
ನಾಪೋಕ್ಲು: ಧಾನ್ಯಲಕ್ಷ್ಮಿಯನ್ನುಸಂಭ್ರಮದಿಂದ ಬರಮಾಡಿಕೊಳ್ಳುವ ಕೊಡಗಿನ ಪುತ್ತರಿ ಹಬ್ಬವನ್ನು ಡಿಸೆಂಬರ್ 4 ರಂದು ಆಚರಿಸಲು ಬುಧವಾರ ನಿರ್ಧರಿಸಲಾಯಿತು.
ಇಲ್ಲಿಗೆ ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಜ್ಯೋತಿಷ್ಯದ ಪ್ರಕಾರ ದಿನ ನಿಗದಿ ಮಾಡಲಾಯಿತು. ದೇವಾಲಯದ ತಕ್ಕ ಮುಖ್ಯಸ್ಥರು, ವ್ಯವಸ್ಥಾಪನಾ ಸಮಿತಿ ಪ್ರಮುಖರ ಹಾಗೂ ಭಕ್ತರ ಸಮ್ಮುಖದಲ್ಲಿ ಅಮ್ಮಂಗೇರಿ ಜ್ಯೋತಿಷಿ ಶಶಿಕುಮಾರ್ ರಾಶಿ ಫಲ ಪರಿಶೀಲಿಸಿ ದಿನ ನಿಗದಿ ಮಾಡಿದರು.
ಇಗ್ಗುತಪ್ಪ ಸನ್ನಿಧಿಯಲ್ಲಿ ಡಿಸೆಂಬರ್ 4 ರಂದು ಗುರುವಾರ ಹುಣ್ಣಿಮೆಯ ದಿನ ಹಬ್ಬ ಆಚರಣೆ ನಡೆಯಲಿದೆ. ರಾತ್ರಿ 8.10 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.10 ಗಂಟೆಗೆ ಕದಿರು ತೆಗೆಯುವುದು. ಅನ್ನಪ್ರಸಾದಕ್ಕೆ 10.10 ಗಂಟೆಗೆ ಮುಹೂರ್ತ ನಿಗದಿಪಡಿಸಲಾಯಿತು.
ಸಾರ್ವಜನಿಕರಿಗೆ ರಾತ್ರಿ 8.40 ಗಂಟೆಗೆ ನೆರೆ ಕಟ್ಟುವುದು,ರಾತ್ರಿ 9.40 ಗಂಟೆಗೆ ಕದಿರು ತೆಗೆಯುವುದು,ಭೋಜನಕ್ಕೆ ರಾತ್ರಿ 10.40 ಗಂಟೆಗೆ ಮುಹೂರ್ತ ನಿಗದಿಯಗಿದೆ.
ಡಿಸೆಂಬರ್ 4 ರಂದು ಹಗಲು ಇಗ್ಗುತ್ತಪ್ಪ ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ ನಡೆಯಲಿದ್ದು, ಹಬ್ಬದವರೆಗೆ ದೇವರ ಕಟ್ಟು ವಿಧಿಸಲಾಗಿದ್ದು, ಭಕ್ತರು ಶ್ರದ್ಧಾ ಭಕ್ತಿಯಿಂದ ನಿಯಮ ಪಾಲನೆ ಮಾಡುವಂತೆ ವಿನಂತಿಸಿಕೊಳ್ಳಲಾಯಿತು. ದೇವಾಲಯದ ಅಭಿವೃದ್ಧಿ ಕಾರ್ಯ, ಬ್ರಹ್ಮ ಕಲಶೋತ್ಸವ ಹಾಗೂ ಪೂಜಾ ವಿಧಿಗಳ ಬಗ್ಗೆ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಪಡೆದುಕೊಳ್ಳಲಾಯಿತು.
ಜ್ಯೋತಿಷ್ಯ ಶಶಿಕುಮಾರ್, ಕಣಿಯರ ನಾಣಯ್ಯ ಕುಟುಂಬದವರು ದಿನ ನಿಗದಿ ಮಾಡಿದರು. ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ದಿನ ನಿಗದಿ ಪಟ್ಟಿಗೆ ವಿಶೇಷ ಪ್ರಾರ್ಥನೆಯ ಮೂಲಕ ಅರ್ಚಕರಿಗೆ ನೀಡಿದರು. ಅರ್ಚಕ ಜಗದೀಶ್ ಪೂಜೆಸಲ್ಲಿಸಿ ತಕ್ಕ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ದೇವಾಲಯದ ಆಡಳಿತ ಅಧಿಕಾರಿ ರವಿಕುಮಾರ್ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾಚಮಂಡ ಪುವಣ್ಣ ಸಮಿತಿ ಸದಸ್ಯರು, ಪ್ರಮುಖರಾದ ಕಲ್ಯಾಟಂಡ ಮುತ್ತಪ್ಪ, ಕಾಂಡಂಡ ಜೋಯಪ್ಪ , ಪಾಂಡಂಡ ನರೇಶ್ , ತಕ್ಕ ಮುಖ್ಯಸ್ಥರು ಹಾಗೂ ಹಾಗೂ ಭಕ್ತರು ಉಪಸ್ಥಿತರಿದ್ದರು.
‘ನಿಗದಿತ ಸಮಯದಲ್ಲೇ ಆಚರಿಸಿ’
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ‘ಹಿರಿಯರ ಕಾಲದಿಂದ ಆಚರಿಸಿಕೊಂಡು ಬಂದ ಆಚರಣೆಯನ್ನು ಯಥಾವತ್ತಾಗಿ ಪಾಲಿಸಿ. ಧಾನ್ಯ ಲಕ್ಷ್ಮಿಯನ್ನು ಮನೆಗೆ ಕರೆತರುವ ಹಬ್ಬವನ್ನು ಎಲ್ಲರೂ ನಿಗದಿ ಪಡಿಸಿದ ಸಮಯದಲ್ಲೇ ಆಚರಿಸುವಂತಾಗಬೇಕು. ದೇಶಕಟ್ಟನ್ನು ಎಲ್ಲರೂ ಪಾಲಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.