ADVERTISEMENT

ಕೊಡಗು: ಶಾಲೆಯಲ್ಲಿ ನಳನಳಿಸುತ್ತಿದೆ ತರಕಾರಿ ತೋಟ

ತರಕಾರಿ ಬೆಳೆದ ಪ್ರೌಢಶಾಲಾ ವಿದ್ಯಾರ್ಥಿಗಳು

ಸಿ.ಎಸ್.ಸುರೇಶ್
Published 3 ಜನವರಿ 2026, 6:06 IST
Last Updated 3 ಜನವರಿ 2026, 6:06 IST
ನಾಪೋಕ್ಲು ಸಮೀಪದ ಪಾರಾಣೆ ಪ್ರೌಢಶಾಲೆಯಲ್ಲಿ ತಾಜಾ ತರಕಾರಿ ಬೆಳೆದ ವೃತ್ತಿ ಶಿಕ್ಷಣ ಶಿಕ್ಷಕ ಎಚ್.ಎಲ್. ಬೈರ ಅವರೊಂದಿಗೆ ವಿದ್ಯಾರ್ಥಿಗಳು
ನಾಪೋಕ್ಲು ಸಮೀಪದ ಪಾರಾಣೆ ಪ್ರೌಢಶಾಲೆಯಲ್ಲಿ ತಾಜಾ ತರಕಾರಿ ಬೆಳೆದ ವೃತ್ತಿ ಶಿಕ್ಷಣ ಶಿಕ್ಷಕ ಎಚ್.ಎಲ್. ಬೈರ ಅವರೊಂದಿಗೆ ವಿದ್ಯಾರ್ಥಿಗಳು   

ನಾಪೋಕ್ಲು: ಶಾಲೆಯಲ್ಲಿ ಮಕ್ಕಳ ಬಿಸಿಯೂಟಕ್ಕೆ ತರಕಾರಿ ಬೇಕು. ಮಾರುಕಟ್ಟೆಯಲ್ಲಿ ದುಬಾರಿ ದರ. ಉತ್ತಮ ತರಕಾರಿಗೂ ಬರ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಶಾಲೆಗಳಲ್ಲಿ ತಾಜಾ ತರಕಾರಿ ಬೆಳೆದು ಬಿಸಿಯೂಟಕ್ಕೆ ಬಳಸುತ್ತಿದ್ದಾರೆ. ಪೌಷ್ಟಿಕಾಂಶವುಳ್ಳ ಸೊಪ್ಪು ತರಕಾರಿಗಳನ್ನು ಬೆಳೆದು ಮಕ್ಕಳಿಗೆ ರುಚಿಕರ ಊಟ ನೀಡುತ್ತಿದ್ದಾರೆ.

ಪಠ್ಯದೊಂದಿಗೆ ಕೃಷಿಗೂ ಆದ್ಯತೆ ನೀಡುತ್ತಿರುವ ಕೆಲವು ಶಾಲೆಗಳ ಪೈಕಿ ಸಮೀಪದ ಪಾರಾಣೆ ಪ್ರೌಢಶಾಲೆಯೂ ಒಂದು. ಇಲ್ಲಿ ಹಲವು ವರ್ಷಗಳಿಂದ ವಿದ್ಯಾರ್ಥಿಗಳು ತರಕಾರಿ ತೋಟ ಮಾಡುತ್ತಿದ್ದಾರೆ. ನಾನಾ ಬಗೆಯ ಹಸಿರು ತರಕಾರಿಗಳನ್ನು ಬೆಳೆದು ಶಾಲೆಯ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಬಳಕೆ ಮಾಡುತ್ತಿದ್ದಾರೆ.

ಶಾಲಾ ಮಕ್ಕಳು ಮಾಡಿದ ತರಕಾರಿ ತೋಟದ ಹಿಂದೆ ಪ್ರೇರಣಾ ಶಕ್ತಿಯಾಗಿ ಇಲ್ಲಿನ ವೃತ್ತಿ ಶಿಕ್ಷಣ ಅಧ್ಯಾಪಕ ಎಚ್.ಎಲ್.ಬೈರ ಇದ್ದಾರೆ. ಶಾಲೆಯ ವಿದ್ಯಾರ್ಥಿಗಳ ಸಹಪಠ್ಯ ಚಟುವಟಿಕೆಗಳಲ್ಲಿ ಬೈರ ಬೆನ್ನೆಲುಬಾಗಿದ್ದಾರೆ.

ADVERTISEMENT

ಈ ಶಾಲೆಯ ತರಕಾರಿ ತೋಟ ಒಂದೇ ಬಗೆಯ ತರಕಾರಿಗೆ ಸೀಮಿತವಲ್ಲ. ಬದನೆ, ಮೂಲಂಗಿ, ಬೀನ್ಸ್, ನೂಕೋಲು, ಹಸಿಮೆಣಸು, ಬಟಾಣಿ ಸೇರಿದಂತೆ ಸ್ಥಳೀಯವಾಗಿ ಬೆಳೆಯಬಹುದಾದ ಹಲವು ತರಕಾರಿಗಳಿವೆ. ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಶಾಲೆಯ ಆವರಣದಲ್ಲಿ ಇರುವ ತರಕಾರಿ ತೋಟದಲ್ಲಿ ಭರಪೂರ ತರಕಾರಿ ಲಭ್ಯ. ಪ್ರತಿನಿತ್ಯ ತಾಜಾ ತರಕಾರಿಯನ್ನು ಮಕ್ಕಳ ಬಿಸಿಯೂಟಕ್ಕೆ ಬಳಸಲಾಗುತ್ತಿದೆ.

‘ಎರಡು ವರ್ಷದ ಹಿಂದೆ ಎಲ್ಲಾ ವಿಧದ ತರಕಾರಿಯನ್ನು ಬೆಳೆದಿದ್ದೆ. ಶೇಡ್ ನೆಟ್ ಬಳಸಿ ಸಮೃದ್ಧ ತರಕಾರಿ ಬೆಳೆಯಲಾಗಿತ್ತು. ಈಗ ಶಾಲೆಯ ಆವರಣದಲ್ಲಿ ಹೂದೋಟ ನಿರ್ಮಾಣ ಮಾಡಿರುವುದರಿಂದ ಸ್ಥಳಾವಕಾಶ ಕಡಿಮೆಯಾಗಿದೆ. ಆದರೂ, ಸೀಮಿತ ಸ್ಥಳಾವಕಾಶದಲ್ಲಿ ಸಮೃದ್ಧ ತರಕಾರಿ ಬೆಳೆಯಲಾಗುತ್ತಿದೆ’ ಎನ್ನುತ್ತಾರೆ  ಬೈರ.

ಈ ಗ್ರಾಮೀಣ ಪ್ರೌಢಶಾಲೆಯಲ್ಲಿ ಪ್ರಸಕ್ತ ವರ್ಷ 117 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ವೃತ್ತಿ ಶಿಕ್ಷಣ ಅವಧಿಯಲ್ಲಿ ಹಾಗೂ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳು ಕಾಡು ಮಣ್ಣು, ಸಗಣಿ ಗೊಬ್ಬರ ಸಂಗ್ರಹಿಸುತ್ತಾರೆ. ಇದರಿಂದ ಸಾವಯುವ ತರಕಾರಿಯನ್ನು ಬೆಳೆಯುತ್ತಿದ್ದಾರೆ. ಪಠ್ಯ ವಿಷಯಗಳ ಜೊತೆಯಲ್ಲಿ ತೋಟಗಾರಿಕಾ ಕೃಷಿಯಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಭತ್ತ ಬೇಸಾಯದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ನಾಟಿ ಮಾಡುವುದನ್ನು ಕಲಿಸಿಕೊಡಲಾಗುತ್ತಿದೆ. ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿರುವ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಹಲವು ಬಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ. ನಾಲ್ಕು ಬಾರಿ ರಾಜ್ಯಮಟ್ಟದ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಏಳು ವರ್ಷದ ಹಿಂದೆ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದಲ್ಲಿ ತರಬೇತಿ ನೀಡಿ ಬಾಲಕ ಬಾಲಕಿಯರು ಕಬಡ್ಡಿ, ಕೊಕ್ಕೊ, ಹಾಕಿ ಆಟಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಲಾಗುವ ಬೊಳಕಾಟ್, ಉಮ್ಮತ್ತಾಟ್ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವುದಲ್ಲದೆ ವಿದ್ಯಾರ್ಥಿಗಳಿಗೂ ಪರಿಸರ ಪಾಠವನ್ನು ಬೋಧಿಸುತ್ತಿರುವ ಬೈರ ಅವರಿಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2016 -17ರ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಬೈರ ಅವರ ಪತ್ನಿ ಎಚ್.ಎನ್.ಶಾಂತಿ ಅಯ್ಯಂಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭತ್ತದ ಗದ್ದೆಯಲ್ಲಿ ನಾಟಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.