ಮಡಿಕೇರಿ: 'ಕೊಡಗು ಜಿಲ್ಲೆಯಲ್ಲಿ ಈ ವರ್ಷ ಸಂಚಾರ ದಟ್ಟಣೆ ನಿಯಂತ್ರಿಸುವುದನ್ನೇ ಆದ್ಯತೆ ವಿಷಯವನ್ನಾಗಿ ಪರಿಗಣಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.
ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯನ್ನು ಮಾದಕ ವಸ್ತುಗಳ ಮಾಫಿಯಾ ಹಾಗೂ ಸಂಚಾರ ಸಮಸ್ಯೆಗಳು ಹೆಚ್ಚು ಕಾಡುತ್ತಿವೆ. ಇವುಗಳಲ್ಲಿ ಮಾದಕ ವಸ್ತುಗಳ ಮಾಫಿಯಾ ನಿಯಂತ್ರಣವನ್ನೇ ಕಳೆದ ವರ್ಷ ಪ್ರಧಾನ ಆದ್ಯತೆಯ ವಿಷಯನ್ನಾಗಿ ಪರಿಗಣಿಸಲಾಯಿತು. ಅದರಲ್ಲಿ ಯಶಸ್ಸೂ ಸಹ ಸಾಧಿಸಲಾಯಿತು. ಈ ವರ್ಷ ಸಂಚಾರ ದಟ್ಟಣೆ ನಿಯಂತ್ರಣದ ವಿಷಯವನ್ನು ಆಯ್ದುಕೊಳ್ಳಲಾಗುವುದು’ ಎಂದರು.
‘ಮಾದಕ ವಸ್ತುಗಳ ನಿಯಂತ್ರಣ ಕುರಿತ ಪ್ರಮುಖ ಜವಾಬ್ದಾರಿ ಪೊಲೀಸ್ ಇಲಾಖೆಯದ್ದೇ ಆಗಿತ್ತು. ಹಾಗಾಗಿ, ಇದಕ್ಕೂ ಮುಂಚಿನ ವರ್ಷಗಳಿಗಿಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಿ, ನೂರಾರು ಆರೋಪಿಗಳನ್ನು ಬಂಧಿಸಲಾಯಿತು. ಮುಂದೆಯೂ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಹೇಳಿದರು.
‘ಸಂಚಾರ ದಟ್ಟಣೆ ನಿಯಂತ್ರಣ ವಿಷಯವು ಕೇವಲ ಪೊಲೀಸ್ ಇಲಾಖೆಗೆ ಮಾತ್ರ ಸಂಬಂಧಿಸಿಲ್ಲ. ಇದು ನಗರಸಭೆ, ಪಟ್ಟಣ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳನ್ನು ಒಳಗೊಂಡಿದೆ’ ಎಂದರು.
‘ಈಗ ಜಿಲ್ಲೆಯಲ್ಲಿ ಕೇವಲ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಮಾತ್ರ ಸಂಚಾರ ದಟ್ಟಣೆಯ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದರ ನಿಯಂತ್ರಣಕ್ಕೆ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಗೆಂದ ಮಾತ್ರಕ್ಕೆ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿವೆ ಎಂದರ್ಥವಲ್ಲ. ಈ ವರ್ಷ ಯಾರೇ ಯಾವುದೇ ದೂರು ತೆಗೆದುಕೊಂಡು ಠಾಣೆಗೆ ಹೋದರೂ ಅವುಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಹಾಗಾಗಿ, ಸಂಖ್ಯೆಯಲ್ಲಿ ದಾಖಲಾದ ಪ್ರಕರಣಗಳು ಹೆಚ್ಚೆಂದು ತೋರುತ್ತಿದೆ. ಆದರೆ, ವಾಸ್ತವದಲ್ಲಿ ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಎಲ್ಲವೂ ನಿಯಂತ್ರಣದಲ್ಲಿವೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ತೋಟಗಳ ಮಾಲೀಕರೂ ಹೆಚ್ಚಿನ ನಿಗಾ ವಹಿಸಬೇಕು. ಹೊರ ರಾಜ್ಯದಿಂದ ಬಂದವರನ್ನು ನಾವು ತಡೆಯುವುದಕ್ಕೆ ಆಗುವುದಿಲ್ಲ. ಬಂದವರ ಪೂರ್ವಾಪರಗಳನ್ನು ವಿಚಾರಿಸಿ ದಾಖಲಾತಿಗಳನ್ನು ಮಾಲೀಕರು ಸಂಗ್ರಹಿಸಿಕೊಳ್ಳಬೇಕು’ ಎಂದರು.
‘ಬೀಟ್ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಸಭೆ ನಡೆಸಿ ಫೋಟೊಗಳನ್ನು ನೀಡಿದರಷ್ಟೇ ಅವರಿಗೆ ಭತ್ಯೆಗಳನ್ನು ನೀಡಲು ನಿರ್ಧರಿಸಲಾಗಿದೆ. ಇದಾದ ನಂತರ, ಹೆಚ್ಚು ಹೆಚ್ಚು ಸಭೆಗಳು ನಡೆಯುತ್ತಿವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳೀಧರ್, ಸಂಘದ ಗೌರವ ಸಲಹೆಗಾರ ಎಚ್.ಟಿ.ಅನಿಲ್, ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ಉಪಾಧ್ಯಕ್ಷ ರವಿಕುಮಾರ್ ಭಾಗವಹಿಸಿದ್ದರು.
ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲು ಸಲಹೆ ಸಂಚಾರ ದಟ್ಟಣೆ ನಿಯಂತ್ರಣ ಎಲ್ಲರ ಜವಾಬ್ದಾರಿ ವರ್ಗಾವಣೆಯಾದರೂ ಮುಂಬರುವ ಎಸ್.ಪಿಗೆ ಮಾಹಿತಿ
ಮದ್ಯಸೇವನೆಯಿಂದ ಅಪರಾಧ ಕೊಲೆ ‘ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಿ ರಾಜಕೀಯ ಪ್ರೇರಿತವಾದ ಕೊಲೆಯಾಗಲಿ ರೌಡಿಗಳ ಕೊಲೆಯಾಗಲಿ ಆಗಿಲ್ಲ. ಆಗಿರುವ ಬಹುತೇಕ ಕೊಲೆಗಳು ಕೌಟುಂಬಿಕ ಕಾರಣಕ್ಕೆ ಆಗಿವೆ. ಹೆಚ್ಚಾಗಿ ಮದ್ಯಸೇವನೆಯಿಂದ ಆ ಕ್ಷಣದಲ್ಲಿ ಉಂಟಾದ ಕೊಲೆಗಳೇ ಆಗಿವೆ. ಹೀಗಾಗಿ ಅಕ್ರಮ ಮದ್ಯ ಮಾರಾಟದ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ’ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪ್ರಶ್ನೆಯೊಂದಕ್ಕೆ ತಿಳಿಸಿದರು.
ಅಕ್ರಮ ಹೋಂಸ್ಟೇ ಇದ್ದರೆ 112ಕ್ಕೆ ಕರೆ ಮಾಡಿ ಸಂವಾದದಲ್ಲಿ ಪಾಲ್ಗೊಂಡ ಕೊಡಗು ಪತ್ರಕರ್ತರ ಸಂಘ ಗೌರವ ಸಲಹೆಗಾರ ಎಚ್.ಟಿ.ಅನಿಲ್ ಅವರು ಜಿಲ್ಲೆಯಲ್ಲಿರುವ ಅಕ್ರಮ ಹೋಂ ಸ್ಟೇಗಳಿಂದಾಗುವ ಸಮಸ್ಯೆಗಳನ್ನು ಕುರಿತು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ‘ಅಕ್ರಮ ಹೋಂಸ್ಟೇಗಳಿಂದ ಸಮಸ್ಯೆಗಳಾಗುತ್ತಿದ್ದಲ್ಲಿ 112ಗೆ ಕರೆ ಮಾಡಿ ತಿಳಿಸಿದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.