
ಮಡಿಕೇರಿ: ಜಿಲ್ಲೆಯ ಉದ್ಯಮಿಗಳು ಕೆಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿರಿಸಿದ್ದಾರೆ. ಎಲ್ಲವೂ ಜಿಎಸ್‌ಟಿ ಕುರಿತೇ ಇದ್ದು, ಮುಂಚಿನಂತೆ ಸ್ವಲ್ಪವಾದರೂ ರಿಯಾಯಿತಿ ಕೊಡಿ ಎಂದು ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 350ಕ್ಕೂ ಅಧಿಕ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು ಇವೆ. ಇವುಗಳಲ್ಲಿ ಶೇ 75ರಷ್ಟು ಮಂದಿ ಕಟ್ಟಡ ಬಾಡಿಗೆಗೆ ತೆಗೆದುಕೊಂಡೇ ಹೋಟೆಲ್ ನಡೆಸುತ್ತಿದ್ದಾರೆ. ಮುಂಚೆ ಇವರು ನೀಡುತ್ತಿದ್ದ ಬಾಡಿಗೆಯ ಮೇಲೆ ವಿಧಿಸಲಾಗುತ್ತಿದ್ದ ಶೇ 18ರಷ್ಟು ಜಿಎಸ್‌ಟಿ ವಾಪಸ್ (ಇನ್‌ಪುಟ್) ಸಿಗುತ್ತಿತ್ತು. ಆದರೆ, ಈಗ ಈ ಅವಕಾಶವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ರೂಂ ಬಾಡಿಗೆ ₹ 7,500ಕ್ಕೂ ಕಡಿಮೆ ಇರುವ ಹೋಟೆಲ್‌ನವರಿಗೆ ಈ ರಿಯಾಯಿತಿ ಸಿಗುತ್ತಿಲ್ಲ. ಕೇವಲ ₹ 7,500ಕ್ಕೂ ಅಧಿಕ ಬಾಡಿಗೆ ಹೊಂದಿರುವವರಿಗೆ ಮಾತ್ರವೇ ಈ ಸೌಲಭ್ಯ ನೀಡಲಾಗುತ್ತಿದೆ. ಇದು ಸಣ್ಣ ಮತ್ತು ಮಧ್ಯಮ ಹೋಟೆಲ್ ಉದ್ಯಮಿಗಳಿಗೆ ಹೊರೆಯಾಗಿ ಪರಿಣಮಿಸಿದೆ.
ಮುಂಚಿನಂತೆ ಎಲ್ಲ ಬಗೆಯ ರೂಂ ಬಾಡಿಗೆ ಹೊಂದಿರುವ ಹೋಟೆಲ್ ಉದ್ಯಮಿಗಳು ತಾವು ನಡೆಸುತ್ತಿರುವ ಹೋಟೆಲ್‌ನ ಬಾಡಿಗೆಯಲ್ಲಿ ನೀಡುವ ಶೇ 18ರಷ್ಟು ಜಿಎಸ್‌ಟಿಯನ್ನು ವಾಪಸ್ ನೀಡಬೇಕು (ಇನ್‌ಪುಟ್) ಎಂಬ ಬಲವಾದ ಒತ್ತಾಯ ಹೋಟೆಲ್ ಉದ್ಯಮಿಗಳಿಂದ ವ್ಯಕ್ತವಾಗಿದೆ.
ಹೋಟೆಲ್ ಸಭಾಂಗಣದ ಬಾಡಿಗೆಯ ಮೇಲೂ ಈಗ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ತೆಗೆದು ಹಾಕಿದರೆ ಚಿಕ್ಕ ಚಿಕ್ಕ ಸಭಾಂಗಣಗಳನ್ನು ಪಡೆಯುವ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಈ ಕ್ರಮದ ನಿರೀಕ್ಷೆಯಲ್ಲೂ ಹೋಟೆಲ್ ಉದ್ಯಮಿಗಳಿದ್ದಾರೆ.
ಜಿಎಸ್‌ಟಿ ವಿನಾಯಿತಿ ಕೊಡಿ: ಹೋಟೆಲ್ ರೂಂ ಬಾಡಿಗೆ ದಿನಕ್ಕೆ ₹ 999 ಇದ್ದರೆ ಅದಕ್ಕೆ ಜಿಎಸ್‌ಟಿ ವಿನಾಯಿತಿ ಈ ಮುಂಚೆ ಇತ್ತು. ಆದರೆ, ಈಗ ಈ ವಿನಾಯಿತಿಯನ್ನು ತೆಗೆದು ಹಾಕಲಾಗಿದೆ. ಎಷ್ಟೇ ಬಾಡಿಗೆ ಇದ್ದರೂ ಜಿಎಸ್‌ಟಿ ಪಾವತಿಸಲೇಬೇಕಿದೆ.
ಬಾಡಿಗೆ ದರ ₹ 5 ಸಾವಿರ, ₹ 10 ಸಾವಿರ ಪಾವತಿಸುವ ಗ್ರಾಹಕರಿಗೆ ಜಿಎಸ್‌ಟಿ ಅಷ್ಟೇನೂ ಹೊರೆ ಎನಿಸದೇ ಇದ್ದರೂ ಸಣ್ಣ ಬಾಡಿಗೆ ಕೋಣೆ ಪಡೆಯುವ ಬಡ ಮತ್ತು ಮಧ್ಯಮವರ್ಗದವರಿಗೆ ಜಿಎಸ್‌ಟಿ ಹೊರೆ ಎನಿಸುತ್ತದೆ. ಹಣ ಉಳಿಸಲು ಅಥವಾ ಕಡಿಮೆ ಬಜೆಟ್‌ನಲ್ಲಿ ಪ್ರವಾಸ ಮಾಡುವ ಬಡವರಿಗೆ ಮಧ್ಯಮವರ್ಗದವರಿಗೆ ಒಂದು ರೂಪಾಯಿ ಉಳಿದರೂ ಅದು ಅವರಿಗೆ ದೊಡ್ಡ ಉಳಿತಾಯ ಎನಿಸುತ್ತದೆ. ಹಾಗಾಗಿ, ಕನಿಷ್ಠ ₹ 2 ಸಾವಿರದವರೆಗೆ ಬಾಡಿಗೆ ಪಡೆಯುವ ರೂಂಗಳಿಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.
ಬಹಳಷ್ಟು ಮಂದಿ ಬಡವರು ಪುಣ್ಯಕ್ಷೇತ್ರಗಳಿಗೆ, ದೇಗುಲಗಳಿಗೆ ಭೇಟಿ ನೀಡುತ್ತಾರೆ. ತೀರಾ ಕಡಿಮೆ ದರದ ರೂಂಗಳಲ್ಲಿ ತಂಗುತ್ತಾರೆ. ಇಂತಹ ಬಡವರಿಂದಲೂ ಜಿಎಸ್‌ಟಿ ಪಡೆಯಬೇಕೇ? ಎಂದು ಕೇವಲ ಬಡವರು ಮಾತ್ರವಲ್ಲ, ಹೋಟೆಲ್ ಉದ್ಯಮಿಗಳೂ ಕೇಳುತ್ತಿದ್ದಾರೆ.
ಇವಿಷ್ಟೇ ಅಲ್ಲ, ಇನ್ನೂ ಅನೇಕ ಸುಧಾರಣಾ ಹಾಗೂ ಉತ್ತೇಜನ ಕ್ರಮಗಳನ್ನು ಹೋಟೆಲ್ ಉದ್ಯಮಿಗಳು ಈ ಬಾರಿಯ ಕೇಂದ್ರ ಬಜೆಟ್‌ನಿಂದ ನಿರೀಕ್ಷಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.