ADVERTISEMENT

ಕೊಡಗು | ಹೆಚ್ಚಿದ ಕಾಡಾನೆ ದಾಳಿ; ಹೈರಾಣಾದ ಜನ

ನಿತ್ಯವೂ ಒಂದಿಲ್ಲೊಂದು ಕಡೆಯಲ್ಲಿ ಕಾಡಾನೆಗಳು ಗೋಚರ, ಬೆಳೆ ನಾಶ, ಮನುಷ್ಯರಿಗೆ ಗಾಯ

ಕೆ.ಎಸ್.ಗಿರೀಶ್
Published 11 ಆಗಸ್ಟ್ 2025, 7:28 IST
Last Updated 11 ಆಗಸ್ಟ್ 2025, 7:28 IST
ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಈಚೆಗೆ ಮನೆಯೊಂದರೆ ಮುಂಭಾಗದ ಕಬ್ಬಿಣದ ಗೇಟನ್ನು ಮುರಿದು ಹಾಕಿರುವುದು
ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಈಚೆಗೆ ಮನೆಯೊಂದರೆ ಮುಂಭಾಗದ ಕಬ್ಬಿಣದ ಗೇಟನ್ನು ಮುರಿದು ಹಾಕಿರುವುದು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ದಾಳಿ ಹೆಚ್ಚುತ್ತಿದ್ದು, ಆತಂಕ ಮೂಡಿಸಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಾಡಾನೆಗಳ ದಾಳಿಗೆ ಜನರು ಸಿಲುಕುತ್ತಿದ್ದಾರೆ. ಅವರಲ್ಲಿ ಒಬ್ಬರು ಮೃತಪಟ್ಟಿದ್ದರೆ, ಇನ್ನಿಬ್ಬರು ಗಾಯಗೊಂಡಿದ್ದಾರೆ. ಕಳೆದ ಒಂದು ವಾರ ಮಾತ್ರವಲ್ಲ, ಕಳೆದೊಂದು ತಿಂಗಳಿನಿಂದ ಕಾಡಾನೆ ದಾಳಿ ಇಲ್ಲದ ದಿನಗಳೇ ಇಲ್ಲವೆನ್ನುವಷ್ಟು ಪ್ರಮಾಣದಲ್ಲಿ ಕಾಡಾನೆಗಳು ತೋಟಗಳು, ಜನವಸತಿ ಪ್ರದೇಶಗಳಲ್ಲಿ ದಾಳಿ ನಡೆಸುತ್ತಿವೆ.

ಇಲ್ಲಿಯವರೆಗೆ ಕೇವಲ ತೋಟದ ಕಾರ್ಮಿಕರ ಮೇಲೆ, ಮಾಲೀಕರು ಮಾತ್ರ ಕಾಡಾನೆ ದಾಳಿಗೆ ಒಳಗಾಗುತ್ತಿದ್ದರು. ಆದರೆ, ಕಳೆದೆರಡು ದಿನಗಳಿಂದ ವಾಹನ ಸವಾರರೂ ಗಾಯಗೊಳ್ಳುತ್ತಿದ್ದಾರೆ. ಶುಕ್ರವಾರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದವರು, ಶನಿವಾರ ಆಟೊದಲ್ಲಿ ತೆರಳುತ್ತಿದ್ದವರ ಮೇಲೆ ಕಾಡಾನೆಗಳು ದಾಳಿ ನಡೆಸಿರುವುದು ವಾಹನ ಸವಾರರಲ್ಲೂ ಈಗ ಭೀತಿ ಮೂಡಿಸಿದೆ.

ಅರಣ್ಯಾಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಕಾಡಾನೆಗಳು ದಾಳಿ ನಡೆಸುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಷ್ಟೇ ಅಲ್ಲ ಸರ್ಕಾರದ ಕರ್ತವ್ಯವೂ ಹೌದು ಎಂಬುದು ಇತ್ತೀಚಿನ ಘಟನೆಗಳು ಹೇಳುವಂತಿವೆ.

ADVERTISEMENT

ಅರಣ್ಯಾಧಿಕಾರಿಗಳು ವಿವಿಧ ಬಗೆಯ ತಂಡಗಳನ್ನು ರಚಿಸಿ ಮಾಹಿತಿ ದೊರೆತ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವುದು ಹಾಗೂ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ, ಮತ್ತೆ ಮತ್ತೆ ಕಾಡಾನೆಗಳು ಕಾಡಿನಿಂದ ಹೊರಬರುತ್ತಿವೆ. ಇದನ್ನು ಸರ್ಕಾರದ ಪರಿಣಾಮಕಾರಿ ಕ್ರಮಗಳು ಮಾತ್ರವೇ ತಡೆಯಲು ಸಾಧ್ಯ.

ಎಲ್ಲೆಲ್ಲಿ ಕಾಡಿನಿಂದ ಹೊರಬರುವ ಮಾರ್ಗಗಳಿವೆಯೋ ಅಲ್ಲಲ್ಲಿ ಆನೆ ಕಂದಕ ನಿರ್ಮಿಸುವುದು, ಸಾಧ್ಯವಿರುವ ಕಡೆ ಹ್ಯಾಂಗಿಂಗ್ ಸೋಲಾರ್ ತಂತಿಗಳನ್ನು ಹಾಕುವುದು, ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಸರ್ಕಾರ ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿದೆ. ಆಗ ಮಾತ್ರ ಕಾಡಾನೆ ಉಪಟಳ ನಿಯಂತ್ರಣ ಸಾಧ್ಯ. ಅದನ್ನು ಬಿಟ್ಟು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಗದಾಪ್ರಹಾರ ನಡೆಸಿದರೆ ಕಾಡಾನೆ ದಾಳಿ ನಿಲ್ಲಿಸುವುದು ಸಾಧ್ಯವಿಲ್ಲ ಎಂಬ ಅಂಶವನ್ನು ಸರ್ಕಾರ ಮನಗಾಣಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಆಡಳಿತದಲ್ಲಿರುವವರು ಪ್ರತಿ ಬಾರಿಯೂ ಕಾಡಾನೆ ದಾಳಿಗೆ ತುತ್ತಾಗಿ ಗಾಯಗೊಂಡವರನ್ನು ನೋಡಿಕೊಂಡು ಬಂದರೆ ಸಾಲದು. ದಾಳಿ ನಡೆಸಿದ ಪ್ರದೇಶದಲ್ಲಿ ಮತ್ತೆ ಕಾಡಾನೆ ಬಾರದಿರುವಂತೆ ತಡೆಯಲು ಕಾರ್ಯಯೋಜನೆ ರೂಪಿಸಬೇಕು ಮತ್ತು ಅದನ್ನು ಜಾರಿಗೆ ತರಬೇಕಿದೆ. ಇದಕ್ಕೆಲ್ಲ ಹೆಚ್ಚಿನ ಹಣದ ಅಗತ್ಯ ಇರುವುದರಿಂದ ರಾಜ್ಯಸರ್ಕಾರವೇ ಕಾಡಾನೆ ದಾಳಿ ತಡೆಯಲು ಮುಂದಾಗಬೇಕಿದೆ.

ಮತ್ತೊಂದೆಡೆ, ಈಗಾಗಲೆ ಗಾಯಗೊಂಡು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಬಂದವರ ಸ್ಥಿತಿಗತಿ ಕುರಿತೂ ವಿಚಾರಿಸಬೇಕಿದೆ. ಅವರಿಗೂ ಸೂಕ್ತ ಹಣಕಾಸಿನ ನೆರವು ನೀಡಬೇಕಿದೆ.

ಜನರೂ ಎಚ್ಚರಿಕೆ ವಹಿಸಬೇಕಿದೆ: ಕಾಡಾನೆ ದಾಳಿ ಸಿಲುಕದಿರುವ ಜವಾಬ್ದಾರಿಯೂ ಜನರ ಮೇಲಿದೆ ಎಂಬುದನ್ನು ಯಾರೂ ಮರೆಯಬಾರದು. ‘ಇದು ನಮ್ಮ ಭೂಮಿ. ಬೆಳಿಗ್ಗೆ ಸಂಜೆ ಓಡಾಡಬೇಡಿ ಎಂದು ಹೇಳಲು ನೀವು ಯಾರು?’ ಎಂದು ಅರಣ್ಯಾಧಿಕಾರಿಗಳನ್ನು ಪ್ರಶ್ನಿಸದೇ ಮೊದಲು ಎಲ್ಲರೂ ತಮ್ಮ ತಮ್ಮ ಸುರಕ್ಷತೆ ಕಡೆಗೆ ಗಮನ ಕೊಡಬೇಕಿದೆ.

ಕಾಡಾನೆ ಸಂಚರಿಸುತ್ತಿರುವ ವೇಳೆ ವಾಹನ ಚಾಲನೆ ಮಾಡದೇ ಅದು ಹೋಗುವವರೆಗೂ ಸಾಕಷ್ಟು ದೂರದಲ್ಲಿ ನಿಂತು ಹೊರಡಬೇಕು. ಕಾಡಾನೆಯನ್ನೇ ನಾವು ಓಡಿಸುತ್ತೇವೆ ಎಂಬ ಹಠಕ್ಕೆ ಬೀಳದೇ ಒಂದೋ, ಎರಡೋ ತೆಂಗಿನಮರವನ್ನೋ, ಒಂದಿಷ್ಟು ಬೆಳೆಯನ್ನೋ ನಾಶಪಡಿಸಿದರೂ ಸುರಕ್ಷಿತ ಸ್ಥಳ ಬಿಟ್ಟು ಹೊರಬರಬಾರದು. ಏಕೆಂದರೆ, ಬೆಳೆಗಿಂತಲೂ ಜೀವ ಮುಖ್ಯ ಎಂಬುದನ್ನು ಮರೆಯಬಾರದು.

ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಮೆಟ್ನಳ್ಳ ಇಳಿಜಾರಿನಲ್ಲಿ ಕಾಡಾನೆಯೊಂದು ರಾತ್ರಿ ಹೆದ್ದಾರಿಯಲ್ಲಿ ಸಂಚರಿಸಿದೆ
ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟುವ ದೃಶ್ಯವನ್ನು  ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿರುವುದು

ದಿನೇ ದಿನೇ ಹೆಚ್ಚುತ್ತಿದೆ ಕಾಡಾನೆ ಹಾವಳಿ ಶಾಶ್ವತ ಪರಿಹಾರಕ್ಕೆ ಜನರ ಆಗ್ರಹ ನಡೆಯುತ್ತಿವೆ ಪ್ರತಿಭಟನೆಗಳು

ಇಂದು ಪ್ರತಿಭಟನೆಗೆ ಕರೆ

ಚೆಂಬು ಗ್ರಾಮ ವ್ಯಾಪ್ತಿಯ ದಬ್ಬಡ್ಕ-ಚೆಂಬು ಮತ್ತು ಊರುಬೈಲು ಚೆಂಬು ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ. ಈಚೆಗೆ ರೈತರೊಬ್ಬರು ಕಾಡಾನೆಯಿಂದ ಮೃತಪಟ್ಟರು. ಸಂಜೆ 4 ಗಂಟೆಯ ನಂತರ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಚೆಂಬು ಸಾರ್ವಜನಿಕ ಹಿತರಕ್ಷಣಾ ಸಮಿತಿ ಆ. 11ರಂದು ಸಂಪಾಜೆ ವಲಯ ಅರಣ್ಯಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಪ್ರತಿದಿನ ಕೃಷಿಕರ ತೋಟಗಳಿಗೆ ಕಾಡಾನೆಗಳು ನುಗ್ಗಿ ಅಡಿಕೆ ತೆಂಗು ಬಾಳೆ ಮತ್ತಿತರ ಕೃಷಿ ಫಸಲನ್ನು ತಿಂದು ಅಪಾರ ನಷ್ಟ ಉಂಟು ಮಾಡುತ್ತಿದ್ದು ಕೃಷಿಕರ ಬದುಕೇ ದುಸ್ತರವಾಗಿದೆ. ಕಳೆದ ಕೆಲವು ದಿನಗಳಿಂದ ಒಂಟಿಸಲಗವೊಂದು ಗ್ರಾಮದಲ್ಲೇ ಬೀಡುಬಿಟ್ಟಿದ್ದು ಜನ ಆತಂಕದಲ್ಲೇ ದಿನದೂಡುವಂತಾಗಿದೆ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯ ಪಡುವಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಮಿತಿಯ ಅಧ್ಯಕ್ಷ ಸಚಿನ್ ಕೆದಂಬಾಡಿ ಹಾಗೂ ಕಾರ್ಯದರ್ಶಿ ಪುಂಡರೀಕ ಅರಂಬೂರು ತಿಳಿಸಿದ್ದಾರೆ.

ಕಾಡು ಬಿಟ್ಟು ಹೊರ ಬರುತ್ತಿದ್ದಂತೆ ಓಡಿಸುವ ಕಾರ್ಯಾಚರಣೆ ಆಗಲಿ ವನ್ಯಜೀವಿಗಳು ನಾಡಿಗೆ ಬಂದ ನಂತರ ವಾಪ‍ಸ್ ಕಾಡಿಗೆ ಕಳುಹಿಸುವ ಕೆಲಸ ಮಾಡುವುದರ ಬದಲಿಗೆ ಕಾಡು ಬಿಟ್ಟು ಒಂದು ಕಿ.ಮೀ ಹೊರಗೆ ಬರುತ್ತಿದ್ದಂತೆ ಆ ‍ಪ್ರಾಣಿಯನ್ನು ವಾಪಸ್ ಕಾಡಿಗೆ ಕಳುಹಿಸುವ ಕೆಲಸ ಆಗಬೇಕಾಗಿದೆ. ಅರಣ್ಯಾಧಿಕಾರಿಗಳು ಕಾಡಂಚಿನಲ್ಲಿರಬೇಕೇ ಹೊರತು ನಗರ ಪ್ರದೇಶದಲ್ಲಿ ಅಲ್ಲ. ವಿಜ್ಞಾನ ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ ಇನ್ನೂ ಏಕೆ ವನ್ಯಜೀವಿ– ಮಾನವ ಸಂಘರ್ಷ ತಡೆಯಲು ಸಾಧ್ಯವಾಗುತ್ತಿಲ್ಲ? ಕಂದಕ ರೈಲ್ವೆ ಬ್ಯಾರಿಕೇಡ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ

-ಮನು ಸೋಮಯ್ಯ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ

ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ದಬ್ಬಡ್ಕ-ಚೆಂಬು ಮತ್ತು ಊರುಬೈಲು ಚೆಂಬು ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಸಾಮಾನ್ಯ ಎನಿಸಿತು. ಈ ಬಾರಿ ಒಬ್ಬರು ಪ್ರಾಣ ಕಳೆದುಕೊಂಡರು. ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕು. ರೈತರಿಗೆ ಸೋಲಾರ್ ತಂತಿಗಳನ್ನು ಅಳವಡಿಸಿಕೊಡಬೇಕು. ಸಾಧ್ಯವಿರುವ ಆನೆಕಂದಕಗಳಂತಹ ಕ್ರಮಗಳನ್ನು ಕೈಗೊಳ್ಳಬೇಕು ರಮೇಶ್ ಚೆಂಬು ಗ್ರಾಮ ಪಂಚಾಯಿತಿ ಸದಸ್ಯ ಕಾಡಾನೆಗಳನ್ನು ಸೆರೆ ಹಿಡಿಯಬೇಕು ಮೊನ್ನೆ ಒಬ್ಬರು ಕಾಡಾನೆಯಿಂದ ಸಾವಾಗಿದೆ. 4 ಗಂಟೆಯ ನಂತರ ಜನರು ಓಡಾಡುವ ಪರಿಸ್ಥಿತಿ ಇಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ಓಡಾಡುವುದು ಕಷ್ಟಕರವಾಗಿದೆ. ಒಂಟಿ ಸಲಗದ ಕಾಟ ಮಿತಿ ಮೀರಿದೆ. ಕಾಡಾನೆಗಳನ್ನು ಸೆರೆ ಹಿಡಿಯಲೇ ಬೇಕು.

-ತೀರ್ಥರಾಮ ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ

ಶಾಶ್ವತ ಪರಿಹಾರದ ಮಾರ್ಗೋಪಾಯಗಳು ಬೇಕು ಚೆಂಬು ಗ್ರಾಮದ ದಬ್ಬಡ್ಕ ಗುಡ್ಡಗಾಡು ಪ್ರದೇಶ. ಕಾಡಾನೆ ಹಾವಳಿ ಹೆಚ್ಚಾಗಿದೆ. ಸಾವು ಆದ ನಂತರ ಹಗಲು– ರಾತ್ರಿ ಅರಣ್ಯಾಧಿಕಾರಿಗಳು ಈಗ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಒಂದು ಕಾಡಾನೆ ಹಿಡಿದು ಕಾಡಿಗೆ ಬಿಡುವುದರಿಂದ ಸಮಸ್ಯೆ ನಿವಾರಣೆಯಾಗುವುದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಬೇಕಿದೆ. ಈ ಶಾಶ್ವತ ಪರಿಹಾರದ ಮಾರ್ಗೋಪಾಯಗಳನ್ನು ಚಿಂತನೆ ಮಾಡಿ ವೈಜ್ಞಾನಿಕವಾಗಿ ಜಾರಿಗೊಳಿಸಬೇಕು.

-ಗಿರೀಶ ಹೊಸೂರು ಗ್ರಾಮ ಪಂಚಾಯಿತಿ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.