪ್ರಸ್ತಾವನೆ ಸಲ್ಲಿಸಬೇಕು. ಗದ್ದಿಗೆಯ ಉದ್ಯಾನವಿದ್ದು ನಿರ್ವಹಣೆಯನ್ನು ಇನ್ನಷ್ಟು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು
ಮನ್ಸೂರ್ ಸಮಿತಿ ಸದಸ್ಯ.

ಸ್ಪಷ್ಟತೆಯಿಂದ ಯೋಜನೆ ರೂಪಿಸಿ; ಪೊನ್ನಣ್ಣ

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ ‘ಮುಂದಿನ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳ ಸಂಬಂಧ ಯಾವ ರೀತಿ ಯೋಜನೆ ರೂಪಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ರಸ್ತೆ ಸೇತುವೆ ಆಸ್ಪತ್ರೆ ಶಾಲಾ ಕಟ್ಟಡಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ನಿಖರ ಅಂಕಿ ಅಂಶ ಒದಗಿಸಬೇಕು. ಕೇವಲ ಹಳೆಯದನ್ನೇ ಚರ್ಚೆ ಮಾಡುವುದಕ್ಕೆ ಈ ಸಭೆ ಕರೆದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು. ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಬಡ ಕುಟುಂಬಗಳಿಗೆ ಬಿಪಿಎಲ್‌ನಿಂದ ಎಪಿಎಲ್‍ಗೆ ಬದಲಾಗಿದ್ದಲ್ಲಿ ಸೇರ್ಪಡೆ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ಒದಗಿಸಬೇಕು ಎಂದು ಹೇಳಿದರು.

ಯೋಜನೆಗಳು ಜನಪರವಾಗಿರಲಿ; ಮಂತರ್‌ಗೌಡ

ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಇದನ್ನು ಒಂದು ರೀತಿಯಲ್ಲಿ ಪೂರ್ವಭಾವಿ ಸಭೆ ಎಂದೇ ಪರಿಗಣಿಸೋಣ. ಕ್ರಿಯಾಯೋಜನೆ ತಯಾರಿಸುವ ಸಂಬಂಧ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಬೇಕು’ ಎಂದು ಹೇಳಿದರು. ‘ಯೋಜನೆಗಳು ವೈಜ್ಞಾನಿಕವಾಗಿರಬೇಕು ದೂರಗಾಮಿಯಾಗಿರಬೇಕು ಹಾಗೂ ಜನಪರವಾಗಿರಬೇಕು. ಎಲ್ಲರಿಗೂ ತಲುಪುವಂತಿರಬೇಕು. ಆ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.