
ಮಡಿಕೇರಿ: ಫೆ. 28ರಿಂದ ಮಾರ್ಚ್ 17ರವರೆಗೆ ನಡೆಯಲಿರುವ ದ್ವಿತೀಯ ಪಿಯು ಪರೀಕ್ಷೆಗೆ ಕೊಡಗು ಜಿಲ್ಲೆಯಲ್ಲಿ 5,255 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 4,809 ಇದೇ ಮೊದಲ ಬಾರಿಗೆ ಪಿಯು ಪರೀಕ್ಷೆ ಬರೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 18 ಕೇಂದ್ರಗಳನ್ನು ನಿಗದಿ ಮಾಡಲಾಗಿದೆ. ಆ ಪೈಕಿ ಸೋಮವಾರಪೇಟೆ ತಾಲ್ಲೂಕಿನಲ್ಲಿ 8, ಮಡಿಕೇರಿ ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ತಲಾ 5 ಕೇಂದ್ರಗಳಿವೆ.
ಈ ಕುರಿತು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಇಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಯಾವುದೇ ರೀತಿ ಗೊಂದಲಗಳಿಗೆ ಆಸ್ಪದ ಆಗದಂತೆ ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಪರೀಕ್ಷೆಗೆ ಮೇಲ್ವಿಚಾರಕರ ನಿಯೋಜನೆ, ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿಗಳ ನಿಯೋಜನೆ ಸೇರಿದಂತೆ ಪಿಯು ಪರೀಕ್ಷಾ ಪ್ರಾಧಿಕಾರದ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸುವಂತೆ ಹೇಳಿದರು.
ಪರೀಕ್ಷೆಯನ್ನು ಪಾರದರ್ಶಕವಾಗಿಯೇ ನಡೆಸಬೇಕು. ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸುವುದು ಸೇರಿದಂತೆ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳ ಚಲನವಲನಗಳಿಗೆ ಸಂಬಂಧಿಸಿದಂತೆ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಹಾಗೂ ಕೊಠಡಿ ಸಂಖ್ಯೆ ಖಾತರಿ ಪಡಿಸಿಕೊಳ್ಳಲು ಪರೀಕ್ಷಾ ಕೇಂದ್ರದ ನಾಲ್ಕೈದು ಕಡೆಗಳಲ್ಲಿ ಮಾಹಿತಿ ಒದಗಿಸುವ ವ್ಯವಸ್ಥೆ ಆಗಬೇಕು ಎಂದರು.
ಪರೀಕ್ಷಾ ದಿನಗಳಲ್ಲಿ ಅಗತ್ಯ ವಾಹನ ನಿಯೋಜಿಸುವುದು, ಜೊತೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವುದು, ಶುಶ್ರೂಷಕರನ್ನು ನೇಮಿಸುವಂತೆಯೂ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಜೆ.ದಿವಾಕರ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಸಿದ್ಧರಾಜು ಬೆಳ್ಳಯ್ಯ, ಹಂಡ್ರಂಗಿ ನಾಗರಾಜು ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್, ತಹಶೀಲ್ದಾರರಾದ ಶ್ರೀಧರ, ಕಿರಣ್ ಗೌರಯ್ಯ, ಪೊಲೀಸ್ ಇನ್ಸ್‍ಪೆಕ್ಟರ್ ರಾಜು, ವಿವಿಧ ಕಾಲೇಜಿನ ಪ್ರಾಂಶುಪಾಲರು, ಮೇಲ್ವಿಚಾರಕರು ಭಾಗವಹಿಸಿದ್ದರು.
ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ ಸುತ್ತ 200 ಮೀ ವ್ಯಾಪ್ತಿಯಲ್ಲಿ ಪ್ರತಿಬಂಧಕ ಜಾರಿಗೊಳಿಸಬೇಕಿದೆ. ಜೆರಾಕ್ಸ್ ಅಂಗಡಿಗಳನ್ನು ಸಹ ಮುಚ್ಚಿಸಲಾಗುತ್ತದೆವಿಜಯ್ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಕಳೆದ ಬಾರಿಯಂತೆ ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪದವಿ ಪೂರ್ವ ಶಿಕ್ಷಣ ಕಂದಾಯ ಪೊಲೀಸ್ ಖಜಾನೆ ಸಾರಿಗೆ ಸೆಸ್ಕ್ ಆರೋಗ್ಯ ಹೀಗೆ ವಿವಿಧ ಇಲಾಖೆಗಳು ತಂಡವಾಗಿ ಕಾರ್ಯನಿರ್ವಹಿಸಲಾಗುತ್ತದೆ’ ಎಂದು ಹೇಳಿದರು.
ಮಡಿಕೇರಿ ತಾಲ್ಲೂಕಿನ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂತ ಮೈಕಲರ ಪದವಿಪೂರ್ವ ಕಾಲೇಜು ನಾಪೋಕ್ಲು ಸರ್ಕಾರಿ ಪದವಿಪೂರ್ವ ಕಾಲೇಜು ಮೂರ್ನಾಡು ಪದವಿಪೂರ್ವ ಕಾಲೇಜು ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜು. ಸೋಮವಾರಪೇಟೆ ತಾಲ್ಲೂಕಿನ ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಸುಂಟಿಕೊಪ್ಪ ಕುಶಾಲನಗರ ಕೂಡಿಗೆ ಹಾಗೂ ನೆಲ್ಯಹುದಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜುಗಳು ಕೊಡ್ಲಿಪೇಟೆ ಮತ್ತು ಶನಿವಾರಂತೆ ಪದವಿಪೂರ್ವ ಕಾಲೇಜು ಹಾಗೂ ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜುಗಳು ವಿರಾಜಪೇಟೆ ತಾಲ್ಲೂಕಿನಲ್ಲಿ ವಿರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು. ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಗೋಣಿಕೊಪ್ಪಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.