ADVERTISEMENT

ಜಿಲ್ಲಾ ಕನ್ನಡ ಸಮ್ಮೇಳನಕ್ಕಾಗಿ ಅನುದಾನ ಬೇಗನೆ ಕೊಡಿ: ಕೊಡಗು ಜಿಲ್ಲಾ ಘಟಕ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:38 IST
Last Updated 17 ಸೆಪ್ಟೆಂಬರ್ 2025, 4:38 IST
ಎಂ.ಪಿ.ಕೇಶವ ಕಾಮತ್‌
ಎಂ.ಪಿ.ಕೇಶವ ಕಾಮತ್‌   

ಮಡಿಕೇರಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಹಣವನ್ನು ಡಿಸೆಂಬರ್‌ ಒಳಗೆ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.

‘ಮಾರ್ಚ್ ತಿಂಗಳಿನಲ್ಲಿ ಅನುದಾನ ನೀಡಿದರೆ ಕೆಲವೇ ದಿನಗಳಲ್ಲಿ ಸಮ್ಮೇಳನ ಮಾಡುವುದಾದರೂ ಹೇಗೆ?’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ ಘಟಕದ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ‘ಅನುದಾನ ತಡವಾಗಿ ನೀಡುವುದರಿಂದಲೇ 2022ರ ನಂತರ ಇಲ್ಲಿ ಜಿಲ್ಲಾ ಸಮ್ಮೇಳನ ನಡೆಸಲು ಸಾಧ್ಯವಾಗಿಲ್ಲ’ ಎಂದರು.

ಡಿಸೆಂಬರ್ ಒಳಗೆ ಅನುದಾನ ಬಿಡುಗಡೆ ಮಾಡಿದರೆ ನಿಶ್ಚಿತವಾಗಿಯೂ ಉತ್ತಮ ಜಿಲ್ಲಾ ಸಮ್ಮೇಳನ ಮಾಡಬಹುದು. ಅನುದಾನ ಬೇಗ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲು ನಿಯೋಗ ತೆರಳಲಾಗುವುದು ಎಂದರು.

ADVERTISEMENT

ಈಚೆಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 8 ಜಿಲ್ಲಾ ಸಮಿತಿಯ ಕಾರ್ಯಕಾರಿ ಮಂಡಳಿ ಸಭೆಯನ್ನು ನಡೆಸಿ ಹಲವು ಹೊಸ ಕಾರ್ಯಕ್ರಮಗಳನ್ನು ಏರ್ಪಡಿಸಲು ನಿರ್ಣಯಿಸಲಾಗಿದೆ ಎಂದು ಹೇಳಿದರು.

ದಾನಿಗಳು ನೀಡಿದ ದತ್ತಿನಿಧಿಗಳಿಂದ ಒಟ್ಟು 51 ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇವುಗಳಲ್ಲಿ ಬಹುತೇಕ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜುಗಳಲ್ಲಿ ನಡೆಸುವುದರ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಕುರಿತು ಆಸಕ್ತಿ ಉಂಟಾಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.

‘ನಾನು ಅಧ್ಯಕ್ಷನಾಗಿ ವಹಿಸಿಕೊಂಡಾಗ ಪರಿಷತ್ತಿನಲ್ಲಿ ಇದ್ದದ್ದು ಕೇವಲ 19 ದತ್ತಿನಿಧಿಗಳು ಮಾತ್ರ. ಈಗ ಅವುಗಳ ಸಂಖ್ಯೆಯನ್ನು 42ಕ್ಕೆ ಏರಿಕೆ ಮಾಡಲಾಗಿದೆ’ ಎಂದು ಹೇಳಿದರು.

‘ನನ್ನ ಅನಾರೋಗ್ಯದ ನಡುವೆಯೂ 2024–25ನೇ ಸಾಲಿನಲ್ಲಿ 78 ಕಾರ್ಯಕ್ರಮಗಳನ್ನು ಘಟಕದ ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹಮ್ಮದ್, ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್.ಸಂಪತ್‌ಕುಮಾರ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮತ್ತು ಜಿಲ್ಲಾ ‍ಪದಾಧಿಕಾರಿಗಳು, ತಾಲ್ಲೂಕು ಹಾಗೂ ಹೋಬಳಿ ಅಧ್ಯಕ್ಷ, ಪದಾಧಿಕಾರಿಗಳ ಸಹಕಾರದಿಂದ ನಡೆದಿವೆ’ ಎಂದು ಮಾಹಿತಿ ನೀಡಿದರು.

ಸಾಹಿತ್ಯ ಚಟುವಟಿಕೆಗಳಿಂದ ಯುವ ಜನತೆ ದೂರ

‘ಸಾಹಿತ್ಯದ ಚಟುವಟಿಕೆಗಳಿಂದ ಇಂದು ಯುವಜನತೆ ದೂರ ಸರಿಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಯುವಜನರನ್ನೂ ಒಳಗೊಳ್ಳಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಸದ್ಯ, ಜಿಲ್ಲೆಯಲ್ಲಿ 3 ಸಾವಿರ ಸದಸ್ಯರಿದ್ದು, ಸದಸ್ಯತ್ವವನ್ನು 5 ಸಾವಿರಕ್ಕೆ ಹೆಚ್ಚಿಸಲಾಗುವುದು’ ಎಂದರು.

ಘಟಕದ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ, ‘ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ ಆಚರಿಸಿದ್ದು, ಎಂ.ಜಿ.ನಾಗರಾಜ್ ಮತ್ತು ಸುಲೋಚನಾ ದಂಪತಿ ಸಾಹಿತ್ಯಕ ಕಾರ್ಯಕ್ರಮ ಮಾಡಿದ್ದು ವಿಶೇಷವಾಗಿತ್ತು’ ಎಂದರು.

ಪದಾಧಿಕಾರಿಗಳಾದ ರೇವತಿ ರಮೇಶ್ ಹಾಗೂ ವಾಸು ರೈ ಭಾಗವಹಿಸಿದ್ದರು.

ಸಾಹಿತ್ಯ ಭವನ ನಿರ್ಮಾಣ: ಟಿ.ಪಿ.ರಮೇಶ್

ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ‘ಮಡಿಕೇರಿಯಲ್ಲಿ ಪರಿಷತ್ತಿನ ಸಾಹಿತ್ಯ ಭವನ ನಿರ್ಮಾಣಕ್ಕೆ ಸಮಿತಿ ರಚಿಸಲಾಗಿದೆ. ಮಹಾ ಪೋಷಕರಾಗಿ ಸಚಿವ ಎನ್.ಎಸ್.ಭೋಸರಾಜು ಶಾಸಕರಾದ ಡಾ.ಮಂತರ್‌ಗೌಡ ಎ.ಎಸ್.ಪೊನ್ನಣ್ಣ ಹಾಗೂ ಇತರರು ಇದ್ದಾರೆ. ₹ 3–4 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು. ಶೈಕ್ಷಣಿಕ ಚಟುವಟಿಕೆಗಳಲ್ಲದ ಕಾರ್ಯಕ್ರಮಗಳಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಬಾರದು ಎಂಬ ಸುತ್ತೋಲೆಯನ್ನು ಸರ್ಕಾರ ವಾಪ‍ಸ್ ಪಡೆಯಬೇಕು ಎಂದು ಒತ್ತಾಯಿಸಿದ ಅವರು ನವೆಂಬರ್  ತಿಂಗಳು ಪೂರ್ತಿ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ನಾಟಕ ಸ್ಪರ್ಧೆ ಪದವಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಕವಿಗೋಷ್ಠಿ ಏರ್ಪಡಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.