ಮಡಿಕೇರಿ: ‘ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಕೆಲಸ ಮಾಡದ ನಿಮಗೆ ಏನೂ ಅನ್ನಿಸುವುದಿಲ್ಲವೇ?’ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅಧಿಕಾರಿಗಳನ್ನು ಮಾರ್ಮಿಕವಾಗಿ ಪ್ರಶ್ನಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ ಅವರು, ‘ಕಳೆದ ವರ್ಷ ಮಳೆಯಿಂದ ಹಾನಿಯಾದ ರಸ್ತೆಗಳ ದುರಸ್ತಿಗೆ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಇದುವರೆಗೂ ಏಕೆ ಕೆಲಸ ಆರಂಭ ಮಾಡಿಲ್ಲ’ ಎಂದು ಚಾಟಿ ಬೀಸಿದರು.
‘ಕೆಲಸ ಆಗಿದೆ’ ಎಂದು ಹೇಳಲು ಹೊರಟ ಅಧಿಕಾರಿಗೆ ‘ಸುಳ್ಳು ಹೇಳಿದರೆ ಅಮಾನತು ಮಾಡುವೆ. ನಿಮ್ಮಂತಹ ಅಧಿಕಾರಿಗಳಿಂದ ನಮಗೆ ಕೆಟ್ಟ ಹೆಸರು’ ಎಂದು ಗದರಿಸಿದರು.
‘ಹಣ ಇದ್ದೂ ಇಷ್ಟು ತಡವಾಗಿ ಕೆಲಸ ಮಾಡಲು ನಿಮಗೆ ಏನೂ ಅನ್ನಿಸುವುದಿಲ್ಲವೇ? ಸುಮ್ಮನೇ ನಮಗೆ ಸಮಾಧಾನ ತರಿಸಲೆಂದು ಕೆಲಸ ಮಾಡಬೇಡಿ. ಜನರಿಗೆ ಸೇವೆ ಮಾಡುತ್ತಿದ್ದೇವೆ ಎಂಬ ಭಾವನೆಯಿಂದ ಕೆಲಸ ಮಾಡಿ’ ಎಂದು ಕಿವಿಮಾತನ್ನೂ ಹೇಳಿದರು.
ಇಲಾಖೆಯ ಅಧೀಕ್ಷಕ ಎಂಜಿನಿಯರ್ ವೀಣಾ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ ಸಚಿವ ಭೋಸರಾಜು, ‘ಜಿಲ್ಲೆಗೆ ಬಂದು ಇಲ್ಲಿನ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಬೇಕು. ಬಂದಾಗ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.
ಶಾಸಕ ಎ.ಎಸ್.ಪೊನ್ನಣ್ಣ ಅವರೂ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದವರ ಕೆಲಸಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಕಳೆದ ವರ್ಷದ ಕೆಲಸವನ್ನೇ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಶಾಸಕ ಡಾ.ಮಂತರ್‌ಗೌಡ ಸಹ ಈ ವಿಭಾಗದಲ್ಲಿ ಗುತ್ತಿಗೆದಾರರಿಗೆ ಇನ್ನೂ ಹಣ ಪಾವತಿ ಮಾಡಿಲ್ಲ. ಎಷ್ಟು ಹೇಳಿದರೂ ಕೇಳುತ್ತಿಲ್ಲ. ಕೂಡಲೇ ಇವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್‌ಪ್ರಕಾಶ್ ಮೀನ ಅವರಿಗೆ ಸೂಚಿಸಿದರು.
ರಸ್ತೆಗುಂಡಿಗಳಿಗೆ ಕೂಡಲೇ ವೆಟ್‌ಮಿಕ್ಸ್ ಹಾಕುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದ ಸಚಿವ ಎನ್.ಎಸ್.ಭೋಸರಾಜು, ಇಲಾಖೆಯ ಕಾರ್ಯದರ್ಶಿ ಸತ್ಯನಾರಾಯಣ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿ, ರಸ್ತೆ ಗುಂಡಿ ಮುಚ್ಚುವ ಹೊಸ ತಂತ್ರಜ್ಞಾನವನ್ನು ಕೊಡಗು ಜಿಲ್ಲೆಗೆ ನೀಡುವಂತೆ ಹೇಳಿದರು.
ಹೊಸದಾಗಿ ಕಟ್ಟಬೇಕಿದೆ 200 ಶಾಲಾ ಕೊಠಡಿ
ಕೊಡಗು ಜಿಲ್ಲೆಯಲ್ಲಿ 200 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲವಾಗಿದ್ದು ಹೊಸದಾಗಿಯೇ ನಿರ್ಮಿಸಬೇಕಿದೆ. ಇನ್ನು 1154 ಕೊಠಡಿಗಳನ್ನು ದುರುಸ್ತಿ ಮಾಡಬೇಕಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಂಗಧಾಮಪ್ಪ ತಿಳಿಸಿದರು. ಪ್ರತಿಕ್ರಿಯಿಸಿದ ಸಚಿವ ಎನ್.ಎಸ್.ಭೋಸರಾಜು ‘ನಾನು ಹೇಳಿದ್ದಕ್ಕೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದೀರಿ. ಹೇಳದೇ ಹೋಗಿದ್ದರೆ ಈ ಕೆಲಸ ಮಾಡುತ್ತಿರಲಿಲ್ಲ. ಈ ಕೊಠಡಿಗಳನ್ನು ದುರಸ್ತಿಪಡಿಸಬೇಕು’ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
- ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ!
ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಲ್ಪಸಂಖ್ಯಾತರ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಟ್ಟಡಗಳು ಸುಸ್ಥಿತಿಯಲ್ಲಿವೆ ಎಂದು ಹೇಳಿದರು. ಪ್ರತಿಕ್ರಿಯಿಸಿದ ಸಚಿವ ಎನ್.ಎಸ್.ಭೋಸರಾಜು ‘ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು ಯಾವುದೇ ರೀತಿಯ ಅನಾಹುತ ಆಗದಂತೆ ಮುನ್ನೆಚ್ಚರ ವಹಿಸಬೇಕು. ಒಂದು ವೇಳೆ ಅನಾಹುತ ಸಂಭವಿಸಿದರೆ ಅಧಿಕಾರಿಗಳೆ ಹೊಣೆ’ ಎಂದು ಎಚ್ಚರಿಕೆ ನೀಡಿದರು.
Cut-off box - ಮಳೆಯಿಂದ 2 ಸಾವು 77 ಮನೆಗಳಿಗೆ ಹಾನಿ ಈ ವರ್ಷ ಸುರಿದ ಮಳೆಯಿಂದ ಇಬ್ಬರು ಮೃತಪಟ್ಟಿದ್ದು 77 ಮನೆಗಳಿಗೆ ಹಾನಿಯಾಗಿವೆ. 2364 ವಿದ್ಯುತ್ ಕಂಬಗಳು ಹಾಗೂ 22 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ ಎಂದು ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು. ಅಂಗನವಾಡಿಗಳ 71 ಕೊಠಡಿಗಳು 406 ಶಾಲಾ ಕೊಠಡಿಗಳನ್ನು ತಕ್ಷಣ ರಿಪೇರಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು. ಶಕ್ತಿ ಯೋಜನೆ ಜಾರಿಗೊಂಡ ಬಳಿಕ ಇದುವರೆಗೆ ರಾಜ್ಯದಲ್ಲಿ 500 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ 1.20 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ₹ 50 ಕೋಟಿ ಸರ್ಕಾರ ಭರಿಸಿದೆ ಎಂದು ಹೇಳಿದರು.
Cut-off box - ಗಾಂಜಾ ಹಾವಳಿ ತಡೆಗಟ್ಟಿ; ಮಂತರ್‌ಗೌಡ ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿರುವ ಗಾಂಜಾ ಹಾವಳಿಯನ್ನು ತಡೆಗಟ್ಟಲು ಕಾರ್ಯೊನ್ಮುಖರಾಗಬೇಕು. ಅದರಲ್ಲೂ ಗಾಂಜಾ ಮಾರಾಟ ಮತ್ತು ಸೇವನೆ ಕುರಿತು ಬೀಟ್ ಪೊಲೀಸರು ಹೆಚ್ಚಿನ ಗಮನ ಹರಿಸಬೇಕು’ ಎಂದು ಶಾಸಕ ಡಾ.ಮಂತರ್‌ಗೌಡ ಪೊಲೀಸರಿಗೆ ಸೂಚಿಸಿದರು. ಪೊಲೀಸರಿಗೆ ಮಾಹಿತಿ ನೀಡಿದರೆ ಅವರೇ ಆರೋಪಿಗಳಿಗೆ ಮಾಹಿತಿ ನೀಡಿದವರ ಸುಳಿವು ನೀಡುತ್ತಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಇದು ಸರಿಯಲ್ಲ. ಮಾಹಿತಿ ನೀಡಿದವರ ಗೌಪ್ಯತೆಯನ್ನು ಕಾಪಾಡಬೇಕು ಎಂದು ಸೂಚಿಸಿದರು. ಕನ್ನಂಡಬಾಣೆಯಲ್ಲಿ ಮೆಟ್ಟಿಲುಗಳ ಬದಲಿಗೆ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡುವ ಕುರಿತು ಪರಿಶೀಲಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
Cut-off box - ಇತರೆ ಸೂಚನೆಗಳು * ಕುಶಾಲನಗರದ ಹಳೆ ಸೇತುವೆಯನ್ನು ಅಭಿವೃದ್ಧಿಪಡಿಸಬೇಕು * ರಾಷ್ಟ್ರೀಯ ಹೆದ್ದಾರಿ ಬದಿಯ ಸ್ವಚ್ಛತೆಯನ್ನು ಕಾಪಾಡಬೇಕು * ಜಿಲ್ಲೆಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು * ಸರ್ಕಾರದ ಸೂಚನೆಯಂತೆ ಹೃದಯಾಘಾತಕ್ಕೆ ಒಳಗಾದವರ ಮರಣೋತ್ತರ ಪರೀಕ್ಷೆ ನಡೆಸಬೇಕು * ಅಂಗನವಾಡಿಗಳಿಗೆ ಭೇಟಿ ನೀಡಿ ಮಳೆಯಿಂದ ತೊಂದರೆ ಆಗದಂತೆ ಎಚ್ಚರ ವಹಿಸಬೇಕು * ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.