
ವಿರಾಜಪೇಟೆ: ‘ಮಿತ ಆಹಾರ ಸೇವನೆ, ಮನೆ ಊಟ, ವ್ಯಾಯಮದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ’ ಎಂದು ಮಕ್ಕಳ ತಜ್ಞ ಡಾ. ಗೌರವ್ ಅಯ್ಯಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಗತಿ ಶಾಲೆಯಲ್ಲಿ ಈಚೆಗೆ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಮಕ್ಕಳಿಗೆ ಕಲಿಕೆಯೊಂದಿಗೆ ಆಹಾರದ ಉಪಯೋಗ ಕುರಿತು ಮಾಹಿತಿ ನೀಡುವ ಪ್ರವೃತ್ತಿ ಪೋಷಕರಲ್ಲಿ ಜಾಗೃತವಾಗಬೇಕು. ವಾತಾವರಣಕ್ಕೆ ಅನುಗುಣವಾಗಿ ಮಕ್ಕಳ ಪಾಲನೆ ಪೋಷಣೆಗೆ ಒತ್ತು ನೀಡಬೇಕು. ಶಾಲೆಗಳಲ್ಲಿ ಕಲಿಕೆಗಾಗಿ ಉತ್ತಮ ವಾತಾವರಣವನ್ನು ಶಾಲಾ ಆಡಳಿತ ಮಂಡಳಿ ಸೃಷ್ಟಿಸುತ್ತದೆ. ಅದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿ ಶಾಲೆಯ ಸಂಸ್ಥಾಪಕ ಮಾದಂಡ ಪೂವಯ್ಯ, ‘ಶಾಲೆ ಪ್ರಗತಿಗೆ ಪೋಷಕರು ಇಟ್ಟಿರುವ ನಂಬಿಕೆ ಮತ್ತು ಭರವಸೆಯೇ ಕಾರಣವಾಗಿದೆ’ ಎಂದರು.
ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ ಅನಂತಶಯನ ಮಾತನಾಡಿ, ‘ಶಾಲೆಗಳು ಜ್ಞಾನ ಪಸರಿಸುವ ದೇವಾಲಯಗಳಿದ್ದಂತೆ. ಕಲಿಕೆಗಾಗಿ ಬರುವ ವಿದ್ಯಾರ್ಥಿಗಳು ಭಕ್ತರಂತೆ’ ಎಂದರು.
ಶಾಲೆಯ ಸಹ ಆಡಳಿತಾಧಿಕಾರಿ ಸುಷ್ಮಾ ತಿಮ್ಮಯ್ಯ ವರದಿ ಮಂಡಿಸಿದರು. ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಶಾಲೆಯ ಆಡಳಿತಾಧಿಕಾರಿ ಮಾದಂಡ ತಿಮ್ಮಯ್ಯ, ಮುಖ್ಯಶಿಕ್ಷಕಿ ಪ್ರತಿಮಾ, ಶಿಕ್ಷಕರಾದ ನಿತ್ಯಾ, ಆಶ್ಮೀಯ ಮತ್ತು ಲಾವಣ್ಯ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.