
ಮಡಿಕೇರಿ: ಆಗೊಮ್ಮೆ ಈಗೊಮ್ಮೆ ಕವಿಯುತ್ತಿದ್ದ ಮೋಡಗಳ ನಡುವೆ ಪೂರ್ಣಚಂದಿರ ಬೀರುತ್ತಿದ್ದ ಬೆಳದಿಂಗಳಲ್ಲಿ, ಚುಮುಚುಮು ಚಳಿಯ ಕುಳಿರ್ಗಾಳಿಯ ಮಧ್ಯೆ ಗುರುವಾರ ರಾತ್ರಿ ಜಿಲ್ಲೆಯಾದ್ಯಂತ ‘ಪುತ್ತರಿ’ (ಹುತ್ತರಿ) ಹಬ್ಬದ ಸಂಭ್ರಮ ಆರಂಭವಾಯಿತು.
ಕೆಲವೆಡೆ ಹಾಲು ಚೆಲ್ಲಿದಂತಹ ಬೆಳದಿಂಗಳಿದ್ದರೆ, ಮತ್ತೆ ಕೆಲವೆಡೆ ಮೋಡ ಮುಸುಕಿದ ವಾತಾವರಣವಿದ್ದು, ಮಳೆಯ ಭೀತಿಯೂ ಇತ್ತು. ಇಂತಹ ವಾತಾವರಣದ ಮಧ್ಯೆ ಮೊದಲಿಗೆ ತಾಲ್ಲೂಕಿನ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇಗುದಲ್ಲಿ ನೆರೆ ಕಟ್ಟುವುದು, ಕದಿರು ತೆಗೆಯುವುದು ನಡೆಯುತ್ತಿದ್ದಂತೆ ಎಲ್ಲೆಡೆ ಹಬ್ಬಕ್ಕೆ ಚಾಲನೆ ದೊರೆಯಿತು.
ನಂತರ, ಇತರೆ ದೇಗುಲಗಳಲ್ಲಿ, ಭತ್ತದ ಗದ್ದೆಗಳಲ್ಲಿ ಜನರು ಭತ್ತದ ಕದಿರು ತೆಗೆಯುವಿಕೆಯುವ ಮೂಲಕ ಸಂಭ್ರಮಿಸಿದರು. ‘ಪೊಲಿ ಪೊಲಿಯೇ ದೇವ’ ಎಂಬ ಉದ್ಘೋಷಗಳು ಮುಗಿಲು ಮುಟ್ಟಿದವು. ಬಾಣಬಿರುಸುಗಳು ಬಾನಂಗಲದಲ್ಲಿ ಬೆಳಕಿನ ರಂಗವಲ್ಲಿಯನ್ನೇ ಹಾಕಿತು.
ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮೊದಲಿಗೆ ಪುತ್ತರಿ ಹಬ್ಬ ನಡೆದ ನಂತರ ಇಲ್ಲಿನ ಓಂಕಾರೇಶ್ವರ ದೇಗುಲ ಸೇರಿದಂತೆ ವಿವಿಧ ದೇವಾಲಯಗಳು, ಕೊಡವ, ಗೌಡ ಸಮಾಜಗಳು, ಐನ್‌ಮನೆಗಳು, ಭತ್ತದ ಗದ್ದೆಗಳಲ್ಲಿ ಸಾಮೂಹಿಕ ಆಚರಣೆಗಳು ನಡೆದವು.
ಕೋವಿಯಿಂದ ಹೊಮ್ಮಿದ ಕುಶಾಲತೋಪುಗಳು ಹಬ್ಬದ ಸಂಭ್ರಮಕ್ಕೆ ಕಳಸವನ್ನಿಟ್ಟವು. ಕೊಡಗಿನ ಮನೆಮನೆಗಳಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಇದಕ್ಕೂ ಮುನ್ನ ಎಲ್ಲೆಡೆ ಖರೀದಿ ಭರಾಟೆ ನಡೆಯಿತು. ಹೂಗಳ ಮಾರಾಟ ಹೆಚ್ಚಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಬಂದ ವ್ಯಾಪಾರಸ್ಥರು ರಸ್ತೆಬದಿಗಳಲ್ಲಿ ಹೂಗಳನ್ನಿಟ್ಟುಕೊಂಡು ವ್ಯಾಪಾರ ನಡೆಸಿದರು.
ಭತ್ತದ ಗದ್ದೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕದಿರು ತೆಗೆಯುವುದಕ್ಕೂ ಮುನ್ನ ಭತ್ತದ ಸಸಿಗಳನ್ನು ಭಕ್ತಿಭಾವದಿಂದ ಜನರು ಪೂಜಿಸಿ, ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಂಡರು.
ಬಹುತೇಕ ಎಲ್ಲರ ಮನೆಗಳಲ್ಲೂ ಪಾಯಸ, ತಂಬಿಟ್ಟು ಮೊದಲಾದ ವಿಶೇಷ ತಿನಿಸುಗಳನ್ನು ತಯಾರಿಸಿದ್ದರು. ಬಂಧು ಬಾಂಧವರನ್ನು ಮನೆಗೆ ಆಹ್ವಾನಿಸಿದ್ದರು. ಎಲ್ಲೆಡೆ ಆರಂಭವಾಗಿರುವ ಹಬ್ಬದ ಸಂಭ್ರಮ ಇನ್ನೂ ಕೆಲವು ದಿನಗಳ ಮುಂದುವರಿಯಲಿದೆ.
ಕೋಲಾಟ ಇಂದು: ಹುತ್ತರಿ ಕೋಲಾಟವು ಡಿ. 5 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕೋಟೆ ಆವರಣದಲ್ಲಿ ನಡೆಯಲಿದೆ. ಭಾನುವಾರ ನಾಪೋಕ್ಲು ಸಮೀಪದ ಬಿದ್ದಾಟಂಡ ವಾಡೆಯಲ್ಲಿ ಪುತ್ತರಿ ಕೋಲಾಟ ನಡೆಯಲಿದೆ. ಮೂರ್ನಾಡು, ಭಾಗಮಂಡಲದ ನಾಡು ಮಂದ್‌ಗಳಲ್ಲೂ ಪುತ್ತರಿ ಕೋಲಾಟ ನಡೆಯಲಿವೆ.
ಇಂದು ನಡೆಯಲಿದೆ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲೆಲ್ಲೂ ಪಟಾಕಿ ಸಿಡಿಸಿ ಸಂತಸ ಬಾನಂಗಲದಲ್ಲಿ ರಂಗವಲ್ಲಿ ಬಿಡಿಸಿದ ಬಾನ ಬಿರುಸುಗಳು
ಶಾಸಕ ಭೇಟಿ ಕಕ್ಕಬ್ಬೆಯ ಪಾಡಿ ಇಗ್ಗುತಪ್ಪ ದೇವಸ್ಥಾನಕ್ಕೆ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ‘ನಾಡಿನ ಸಮಸ್ತ ಜನತೆಗೆ ಇಗ್ಗುತಪ್ಪ ದೇವರು ಸುಖ-ಶಾಂತಿ ಹಾಗೂ ಸುಭಿಕ್ಷೆಯನ್ನು ಕರುಣಿಸಲಿ’ ಎಂದು ಅವರು ಹೇಳಿದರು. ಈ ವೇಳೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ದೇವಸ್ಥಾನ ತಕ್ಕ ಮುಖ್ಯಸ್ಥರು ಪ್ರಮುಖರು ಕಲಿಯಂಡ ಸಂಪನ್ ಅಯ್ಯಪ್ಪ ಅರುಣ್ ಬೇಬ ಭಾಗವಹಿಸಿದ್ದರು
ಮೃತ್ಯುಂಜಯ ದೇವಸ್ಥಾನದಲ್ಲಿ ಹುತ್ತರಿ ಗೋಣಿಕೊಪ್ಪಲು: ಕೊಡಗಿನ ವಿಜೃಂಭಣೆಯ ಹುತ್ತರಿ ಹಬ್ಬವನ್ನು ಭತ್ತದ ಕದಿರು ತೆಗೆಯುವ ಮೂಲಕ ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನದಲ್ಲಿ ಗುರುವಾರ ಸಂಜೆ ವಿಜೃಂಭಣೆಯಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಊರಿನ ಪ್ರಮುಖರು ಸೇರಿ ಸಂಜೆ ಕೊಡವ ವಾಲಗದ ಮೂಲಕ ಗದ್ದೆಗೆ ತೆರಳಿ ‘ಪೊಲಿ ಪೊಲಿ’ ದೇವ ಎಂದು ಕೂಗುತ್ತಾ ಕದಿರನ್ನು ಕೈಯಲ್ಲಿ ಹಿಡಿದು ಮನೆಯತ್ತ ದೇವಸ್ಥಾನದ ಬಳಿಗೆ ಬಂದರು. ಬಳಿಕ ಕದಿರನ್ನು ದೇವಸ್ಥಾನಕ್ಕೆ ಅರ್ಪಿಸಿ ಅಲ್ಲಿಂದ ಹಬ್ಬದ ಶುಭಾಶಯ ಕೋರುತ್ತಾ ಮನೆಗೆ ತೆರಳಿದರು. ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.