ಮಡಿಕೇರಿ: ಗೌರಿ ಗಣೇಶೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲು ಇಂದು ಕೊಡಗಿನ ಎಲ್ಲೆಡೆ ಸಿದ್ಧತೆಗಳು ಭರದಿಂದ ನಡೆದಿವೆ. ಮಡಿಕೇರಿ ನಗರದ ಬಹುತೇಕ ಬಡಾವಣೆಗಳಲ್ಲಿ ಸಾರ್ವಜನಿಕವಾಗಿ ಗೌರಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.
ನಗರದ ಬಸವೇಶ್ವರ ದೇಗುಲ, ಚೌಡೇಶ್ವರಿ ದೇಗುಲ, ಕನ್ನಿಕಾ ಪರಮೇಶ್ವರಿ ದೇಗುಲ ಸೇರಿದಂತೆ ಹಲವು ದೇಗುಲಗಳಲ್ಲಿ ಗೌರಿ ಮೂರ್ತಿಯ ಪ್ರತಿಷ್ಠಾಪನೆ ಮಂಗಳವಾರ ನಡೆದಿದ್ದು, ಮಹಿಳೆಯರು ಬಾಗಿನ ನೀಡಿ ಭಕ್ತಿಭಾವ ಮೆರೆದರು.
ಅತ್ಯಂತ ವಿಜೃಂಭಣೆಯಿಂದ ಕೂರಿಸುವ ಕಡೆಗಳಲ್ಲಿಯಂತೂ ಉತ್ಸವದ ಮಾದರಿಯಲ್ಲಿ ಸಂಭ್ರಮ ಮನೆ ಮಾಡಿದೆ. ನೂರಾರು ಮಂದಿ ಸುಮಾರು 2 ತಿಂಗಳುಗಳ ಹಿಂದಿನಿಂದಲೇ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದರು. ಈಗ ಅದು ಪೂರ್ಣಗೊಂಡಿದ್ದು, ಗೌರಿ, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ.
ಮತ್ತೊಂದೆಡೆ ಅಧಿಕಾರಿಗಳು ಹಾಗೂ ಪೊಲೀಸರು ಎಲ್ಲ ಗಣೇಶೋತ್ಸವದ ಮೇಲೆ ಹದ್ದಿನ ಕಣ್ಣೆಟ್ಟಿದ್ದಾರೆ. ಯಾವುದೇ ಕಾರಣಕ್ಕೂ ‘ಪ್ಲಾಸ್ಟಿಕ್ ಆಫ್ ಪ್ಯಾರೀಸ್’ (ಪಿಒಪಿ) ಮೂರ್ತಿಗಳು ನುಸುಳದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಜೊತೆಗೆ, ಅಪಾಯಕಾರಿ ಬಣ್ಣ ಹಾಕಿದ ಮೂರ್ತಿಗಳ ಬಳಕೆಯ ಮೇಲೂ ನಿಗಾ ಇಟ್ಟಿದ್ದಾರೆ. ಈಗಾಗಲೇ ಅನೇಕ ಸುತ್ತಿನ ಸಭೆಗಳನ್ನು ನಡೆಸಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳಿಗೆ ಪರಿಸರಕ್ಕೆ ಪೂರಕವಾಗಿರುವ ಮಣ್ಣಿನ ಮೂರ್ತಿಗಳನ್ನಷ್ಟೇ ಕೂರಿಸಬೇಕು ಎಂದು ಸೂಚನೆಗಳನ್ನು ನೀಡಿದ್ದಾರೆ.
ಇನ್ನೊಂದೆಡೆ, ನಗರದ ಓಂಕಾರೇಶ್ವರ ದೇಗುಲದ ಸಮೀಪದ ಗೌರಿಕೆರೆಯನ್ನು ಗೌರಿ, ಗಣೇಶ ಮೂರ್ತಿಗಳ ವಿಸರ್ಜನೆಗೆ ಸಿದ್ಧಗೊಳಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಗೌರಿ ಕೆರೆ ಬಿಟ್ಟು ಇನ್ನುಳಿದ ಬೇರೆ ಯಾವುದೇ ಕೆರೆಗಳಲ್ಲೂ ಗೌರಿ, ಗಣೇಶ ಮೂರ್ತಿಗಳನ್ನು ವಿಸರ್ಜಿಸಬಾರದು ಎಂದು ಸೂಚಿಸಲಾಗಿದೆ.
ಗಣೇಶೋತ್ಸವದ ವೇಳೆ ಹೆಚ್ಚು ಡೆಸಿಬಲ್ಸ್ ಹೊರಸೂಸುವ ಧ್ವನಿವರ್ಧಕಗಳನ್ನು, ಡಿ.ಜೆಗಳನ್ನು ಬಳಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸಾಕಷ್ಟು ಬಾರಿ ಸೂಚನೆಗಳನ್ನು ನೀಡಿರುವುದಲ್ಲದೇ ಸಭೆಗಳನ್ನೂ ನಡೆಸಿದ್ದಾರೆ. ಶಬ್ದಮಾಲಿನ್ಯದಿಂದ ವೃದ್ಧರು, ಗರ್ಭಿಣಿಯರು, ನವಜಾತಶಿಶುಗಳು ಹಾಗೂ ರೋಗಿಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಕುರಿತು ತಿಳಿ ಹೇಳಿದ್ದಾರೆ. ಹೈಕೋರ್ಟ್ ಸಹ ಈ ಸಂಬಂಧ ಸೂಚಿಸಿದ್ದು, ಎಲ್ಲರೂ ನಿಯಮ ಪಾಲಿಸಲು ಮನವಿಯನ್ನೂ ಮಾಡಿದ್ದಾರೆ. ಶಬ್ದಮಾಲಿನ್ಯ ತಗ್ಗಿಸುವ ಇವರ ಪ್ರಯತ್ನ ಈ ಬಾರಿ ಎಷ್ಟು ಫಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಖರೀದಿ ಭರಾಟೆ ಸೋಮವಾರದಿಂದಲೇ ಜೋರಾಗಿತ್ತು. ಹೂವಿನ ದರವಂತೂ ಗಗನಕ್ಕೇರಿತ್ತು. ಒಂದು ಮಾರು ಹೂವಿಗೆ ₹ 150 ದಾಟಿತ್ತು. ಬಹುತೇಕ ಎಲ್ಲ ಪೂಜಾ ವಸ್ತುಗಳ ಬೆಲೆಗಳೂ ಹೆಚ್ಚಾಗಿವೆ. ದರ ಏರಿಕೆಯ ಮಧ್ಯೆಯೂ ಸಾಮಾನ್ಯ ಜನರು ಹಬ್ಬದ ಆಚರಣೆಗಾಗಿ ಖರೀದಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.
ನಗರದ ವಿಜಯ ವಿನಾಯಕ, ಕೋಟೆ ಮಹಾಗಣಪತಿ ಸೇರಿದಂತೆ ಬಹುತೇಕ ಎಲ್ಲ ದೇಗುಲಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳಿಗಾಗಿ ಸಿದ್ಧತೆಗಳು ಪೂರ್ಣಗೊಂಡಿವೆ. ಹಬ್ಬದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.