ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಹೃದ್ರೋಗ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಬೆಂಗಳೂರಿನ ವಿಕಾಸಸೌಧದಲ್ಲಿ ಭಾನುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಯೋಜನೆಯನ್ನು ಕಾರ್ಯಗತಗೊಳಿಸುವ ಸಂಬಂಧ ಶೀಘ್ರವಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಸಂಬಂಧ ಚರ್ಚಿಸಲಾಯಿತು.
ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ಯೋಜನೆ ಪ್ರಗತಿ ವಿವರವನ್ನು ಪರಿಶೀಲಿಸಿ, ಅತ್ಯಾಧುನಿಕ ತಂತ್ರಜ್ಞಾನದ ‘ಕ್ಯಾತ್ ಲ್ಯಾಬ್’ ಸ್ಥಾಪಿಸುವ ಸಂಬಂಧ ಅಗತ್ಯ ಪ್ರಸ್ತಾವವನ್ನು ಶೀಘ್ರವಾಗಿ ಸಲ್ಲಿಸಿ ಟೆಂಡರ್ ಆಹ್ಚಾನಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಶಾಸಕ ಡಾ.ಮಂತರ್‌ಗೌಡ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಜಂಟಿ ಕಾರ್ಯದರ್ಶಿ ಡಾ.ವೆಂಕಟೇಶ್ ಮೂರ್ತಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕಿ ಡಾ.ಸುಜಾತ ರಾಥೋಡ್, ರಾಜ್ಯ ‘ಪಿಪಿಪಿ ಕೋಶ’ದ ನಿರ್ದೇಶಕ ಪುರುಷೋತ್ತಮ್ ಸಿಂಗ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.