ಸಚಿವ ಕೃಷ್ಣ ಬೈರೇಗೌಡ
ಮಡಿಕೇರಿ: ಕೊಡಗಿನಲ್ಲಿ ಭೂಕುಸಿತ ತಡೆಯಲು ₹ 50 ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಸೂಚಿಸಿರುವೆ. ಬಳಿಕ ಸಂಭಾವ್ಯ ಭೂಕುಸಿತ ಪ್ರದೇಶಗಳಲ್ಲಿ ರಕ್ಷಣಾ ಕಾಮಗಾರಿ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 10,776 ಪ್ರಕರಣ ಇತ್ತು. ಈಗ 446ಕ್ಕೆ ಇಳಿದಿದೆ. ಹಾಗೆಯೇ, ತಹಶೀಲ್ದಾರ್‌ರ ನ್ಯಾಯಾಲಯದಲ್ಲಿ 67,857 ಪ್ರಕರಣಗಳಿದ್ದವು. ಈಗ 19,219 ಕ್ಕೆ ಇಳಿಕೆಯಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ಇಲಾಖೆಯ ಕೆಲಸಗಳು ವೇಗವಾಗಿ ನಡೆಯುತ್ತಿವೆ’ ಎಂದರು.
‘ಕೊಡಗಿನಲ್ಲಿ ಪಟ್ಟೆದಾರರ ಹೆಸರಿನಲ್ಲಿರುವ ಭೂಮಿಯನ್ನು ಅವರ ನಿಜವಾದ ವಾರಸುದಾರರಿಗೆ ವರ್ಗಾಯಿಸಲು ಅನುಕೂಲ ಆಗುವಂತೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತರಲಾಗುವುದು. ಇದರಿಂದ ಬಹು ವರ್ಷಗಳಿಂದ ಇಲ್ಲಿನ ಜನರನ್ನು ಕಾಡುತ್ತಿರುವ ಸಮಸ್ಯೆಗೆ ಪರಿಹಾರ ದೊರಕಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.